ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಕದಡಿದರೆ ಕಠಿಣ ಕ್ರಮ: ರಮನ್‌ ಗುಪ್ತಾ

ಹೋಳಿ: ಸಾರ್ವಜನಿಕ ಶಾಂತಿ ಸಭೆಯಲ್ಲಿ ಕಮಿಷನರ್‌ ಗುಪ್ತಾ ಎಚ್ಚರಿಕೆ
Last Updated 6 ಮಾರ್ಚ್ 2023, 14:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೆಲವರ ಮೂರ್ಖತನದಿಂದ ಸಮಾಜದಲ್ಲಿ ಶಾಂತಿ ಕದಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಯಾರೇ ಆಗಿರಲಿ ಅಂತಹ ಕೆಲಸಕ್ಕೆ ಮುಂದಾದರೆ ನಿರ್ದಾಕ್ಷೀಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಮಿಷನರ್‌ ರಮನ್‌ ಗುಪ್ತಾ ಎಚ್ಚರಿಸಿದರು.

ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ಘಟಕದ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ನಗರದ ಹಳೇ ಸಿಎಆರ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ‘ಸಮಾಜದಲ್ಲಿ ಚಿಕ್ಕ ಸಮಸ್ಯೆ ಎದುರಾದರೂ ಕಾನೂನು ಸುವ್ಯವಸ್ಥೆ ಕಾಪಾಡಲು ತೊಂದರೆಯಾಗುತ್ತದೆ. ಬೀದಿಬದಿಯಲ್ಲಿ ಬದುಕು ಕಟ್ಟಿಕೊಂಡವರ ಮೇಲೆ ಪರಿಣಾಮ ಬೀರಿ, ಅವರು ಒಪ್ಪತ್ತಿನ ತುತ್ತಿಗೂ ಪರದಾಡುವಂತಾಗುತ್ತದೆ. ಅವರಿಗೆ ಯಾವುದೇ ಜಾತಿ, ಧರ್ಮವಿರುವುದಿಲ್ಲ. ಮನುಷ್ಯತ್ವದ ನೆಲೆಯಲ್ಲಿ ಹಬ್ಬಗಳನ್ನು ಆಚರಿಸಬೇಕು’ ಎಂದರು.

‘ಏನೇ ಸಮಸ್ಯೆ ಬಂದರೂ ಅದನ್ನು ಪೊಲೀಸರು ಎದುರಿಸಲು ಸಿದ್ಧರಿದ್ದಾರೆ. ಸಂಚಾರ ನಿಯಂತ್ರಣ, ಅಪರಾಧ ಪ್ರಕರಣ ಪತ್ತೆ ಇನ್ನಿತರ ಕೆಲಸದಲ್ಲಿ ನಿರತರಾಗಬೇಕಾದವರು, ರಸ್ತೆಯಲ್ಲಿ ಲಾಠಿ ಹಿಡಿದು ನಿಲ್ಲಬೇಕಾಗುತ್ತದೆ. ನಾವು ಇವತ್ತು ಇಲ್ಲಿರುತ್ತೇವೆ, ನಾಳೆ ಇನ್ನೆಲ್ಲೆಯೋ ವರ್ಗವಾಗುತ್ತೇವೆ. ಆದರೆ, ಗಲಭೆಯ ಪರಿಣಾಮ ಸಾರ್ವಜನಿಕರ ವೈಯಕ್ತಿಕ ಬದುಕನ್ನು ಹಾಳು ಮಾಡುತ್ತದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿಯಬೇಕಾಗುತ್ತದೆ. ಸಮಾಜಕ್ಕೆ ಕಪ್ಪು ಚುಕ್ಕೆ ಅಂಟಿದಂತಾಗುತ್ತದೆ. ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಹೋಳಿ ಅಂಗವಾಗಿ ಈಗಾಗಲೇ ಎಲ್ಲ ಪೊಲೀಸ್‌ ಠಾಣೆ ಹಾಗೂ ವಾರ್ಡ್‌ಮಟ್ಟದಲ್ಲಿ ಸಮಾಜದ ಮುಖಂಡರ ಸಭೆ ನಡೆಸಿ ಚರ್ಚಿಸಲಾಗಿದೆ. ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪನೆ, ಪೆಂಡಾಲ್‌, ಮೆರವಣಿಗೆ ಮಾರ್ಗ, ಮೆರವಣಿಗೆ ಸಮಯ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ತಿಳಿಸಲಾಗಿದೆ. ಪರೀಕ್ಷಾ ಸಮಯವಾಗಿರುವುದರಿಂದ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಸಾಕಷ್ಟು ಮಂದಿ ವಿನಂತಿಸಿದ್ದಾರೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪೊಲೀಸ್‌ ಇಲಾಖೆಯಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ, ಕಲವು ಯುವಕರು ಹಬ್ಬದ ರೀತಿ–ನೀತಿ ಮೀರಿ, ಹೊಸ ರೀತಿಯಲ್ಲಿ ಹಬ್ಬ ಆಚರಿಸಲು ಮುಂದಾಗುತ್ತಿದ್ದಾರೆ. ಅವರು ಜಾಗೃತೆಯಿಂದ ಇರುವುದು ಉತ್ತಮ’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ‘ಕೆಲವು ವರ್ಷಗಳ ಹಿಂದೆ ನಡೆದ ಕಹಿಘಟನೆಯಿಂದಾಗಿ ಹೋಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಜನರು ಹುಬ್ಬಳ್ಳಿ ತೊರೆಯುತ್ತಿದ್ದರು. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಹಲಗೆ ಹಬ್ಬ ಆಚರಿಸಲು ನಿರ್ಧರಿಸಿದರು. ಇದೀಗ ಹಲಗೆ ಹಬ್ಬಕ್ಕೆ 10 ವರ್ಷ. ಕೆಲೆವೆಡೆ ಮುಸ್ಲಿಮರೇ ಹಲಗೆ ಬಾರಿಸಿ ಘೋಷಣೆ ಕೂಗುತ್ತಾರೆ. ಎಲ್ಲ ಧರ್ಮದವರು ಸೇರಿ ಹಬ್ಬ ಆಚರಿಸುತ್ತಿರುವುದು ಸೌಹಾರ್ದದ ಸಂಕೇತ’ ಎಂದು ಅಭಿಪ್ರಾಯಪಟ್ಟರು.

ಕ್ರೈಸ್ತ್ ಧರ್ಮಗುರು ಫಾದರ್ ಅಲ್ವಿನ್ ಡಿಸೋಜಾ, ಯಾವುದೇ ಹಬ್ಬಆಚರಿಸುವುದಕ್ಕಿಂತ ಮೊದಲು ನಾವೆಲ್ಲ ಮಾನವರಾಗಬೇಕು. ಹಬ್ಬ ಇನ್ನೊಬ್ಬರ ಬದುಕಿಗೆ ಬೆಳಕಾಗುವ ದಾರಿದೀಪವಾಗಬೇಕು’ ಎಂದರು.

ಸಿಖ್ ಧರ್ಮಗುರು ಮೇಜರ್ ಗ್ಯಾನಿ ಮೇಜರಸಿಂಗ್, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ವಿಠ್ಠಲ ಲದ್ವಾ, ಮಹೇಂದ್ರ ಸಿಂಘಿ, ಅಲ್ತಾಫ್‌ ಕಿತ್ತೂರು, ಡಿ.ಚವ್ಹಾಣ್‌, ಭಾಸ್ಕರ ಜಿತೂರಿ, ಮಾರುತಿ ದೊಡ್ಡಮನಿ ಮಾತನಾಡಿದರು. ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಡಿಸಿಪಿಗಳಾದ ರಾಜೀವ್‌ ಎಂ., ಗೋಪಾಲ ಬ್ಯಾಕೋಡ್‌ ಇದ್ದರು.

‘ಶಾಲೆಯಲ್ಲಿ ಗಾಂಜಾ ಬಳಕೆ; ಆತಂಕದ ಸಂಗತಿ’

‘ಹುಬ್ಬಳ್ಳಿಯಲ್ಲಿ ಯುವ ಸಮುದಾಯ ಹಾಗೂ ಮಕ್ಕಳಲ್ಲಿ ಗಾಂಜಾ ಬಳಕೆ ಹೆಚ್ಚುತ್ತಿದ್ದು, ವ್ಯಸನಿಗಳಾಗಿ ಬದಲಾಗುತ್ತಿದ್ದಾರೆ. ಗಾಂಜಾ ಸಾಗಾಟ, ಮಾರಾಟ ತಡೆಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ರಾಯನಾಳ ವಿರಕ್ತಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

‘ಮಕ್ಕಳಲ್ಲಾಗಿರುವ ಬದಲಾವಣೆಯನ್ನು ಕಂಡು ಕೆಲವು ಪೋಷಕರು ಅವರನ್ನು ಮಠಕ್ಕೆ ಕರೆದುಕೊಂಡು ಬರುತ್ತಾರೆ. ಅವರನ್ನು ವಿಶ್ವಾಸದಿಂದ ಮಾತನಾಡಿಸಿದಾಗ ಗಾಂಜಾ ವ್ಯಸನಿಗಳಾಗಿದ್ದು ತಿಳಿಯುತ್ತದೆ. ಶಾಲೆಗೆ ಹೋಗುವ ಹದನೈದು, ಹದಿನಾರು ವರ್ಷದ ಮಕ್ಕಳು ಚಟಕ್ಕೆ ದಾಸರಾಗುತ್ತಿರುವುದು ಆತಂಕದ ಸಂಗತಿ. ಶಾಲೆಗಳಲ್ಲಿಯೇ ಗಾಂಜಾ ಪೂರೈಕೆಯಾಗುತ್ತಿದ್ದು, ಪೊಲೀಸರು ಆಗಾಗ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಯಾವ ಮೂಲದಿಂದ‌ ಪೂರೈಕೆಯಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಬೇಕು’ ಎಂದು ವಿನಂತಿಸಿದರು.

‘ಹಬ್ಬದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಾದ ಡಿಜೆ ಬಳಕೆ ಕೈಬಿಡಬೇಕು. ಭಾರತೀಯ ವಾದ್ಯಮೇಳಗಳು ಎಲ್ಲೆಡೆ ಮೊಳಗುವಂತಾಗಲಿ. ರಾಸಾಯನಿಕ ಬಣ್ಣದ ಬದಲು ನೈಸರ್ಗಿಕ ಬಣ್ಣ ಬಳಸಿ, ಎಲ್ಲರೂ ಶಾಂತಿಯಿಂದ ಹಬ್ಬ ಆಚರಿಸೋಣ. ಇಲ್ಲದಿದ್ದರೆ, ಪೊಲೀಸರು ರಸ್ತೆಗೆ ಬಂದು ಲಾಠಿ ಹಿಡಿಯುತ್ತಾರೆ’ ಎಂದರು.

ಹುಬ್ಬಳ್ಳಿಯಲ್ಲಿ ಎಲ್ಲ ಧರ್ಮದವರು ಎಲ್ಲ ಹಬ್ಬವನ್ನು ಭಾವೈಕ್ಯದಿಂದ ಆಚರಿಸುತ್ತಾರೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕು ನಡೆಸುತ್ತಿರುವುದು ದೇಶಕ್ಕೆ ಮಾದರಿ
–ತಾಜುದ್ದೀನ್ ಖಾದ್ರಿ, ಮುಸ್ಲಿಂ ಧರ್ಮಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT