ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ ಪಾಲಿಕೆ ಚುನಾವಣೆ: ಪತ್ನಿಯರಿಗೆ ಟಿಕೆಟ್‌ ಕೊಡಿಸಲು ಕಸರತ್ತು

40 ವಾರ್ಡ್‌ಗಳು ಮಹಿಳೆಯರಿಗೆ ಮೀಸಲು l ಪಕ್ಷಗಳ ನಾಯಕರಿಗೆ ಪತಿಯರ ದುಂಬಾಲು
Last Updated 16 ಆಗಸ್ಟ್ 2021, 2:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಸಿಕ್ಕಿರುವುದರಿಂದ ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಲ್ಲ ಪುರುಷ ಅಭ್ಯರ್ಥಿಗಳು ತಮಗೆ ಬೇಕಾದ ವಾರ್ಡ್‌ಗಳಲ್ಲಿ ಕಣಕ್ಕಿಳಿಯಲು ಅವಕಾಶ ಸಿಗುತ್ತಿಲ್ಲ. ಆದ್ದರಿಂದ ತಮ್ಮ ಪತ್ನಿಗಾದರೂ ಟಿಕೆಟ್‌ ಕೊಡಿಸಬೇಕು ಎಂದು ಕಸರತ್ತು ನಡೆಸುತ್ತಿದ್ದಾರೆ.

ಮೊದಲು 67 ವಾರ್ಡ್‌ಗಳಿದ್ದವು. ಈಗ 82 ಆಗಿವೆ. ವಾರ್ಡ್‌ ಮರುವಿಂಗಡಣೆ ಮತ್ತು ಮೀಸಲಾತಿಯ ಬಳಿಕ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಬೇಕಾಗಿದೆ. ಹೀಗಾಗಿ ಬಹಳಷ್ಟು ಪುರುಷ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಲಿದೆ. ಇದರ ಬದಲು ಹೇಗಾದರೂ ಮಾಡಿ ಪತ್ನಿಗೆ ಅಥವಾ ಕುಟುಂಬದ ಮಹಿಳಾ ಸದಸ್ಯರಿಗೆ ಟಿಕೆಟ್‌ ಕೊಡಿಸಲು ಹಿಂದಿನ ಪಾಲಿಕೆ ಸದಸ್ಯರು ಮತ್ತು ಆಕಾಂಕ್ಷಿಗಳು ತಮ್ಮ ಪಕ್ಷಗಳ ನಾಯಕರನ್ನು ನಿತ್ಯವೂ ದುಂಬಾಲು ಬೀಳುತ್ತಿದ್ದಾರೆ.

ಸೆ. 3ರಂದು ನಡೆಯಲಿರುವ ಪಾಲಿಕೆ ಚುನಾವಣೆಗೆ ಆ. 16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಟಿಕೆಟ್‌ ಅಂತಿಮಗೊಳಿಸುವ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರು ಸೋಮವಾರದಿಂದ ನಗರದಲ್ಲಿ ಅರ್ಜಿಗಳ ಪರಿಶೀಲನೆ, ಕಿರುಪಟ್ಟಿ ತಯಾರು ಮಾಡಲಿದ್ದಾರೆ. ಹೀಗಾಗಿ ಆಕಾಂಕ್ಷಿಗಳ ಕಸರತ್ತು ಜೋರಾಗಿಯೇ ನಡೆಯುತ್ತದೆ. ನೆಚ್ಚಿನ ನಾಯಕರನ್ನು ಪ್ರತ್ಯೇಕವಾಗಿಯೂ ಭೇಟಿಯಾಗುತ್ತಿದ್ದಾರೆ.

ಟಿಕೆಟ್‌ ನೀಡುವ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮೊದಲ ಆದ್ಯತೆ ಕೊಡುವುದಾಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಅವರು ಸ್ಪಷ್ಟವಾಗಿ ಹೇಳಿರುವುದರಿಂದ, ಕಾರ್ಯಕರ್ತರು ಮಹಿಳಾ ಮೀಸಲಾತಿ ಇರುವ ಕಡೆ ತಮ್ಮ ಮನೆಯವರಲ್ಲಿ ಯಾರಿಗಾದೂ ಟಿಕೆಟ್‌ ಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

‘ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದಿನ ಪಾಲಿಕೆ ಚುನಾವಣೆಯಲ್ಲಿಯೇ ನನಗೆ ಟಿಕೆಟ್‌ ಸಿಗಬೇಕಿತ್ತು. ಇದಕ್ಕಾಗಿ ಕೊನೆಯವರೆಗೆ ಪೈಪೋಟಿ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಕೊಡುವುದಾಗಿ ಖಚಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯರ ಮಾತಿಗೆ ಬೆಲೆಕೊಟ್ಟು ಕಣದಿಂದ ಹಿಂದೆ ಸರಿದಿದ್ದೆ. ಆದರೆ, ಈ ಸಲ ನನ್ನ ವಾರ್ಡ್‌ ಮಹಿಳೆಗೆ ಮೀಸಲಾಗಿದೆ. ಎಲ್ಲ ಕಡೆಯೂ ಸಾಕಷ್ಟು ಸ್ಪರ್ಧೆ ಇರುವ ಕಾರಣ ಬೇರೆ ವಾರ್ಡ್‌ಗಳಲ್ಲಿ ಹೋಗಿ ಸ್ಪರ್ಧಿಸುವಂತಿಲ್ಲ. ಈ ಸಲವೂ ನನಗೆ ಪಾಲಿಕೆ ಸದಸ್ಯನಾಗುವ ಅದೃಷ್ಟವಿಲ್ಲ. ಆದ್ದರಿಂದ ಪತ್ನಿಗೆ ಟಿಕೆಟ್‌ ಕೊಡಬೇಕೆಂದು ನಾಯಕರಲ್ಲಿ ಮನವಿ ಮಾಡಿದ್ದೇನೆ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದರು.

ಮಹಿಳಾ ಮತದಾರರೇ ನಿರ್ಣಾಯಕರು

ಮಹಾನಗರ ಪಾಲಿಕೆಯ 82 ವಾರ್ಡ್‌ಗಳಲ್ಲಿ ಒಟ್ಟು 8,11,632 ಮತದಾರರಿದ್ದು, ಮಹಿಳಾ ಮತದಾರರು 4,07,891 ಇದ್ದಾರೆ. 84 ಇತರ ಮತದಾರರಿದ್ದಾರೆ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ.

ಪುರುಷರು 4,03,657 ಇದ್ದಾರೆ. 52ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 33ನೇ ವಾರ್ಡ್‌ನಲ್ಲಿ ಅತಿ ಹೆಚ್ಚು 13,648 ಹಾಗೂ 79ನೇ ವಾರ್ಡ್‌ನಲ್ಲಿ ಅತಿ ಕಡಿಮೆ 5,924 ಕಡಿಮೆ ಮಹಿಳಾ ಮತದಾರರಿದ್ದಾರೆ.

-------

ನಮ್ಮ ಪಕ್ಷ ತಳಮಟ್ಟದಿಂದ ಬಲಿಷ್ಠವಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಕಾರ್ಯಕರ್ತೆಯರು ಸಕ್ರಿಯವಾಗಿದ್ದಾರೆ. ಮಹಿಳಾ ಮೀಸಲಾತಿ ಇರುವ ಕಡೆ ಅವರಿಗೆ ಟಿಕೆಟ್‌ ನೀಡಲಾಗುವುದು
-ಅರವಿಂದ ಬೆಲ್ಲದ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

---

ಮಹಿಳಾ ಮೀಸಲಾತಿ ಇರುವ ವಾರ್ಡ್‌ಗಳಲ್ಲಿ ತಮ್ಮ ಪತ್ನಿಗೆ ಟಿಕೆಟ್‌ ಕೊಡುವಂತೆ ಆಕಾಂಕ್ಷಿಗಳು ಒತ್ತಾಯಿಸುತ್ತಿದ್ದಾರೆ. ಪಕ್ಷದ ಹಿರಿಯರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು

ಅಲ್ತಾಫ್‌ ಹಳ್ಳೂರ
ಕಾಂಗ್ರೆಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ

------

ಪತ್ನಿಗೆ ಅಥವಾ ಮನೆಯ ಮಹಿಳಾ ಸದಸ್ಯರಿಗೇ ಪಾಲಿಕೆ ಟಿಕೆಟ್‌ ನೀಡುವಂತೆ ಅನೇಕರು ಕೇಳುತ್ತಿದ್ದಾರೆ. ನಾವು ಆದಷ್ಟು ಗೆಲ್ಲುವ ಮಹಿಳಾ ಅಭ್ಯರ್ಥಿಗಳತ್ತ ಗಮನ ಹರಿಸಿದ್ದೇವೆ

ಗುರುರಾಜ ಹುಣಸೀಮರದ

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT