ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದೇಶ ಸೇರಿಸಲು ಅಧ್ಯಯನ ಸಮಿತಿ ರಚನೆ

ಪಾಲಿಕೆಯಿಂದ ಹೊರಗುಳಿದ ಪ್ರದೇಶಗಳನ್ನು ಸೇರಿಸಲು ವಿಶೇಷ ಸಭೆ
Last Updated 25 ಜನವರಿ 2023, 5:26 IST
ಅಕ್ಷರ ಗಾತ್ರ

ಧಾರವಾಡ: ಪಾಲಿಕೆ ಆಡಳಿತ ವ್ಯಾಪ್ತಿಯಿಂದ ಹೊರಗುಳಿದ ಕೆಲ ಪ್ರದೇಶಗಳನ್ನು ಸೇರಿಸಿಕೊಳ್ಳಲು ಅನುಕೂಲವಾಗುವಂತೆ ರಚಿಸಲಾಗಿರುವ ಅಧ್ಯಯನ ಸಮಿತಿಯ ವರದಿಯನ್ನು ಸಾಮಾನ್ಯ ಸಭೆಯ ಅನುಮೋದನೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆಯ ಸಾಮಾನ್ಯ ಸಭೆ ನಿರ್ಧರಿಸಿತು.

ಪಾಲಿಕೆ ವ್ಯಾಪ್ತಿಯಿಂದ ಹೊರಗುಳಿದ ಗ್ರಾಮಗಳನ್ನು ಸೇರಿಸಿಕೊಳ್ಳುವ ವಿಷಯವಾಗಿ ಮಂಗಳವಾರ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಪಾಲಿಕೆ ರಚನೆ ವೇಳೆ ಅವಳಿನಗರದ 51 ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿತ್ತು. ಈ ಪೈಕಿ 27 ಗ್ರಾಮಗಳು ಪೂರ್ಣಪ್ರಮಾಣದಲ್ಲಿ ಹಾಗೂ 24 ಗ್ರಾಮಗಳು ಭಾಗಶಃ ಪಾಲಿಕೆ ಅಧಿನಕ್ಕೆ ಒಳಪಟ್ಟಿದ್ದವು. ಆದರೆ ಗ್ರಾಮಗಳ ಸರ್ವೆ ಸಂಖ್ಯೆಗಳು ಪಾಲಿಕೆ ವ್ಯಾಪ್ತಿಗೆ ಒಳಪಡದ ಕಾರಣ ಅಲ್ಲಿನ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಪಾಲಿಕೆಯ ಹಿರಿಯ ಸದಸ್ಯರು, ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ, ಮುಂದಿನ ಸಭೆಗೆ ವರದಿ ಮಂಡಿಸುವಂತೆ ಮೇಯರ್ ಈರೇಶ ಅಂಚಟಗೇರಿ ಈ ಆದೇಶ ಹೊರಡಿಸಿದ್ದಾರೆ.

ಪಾಲಿಕೆ ವ್ಯಾಪ್ತಿಗೆ ಕೆಲ ಗ್ರಾಮಗಳು ಒಳಪಟ್ಟಿವೆ. ಅಲ್ಲಿನ ಜನರೂ ಪಾಲಿಕೆ ವ್ಯಾಪ್ತಿಯಲ್ಲಿದ್ದಾರೆ. ಆದರೆ ಅದೇ ಗ್ರಾಮದವರಿಗೆ ಸೇರಿದ ಕೆಲ ಸರ್ವೇ ಸಂಖ್ಯೆ ಪಾಲಿಕೆಗೆ ಮಾತ್ರವಲ್ಲ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದಲೂ ಹೊರಗುಳಿದಿವೆ. ಇದರಿಂದಾಗಿ ಈ ಸರ್ವೇ ಸಂಖ್ಯೆ ಏನೇ ಮಾಡಿದರೂ ಮೂಲ ಸೌಕರ್ಯ ಸಿಗುತ್ತಿಲ್ಲ. ಇದಕ್ಕೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೊಸ ಪ್ರದೇಶಗಳನ್ನು ಸೇರಿಸಿಕೊಳ್ಳುವುದರಿಂದ ಬಜೆಟ್‌ ಮೇಲೆ ಆಗುವ ಪರಿಣಾಮವನ್ನು ಅವಲೋಕಿಸಬೇಕು ಎಂದು ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಸದಸ್ಯರಾದ ಶಂಭು ಸಾಲಮನಿ, ವೀರಣ್ಣ ಸವಡಿ, ರಾಜಣ್ಣ ಕೊರವಿ, ಕವಿತಾ ಕಬ್ಬೇರ್, ಸುರ್ವಣ ಕಲಕುಂಟ್ಲ, ಮಯೂರ ಮೋರೆ ಸೇರಿದಂತೆ ಇತರರು ಒತ್ತಾಯಿಸಿದರು.

ಸದಸ್ಯ ವೀರಣ್ಣ ಸವಡಿ ಮಾತನಾಡಿ, ‘ಪಾಲಿಕೆ ವ್ಯಾಪ್ತಿಯಿಂದ ಹೊರಗುಳಿದ ಕಂದಾಯ ಗ್ರಾಮಗಳ ಸರ್ವೇ ಸಂಖ್ಯೆ ಸೇರಿಸುವ ವಿಚಾರ ಅತ್ಯಂತ ಸೂಕ್ತವಾಗಿದೆ. ಆದರೆ ಈ ಕುರಿತು ಸೂಕ್ತ ಮಾಹಿತಿಯೇ ಇಲ್ಲದೆ ಚರ್ಚೆ ನಡೆಸುವುದು ಅಸಾಧ್ಯ. ಪಾಲಿಕೆಯು ಒಟ್ಟು 203 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದರಲ್ಲಿ ಎಷ್ಟು ಜಾಗ ಬಿಟ್ಟು ಹೋಗಿದೆ? ಹಿಂದೆ ಎಷ್ಟು ಜಾಗ ಸೇರಿಸಿಕೊಂಡಿದ್ದರು? ಮುಂದ ಎಷ್ಟು ಜಾಗ ಸೇರಿಸಿಕೊಳ್ಳಬೇಕು? ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ಒದಗಿಸಿಲ್ಲ. ಜತೆಗೆ ಹೊಸ ಪ್ರದೇಶಗಳನ್ನು ಸೇರಿಸಿಕೊಳ್ಳುವುದರಿಂದ ಆಗವ ಸಾಧಕ, ಬಾಧಕಗಳ ಕುರಿತು ಚರ್ಚಿಸಬೇಕು. ಆದರೆ ಅಂತ ಯಾವುದೇ ದಾಖಲೆಗಳೇ ಇಲ್ಲದೆ ನಡೆಸುವ ಚರ್ಚೆ ಫಲ ನೀಡದು’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಪಕ್ಷಗಳ ಸದಸ್ಯರು ಧನಿಗೂಡಿಸಿದರು. ಭಾವಿಗಿಳಿದು ಮಾಹಿತಿ ಕೊಡುವಂತೆ ಪಟ್ಟು ಹಿಡಿದ ಸುವರ್ಣ ಕಲಕುಂಟ್ಲ, ಶಂಭು ಸಾಲಮನಿ, ಇಕ್ಬಾಲ್ ವಿರುದ್ಧ ಆಡಳಿತ ಪಕ್ಷದ ಸದಸ್ಯರು ವಾಗ್ವಾದ ನಡೆಸಿದರು. ಮಾಹಿತಿ ಒದಗಿಸುವುದಾಗಿ ಹೇಳಿ ಮೇಯರ್ ಸಭೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT