ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ನೆರವಾದ ಜೇನುನೊಣ

ಪರಾಗಸ್ಪರ್ಶದ ಮಹತ್ವ ಅರಿತು ಕೃಷಿಯಲ್ಲಿ ಲಾಭ ಕಂಡ ಬಸವರಾಜ
Published 18 ಮೇ 2023, 23:30 IST
Last Updated 18 ಮೇ 2023, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೃಷಿಯಲ್ಲಿ ಉತ್ತಮ ಫಸಲು ಪಡೆಯಲು ರಾಸಾಯನಿಕ ಗೊಬ್ಬರ, ಕೀಟನಾಶಕ ಅತ್ಯವಶ್ಯ ಎಂದೇನೂ ಇಲ್ಲ. ನೈಸರ್ಗಿಕವಾಗಿ ಸಿಗುವ ಅಂಶಗಳನ್ನೇ ಬಳಸಿಕೊಂಡು ಉತ್ತಮ ಬೆಳೆ ಮತ್ತು ಆದಾಯ ಪಡೆಯಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ ತಾಲ್ಲೂಕಿನ ಗಾಮನಗಟ್ಟಿಯ ರೈತ ಬಸವರಾಜ ಮುನಗುಂಡಿ (ರಾಜು).

ಬಸವರಾಜ ಅವರು ತಮ್ಮ ಕುಟುಂಬಕ್ಕೆ ಸೇರಿದ 6 ಎಕರೆಯಲ್ಲಿ ಮಾವು, 4 ಎಕರೆಯಲ್ಲಿ ಸಪೋಟ ಹಾಗೂ ಜಮೀನಿನ ಅಂಚಿಗೆ 140 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಎಲ್ಲಾ ಬೆಳೆಗಳು ಉತ್ತಮವಾಗಿ ಕೈ ಸೇರಲು ಅವರು ಕಂಡುಕೊಂಡ ಮಾರ್ಗ ಜೇನುಹುಳುಗಳು!

ಈ ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಸವರಾಜ ಅವರು ಬಳಸುತ್ತಿಲ್ಲ. ಜೇನುನೊಣಗಳಿಗೆ ಇರುವ ಪರಾಗಸ್ಪರ್ಶ ಗುಣವೇ ಇವರಿಗೆ ವರದಾನವಾಗಿದೆ. ಈ ಮೊದಲು ಹಾಗಲಕಾಯಿ ಬೆಳೆಯುವಾಗ, ಬಳ್ಳಿಯಲ್ಲಿ ಕಾಯಿ ಮೂಡಲು ಜೇನುನೊಣಗಳ ಪರಾಗಸ್ಪರ್ಶ ಅಗತ್ಯ ಎಂಬುದನ್ನು ಕಂಡುಕೊಂಡರು.

ಇದೇ ಅಂಶವನ್ನು ಮಾವು, ಸಪೋಟ, ತೆಂಗು ಬೆಳೆಗೆ ಅನ್ವಯಿಸಲು ಜೇನುನೊಣಗಳನ್ನು ಸಾಕಿದರು. ಇದರಿಂದಲೇ ಉತ್ತಮ ಬೆಳೆ ಪಡೆದು, ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

‘ಮಾವು ಹಾಗೂ ಸಪೋಟ ಸಸಿಗಳನ್ನು ನೆಡುವಾಗ ಪೂರ್ವ-ಪಶ್ಚಿಮಕ್ಕೆ ವಿಶಾಲ ಜಾಗ ಹಾಗೂ ಉತ್ತರ-ದಕ್ಷಿಣಕ್ಕೆ ಕಡಿಮೆ ಜಾಗ ಬಿಟ್ಟಿದ್ದೆ. ಸಮರ್ಪಕವಾಗಿ ನೀರು ಒದಗಿಸುತ್ತೇನೆ. ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ ಹಾಕುವುದು, ಎಲೆ, ಬೆಳೆಯ ತ್ಯಾಜ್ಯವನ್ನೇ ಭೂಮಿಯಲ್ಲಿ ಕೊಳೆಯಲು ಬಿಡುತ್ತಿದ್ದೇನೆ. 20ಕ್ಕೂ ಹೆಚ್ಚು ವರ್ಷಗಳಿಂದ ಉಳುಮೆ ಮಾಡುತ್ತಿದ್ದರೂ ಜಮೀನು ಫಲವತ್ತಾಗಿದೆ’ ಎನ್ನುತ್ತಾರೆ ಬಸವರಾಜ ಮುನಗುಂಡಿ.

‘20 ಬಾಕ್ಸ್‌ಗಳಲ್ಲಿ ತುಡುವೆ ಜೇನುನೊಣಗಳನ್ನು ಸಾಕಿದ್ದೇನೆ. ಅವುಗಳಿಗೆ ಯಾವುದೇ ಆಹಾರ ಹಾಕುವುದಿಲ್ಲ. ಜೇನು ಮಾರಾಟ ಮಾಡುವ ಉದ್ದೇಶವೂ ಇಲ್ಲ. ಜೇನುಹುಳು ಸಾಕಣೆ ತರಬೇತಿ ಪಡೆದಿದ್ದರಿಂದ ಕೃಷಿ ಕಾರ್ಯದಲ್ಲಿ ಅವುಗಳ ಮಹತ್ವ ಏನೆಂದು ಗೊತ್ತಾಯಿತು. ಫಸಲು ಹೆಚ್ಚಲು ಜೇನುನೊಣಗಳು ಸಹ ಕಾರಣವಾಗಿವೆ’ ಎಂದು ಹೇಳಿದರು.

ಕೃಷಿ ಕಾಯಕ ಮಾಡಿಯೇ ಜೀವನ ಸಾಗಿಸಿದ್ದೇನೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದೇನೆ. ಕೃಷಿ ಬಗ್ಗೆ ಸರಿಯಾದ ಅರಿವಿದ್ದರೆ ನಷ್ಟ ತಪ್ಪಿಸಬಹುದು – ಬಸವರಾಜ ಮುನಗುಂಡಿ ಕೃಷಿಕ ಗಾಮನಗಟ್ಟಿ

‘ಲಕ್ಷಾಂತರ ರೂಪಾಯಿ ಆದಾಯ’ ‘ಸಪೋಟ ವರ್ಷಕ್ಕೆ 2 ಬಾರಿ ಫಸಲು ನೀಡುತ್ತದೆ. ಜಮೀನಿನಲ್ಲಿರುವ 200 ಗಿಡಗಳಿಂದ ವರ್ಷಕ್ಕೆ ಸುಮಾರು ₹2 ಲಕ್ಷ ಆದಾಯ ಸಿಗುತ್ತದೆ. ವರ್ಷಕ್ಕೊಮ್ಮೆ ಫಸಲು ನೀಡುವ ಆಪೋಸ್‍ ಮಾವಿನಹಣ್ಣಿನಿಂದ ಅಂದಾಜು ₹2 ಲಕ್ಷ ಆದಾಯವಿದೆ. ಮಾರಾಟಗಾರರೇ ಹಣ ನೀಡಿ ಬೆಳೆ ಕಟಾವು ಮಾಡಿಕೊಳ್ಳುತ್ತಾರೆ. ತೆಂಗು ಮಾರಾಟದಿಂದ ವರ್ಷಕ್ಕೆ ₹50 ಸಾವಿರ ಸಿಗುತ್ತದೆ. ನಾಲ್ಕು ಹಸುಗಳಿಂದ ಸಿಗುವ ಹಾಲನ್ನು ಮನೆಗೆ ಬಳಸಿಕೊಂಡು ಉಳಿದಿದ್ದನ್ನು ಡೇರಿಗೆ ಹಾಕುತ್ತೇನೆ. ಸಹೋದರರು ಈ ಎಲ್ಲಾ ಕಾರ್ಯಕ್ಕೂ ಸಹಕರಿಸುತ್ತಾರೆ’ ಎಂದು ಬಸವರಾಜ ಮುನಗುಂಡಿ ತಮ್ಮ ಕೃಷಿ ಆದಾಯದ ವಿವರವನ್ನ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT