ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಮುತ್ತಲ: ಬಣ್ಣವಿಲ್ಲದೆ ಹೋಳಿ ಆಚರಣೆ

ರಮೇಶ ಓರಣಕರ
Published 21 ಮಾರ್ಚ್ 2024, 5:41 IST
Last Updated 21 ಮಾರ್ಚ್ 2024, 5:41 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಸಮೀಪದ ಮುಳಮುತ್ತಲ ಗ್ರಾಮದಲ್ಲಿ ಹೋಳಿ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ಮಾರ್ಚ್ 21ರಂದು ರಾತ್ರಿ ಬಡಿಗೇರ ಮನೆಯಿಂದ ಅಗಸಿ ಮಂಟಪದವರೆಗೆ ಮೆರವಣಿಗೆ ಮೂಲಕ ಕಾಮದೇವರ ಮೂರ್ತಿ ತಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ.  22ರಂದು ಕಾಮದೇವರ ಜಾತ್ರೆ, 23ರ ನಸುಕಿನ ಜಾವ ಕಾಮದಹನ ನಡೆಯಲಿದೆ.

ಕಾಮಣ್ಣನ ಚರಿತ್ರೆ: ಶತಮಾನಗಳ ಹಿಂದೆ ಮುಳಮುತ್ತಲ ಗ್ರಾಮದ ಬ್ರಹ್ಮಲಿಂಗ ದೇವಸ್ಥಾನದ ಪಕ್ಕದ ಬಾವಿಯಲ್ಲಿ ಋಷಿಮುನಿಗಳು ಸ್ನಾನ ಮಾಡುವ ವೇಳೆ ಗ್ರಾಮದ ಪೈಲ್ವಾನ್ ಧರೆಪ್ಪ ಬೆಂಡಿಗೇರಿ ಗರಡಿ ಮನೆಯಿಂದ ತೆರಳುವಾಗ ಅವರನ್ನು ಕಾಣುತ್ತಾನೆ. ತಮ್ಮನ್ನು ಇಲ್ಲಿ ಭೇಟಿಯಾದ ಸಂಗತಿಯನ್ನು ಯಾರಿಗೂ ತಿಳಿಸಬೇಡ ಎಂದು ಋಷಿಗಳು ಹೇಳುತ್ತಾರೆ. ಹೇಳಿದರೆ ಅಂದೇ ಸಾಯುವುದಾಗಿ, ಹರಿಜನ ಮಹಿಳೆಯ ಗರ್ಭದಲ್ಲಿ ಮರುಜನಿಸುವುದಾಗಿಯೂ ಎಚ್ಚರಿಸುತ್ತಾರೆ. ಆದರೆ ಆತ ವಿಚಾರವನ್ನು ತಾಯಿಗೆ ಹೇಳಿ ಹೊಲಕ್ಕೆ ತೆರಳುತ್ತಾನೆ. ಮಾರ್ಗದಲ್ಲಿ ಕಲ್ಲು ಎಡವಿ ಬಿದ್ದು ಸಾವಿಗೀಡಾಗುತ್ತಾನೆ.

ಋಷಿಗಳ ವಾಣಿಯಂತೆ ಧರೆಪ್ಪ ಮಹಿಳೆಯ ಗರ್ಭದಲ್ಲಿ ಜನಿಸಿ ಬುಡಪ್ಪ ಎಂದು ಕರೆಯಿಸಿಕೊಳ್ಳುತ್ತಾನೆ. ಹೋಳಿ ಹುಣ್ಣಿಮೆಯಂದು ಕ್ಷೌರ ಮಾಡಿಸಿಕೊಂಡು ಮನೆಗೆ ಬರುವ ಬುಡ್ಡಪ್ಪ ಮುಖ ತೊಳೆಯಲು ನೀರು ಕೇಳುತ್ತಾನೆ. ಅತ್ತಿಗೆಯ ನೀರು ಕೊಡದೆ, ನೀವೇನು ಅಣ್ಣಿಗೇರಿಗೆ ಹೋಗಿ ಕರಿ ತಂದಂಗಾಯ್ತ ಎಂದು ಗೇಲಿ ಮಾಡುತ್ತಾಳೆ. ಕೋಪಗೊಂಡ ಬುಡ್ಡಪ್ಪ, ನಾನು ಅಣ್ಣಿಗೇರಿಗೆ ಹೋಗಿ ಕಾಮಣ್ಣನ ಕರಿ ತಂದೇ ತೀರುತ್ತೇನೆ ಎಂದು ಹೊರಡುತ್ತಾನೆ.

ಅಣ್ಣಿಗೇರಿಯಲ್ಲಿ ಹೆಣ್ಣು ವೇಷ ಧರಿಸಿ ಆರತಿ ಮಾಡುವ ನೆಪದಲ್ಲಿ ಎತ್ತರದಲ್ಲಿ ಪ್ರತಿಷ್ಠಾಪಿಸಿದ್ದ ಕಾಮಣ್ಣನ ತಲೆಯನ್ನು ಹೊತ್ತು ತರುತ್ತಾನೆ. ಆತನ ಹಿಡಿಯಲು ಅಣ್ಣಿಗೇರಿ ಜನ ಹಿಂಬಾಲಿಸುತ್ತಾರೆ. ಮುಳಮುತ್ತಲ ಸೀಮೆಗೆ ಆಗಮಿಸುವಾಗ ಕಾಲಿಗೆ ಮುಳ್ಳು ಚುಚ್ಚಿ ನಡೆಯಲು ಸಾಧ್ಯವಾಗುವುದಿಲ್ಲ. ಬುಡ್ಡಪ್ಪ ಮುಳಮುತ್ತಲ ಸೀಮೆಯ ಕೊರಮ್ಮ ದೇವಿಯ ಮುಂದೆ ಅಣ್ಣಿಗೇರಿ ಕಾಮಣ್ಣನ ತಲೆ ಇಡುತ್ತಾನೆ. ಮಾತಿನಂತೆ ಕಾಮಣ್ಣನ ತಲೆಯನ್ನು ಮುಳಮುತ್ತಲಕ್ಕೆ ಮುಟ್ಟಿಸಲು ಸಾಧ್ಯವಾಗದ ಕಾರಣ ಕತ್ತಿಯಿಂದ ತನ್ನ ತಲೆಯನ್ನು ಬೇರ್ಪಡಿಸಿ ದೇವಿಗೆ ರಕ್ತದ ಅಭಿಷೇಕ ಮಾಡಿ, ಕಾಮಣ್ಣನ ತಲೆ ಹಾಗೂ ತನ್ನ ತಲೆಯನ್ನು ಮುಳಮುತ್ತಲ ಸೀಮೆ ಒಳಗೆ ಎಸೆದನು ಎಂಬ ಐತಿಹ್ಯವಿದೆ.

ಪ್ರತಿ ವರ್ಷ ಹುಬ್ಬಾ ನಕ್ಷತ್ರದಂದು ಇಲ್ಲಿಯ ಕಾಮದಹನ ನಡೆಯುತ್ತದೆ. ಗ್ರಾಮದಲ್ಲಿ ಪ್ರತಿಷ್ಠಾಪಿಸುವ ಕಾಮಣ್ಣನ ತಲೆಯನ್ನು ದಹನ ಮಾಡುವವರೆಗೂ ಊರಿನ ಯುವಕರು ಕಾವಲು ಕಾಯುತ್ತಾರೆ. ಕಾಮಣ್ಣನ ದರ್ಶನಕ್ಕಾಗಿ ಬೇರೆ ಜಿಲ್ಲೆ, ಹೊರ ರಾಜ್ಯದ ಜನರು ಬರುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಟ್ಟಿಕೊಂಡು ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದು ಗ್ರಾಮದ ಹಿರಿಯ ಮಲ್ಲಯ್ಯ ಹಿರೇಮಠ ತಿಳಿಸಿದರು.

ಬಣ್ಣ ಆಡುವಂತಿಲ್ಲ:

12ನೇ ಶತಮಾನದಿಂದಲೂ ಆಚರಿಸಿಕೊಂಡು ಬಂದಿರುವ ಈ ಹೋಳಿಯಲ್ಲಿ ಗ್ರಾಮದ ಯಾವೊಬ್ಬರೂ ಬಣ್ಣ ಆಡುವುದಿಲ್ಲ. ಗ್ರಾಮದ ಯುವಕನೊಬ್ಬ ತನ್ನ ಪ್ರಾಣತ್ಯಾಗ ಮಾಡಿದ್ದರ ಅಂಗವಾಗಿ ಶೋಕಾಚರಣೆ ಸಲ್ಲಿಸಲು ಓಕುಳಿ ಆಡುವುದಿಲ್ಲ’ ಎಂದು ಆಯೋಜಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT