ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಹುಬ್ಬಳ್ಳಿ–ಧಾರವಾಡ: ರೈಲಿನ ಕಥೆ ಹೇಳುವ ತಾಣ...

ಬ್ರಿಟಿಷರ ಕಾಲದ ವಸತಿ ನಿಲಯದಲ್ಲಿದೆ ರೈಲಿನ ಇತಿಹಾಸ
Published 4 ಅಕ್ಟೋಬರ್ 2023, 4:32 IST
Last Updated 4 ಅಕ್ಟೋಬರ್ 2023, 4:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚುಕುಬುಕು ಸದ್ದಿನ ರೈಲು ಬಂಡಿ
ಹೊರಟಿತು ಎಲ್ಲಿಗೆ ಬಾಳ ಬಂಡಿ?
ಕನಸುಗಳ ಹೊತ್ತ ಚೆಂದದ ಬೋಗಿ
ಗಮ್ಯವ ಸೇರಲಿ ಬಾಳ ಸವಾರಿ...!

ಹೀಗೆ ಬಾಳ ಪಯಣಕೆ ನಂಟು ಬೆಸೆಯುವ ರೈಲಿಗೂ ತನ್ನದೇ ಆದ ಪಯಣವಿದೆ. ಒಂದೂವರೆ ಶತಮಾನದ ಹಿಂದೆ ಭಾರತದಲ್ಲಿ ಓಡಲು ಆರಂಭಿಸಿದ ರೈಲು ಇಂದಿನ ಅತ್ಯಾಧುನಿಕ ಕಾಲದವರೆಗೂ ಹಂತ ಹಂತವಾಗಿ ಬದಲಾಗುತ್ತ, ಅಭಿವೃದ್ಧಿಯ ಛಾಪು ಹೊತ್ತು ಸಾಗುತ್ತಲೇ ಇದೆ. ಉಗಿಬಂಡಿಯಿಂದ ಹಿಡಿದು ಇಂದಿನ ಅತ್ಯಾಧುನಿಕ ವಿದ್ಯುತ್ ರೈಲಿನವರೆಗೂ; ನ್ಯಾರೋಗೇಜ್, ಮೀಟರ್‌ಗೇಜ್‌ಯಿಂದ ಬ್ರಾಡ್‌ಗೇಜ್‌ವರೆಗೂ ರೈಲಿನ ಪಯಣದ ಕಥೆಯನ್ನು ಸಾರುವ ಚೆಂದದ ತಾಣವೊಂದು ನಮ್ಮ ಹುಬ್ಬಳ್ಳಿಯಲ್ಲೇ ಇದೆ.

ಹೌದು, ಜಗತ್ತಿನ ಅತೀ ಉದ್ದದ ಪ್ಲಾಟ್‌ಫಾರ್ಮ್ ಎಂದು ಖ್ಯಾತಿ ಪಡೆದ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದ ಹಿಂಬದಿಯಲ್ಲೇ, ಗದಗ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿರುವ ‘ರೈಲ್ವೆ ಮ್ಯೂಸಿಯಂ’ ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾದ ಮೊದಲ ರೈಲು ವಸ್ತು ಸಂಗ್ರಹಾಲಯವಾಗಿದೆ.

2020 ಆಗಸ್ಟ್‌ 9ರಂದು ಆಗಿನ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ಅವರ ಅಧ್ಯಕ್ಷತೆಯಲ್ಲಿ, ಸಚಿವ ಪ್ರಲ್ಹಾದ್ ಜೋಶಿ ಅವರು ಈ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. ಇದು ಕೇಂದ್ರ ರೇಲ್ವೆ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದು, ಬರುವ ಆದಾಯವನ್ನು ರೇಲ್ವೆ ಇಲಾಖೆಗೆ ಸಲ್ಲಿಸುತ್ತದೆ. ನೈರುತ್ಯ ರೇಲ್ವೆ ಇಲಾಖೆಗೆ ಸೇರಿದ 2ನೇ ದೊಡ್ಡ ವಸ್ತು ಸಂಗ್ರಹಾಲಯ ಇದಾಗಿದ್ದು, ಮೊದಲನೇಯದ್ದು ಮೈಸೂರಿನಲ್ಲಿದೆ.

ಮ್ಯೂಸಿಯಂಗೆ ಕಾಲಿಡುತ್ತಿದ್ದಂತೆ ಮೊದಲು ಟಿಕೆಟ್ ಕೌಂಟರ್ ಸಿಗುತ್ತೆ. ಟಿಕೆಟ್ ತಗೊಂಡು ಮುಂದೆ ಹೋದರೆ ‘ರೈಲ್ವೆ ಮ್ಯೂಸಿಯಂ ಹುಬ್ಬಳ್ಳಿ’ ಎಂದು ಬರೆದ ಚೆಂದದ ಸೆಲ್ಫಿ ಪಾಯಿಂಟ್ ಇದೆ. ಅಲ್ಲೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಒಳನಡೆದರೆ ಹಳೆಯ ರೈಲು ಬೋಗಿಗಳು, ಟಾಯ್ ಟ್ರೈನ್, ಎಂಜಿನ್, ಎರಡು ಹಳೆ ಮನೆಗಳು, ರೈಲ್ವೆ ಮಾಸ್ಟರ್ ಪೊಸ್ ಕೊಟ್ಟು ನಿಂತ ಗಣೇಶನ ಕಲಾಕೃತಿ, ಸ್ಟೀಲ್‌ನಲ್ಲಿ ತಯಾರಿಸಿದ ನವಿಲಿನ ಕಲಾಕೃತಿಗಳು ಕೈಬೀಸಿ ಕರೆಯುತ್ತವೆ. ಆವರಣವೂ ತನ್ನದೇ ಆದ ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.

ಈ ವಸ್ತು ಸಂಗ್ರಹಾಲಯವನ್ನು ಒಳಾಂಗಣ ಮತ್ತು ಹೊರಾಂಗಣವಾಗಿ ವಿಂಗಡಿಸಲಾಗಿದೆ. ಹೊರಾಂಗಣದಲ್ಲಿ ಟಾಯ್ ಟ್ರೈನ್, ಎರಡು ಡೀಸೆಲ್ ಲೊಕೊಗಳು, ಹಳೆಯ ರೈಲು ಗೇಟು, ಆಯಾ ಕಾಲದ ಚಕ್ರಗಳು, ಹಳಿಗಳು, ಅವುಗಳ ಜೋಡಣಾ ವಸ್ತುಗಳು, ಒಂದು ಥೆಟರ್ ಕೋಚ್ ಇನ್ನೊಂದು ರೆಸ್ಟೋರೆಂಟ್ ಕೊಚ್ ಮೇಲ್ನೊಟಕ್ಕೆ ಕಾಣ ಸಿಗುತ್ತವೆ.

ಇಲ್ಲಿರುವ ಮಕ್ಕಳ ಆಟಿಕೆ ರೈಲಿನಲ್ಲಿ ವೀಕ್ಷಕರು ಪ್ರಯಾಣಿಸಬಹುದು. ದೊಡ್ಡವರಿಗೆ ₹20 ಮತ್ತು ಮಕ್ಕಳಿಗೆ ₹10 ಟಿಕೆಟ್ ದರ ನಿಗದಿಪಡಿಸಲಾಗಿದೆ.

ಇಲ್ಲಿರುವ ಕೆಂಪು ಬಣ್ಣದ ಲೊಕೊ ನ್ಯಾರೋಗೇಜ್ ಕೋಚ್ ಆಗಿದ್ದು ನ್ಯಾರೋಗೇಜ್ ಲೊಕೊಮೋಟಿವ್ ಹೊಂದಿದೆ. 37 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ಕೋಚ್ ಆಗ್ನೇಯ ಮಧ್ಯ ರೈಲ್ವೆಯ ನಾಗ್ಪುರ ವಿಭಾಗದ ನಾಗ್ಪುರ್– ನಾಗ್‌ಭೀಡ್ ನ್ಯಾರೋಗೇಜ್ ಭಾಗದಲ್ಲಿ 30 ವರ್ಷ ಕಾರ್ಯನಿರ್ವಹಿಸಿದೆ. ಇದು ಕಾರ್ಯನಿರ್ವಹಿಸುತ್ತಿದ್ದ ಭಾಗವು ಬ್ರಾಡ್‌ಗೇಜ್‌ಗೆ ಪರಿವರ್ತನೆಗೊಂಡ ಕಾರಣ 2019ರಲ್ಲಿ ಇದರ ಸೇವೆಯನ್ನು ನಿಲ್ಲಿಸಲಾಯಿತು.

ಇನ್ನೊಂದು ನೀಲಿ ಬಣ್ಣದ ಲೊಕೊ ಇದ್ದು, ಇದರಲ್ಲಿ ಪ್ರಯಾಣಿಕರ ಕಲಾಕೃತಿಗಳಿವೆ. ವಿವಿಧ ಭೌಗೋಳಿಕ ಹಿನ್ನೆಲೆ ಹೊಂದಿದ ಪ್ರಯಾಣಿಕರ ಕಲಾಕೃತಿಗಳು ವಿವಿಧತೆಯಲ್ಲಿ ಏಕತೆ ಸಾರುತ್ತಿವೆ. ಅವುಗಳನ್ನು ಗಾಜಿನಿಂದ ಸಂರಕ್ಷಿಸಲಾಗಿದೆ. ಇದರ ಪಕ್ಕದಲ್ಲಿ ಗೂಡ್ಸ್ ವ್ಯಾಗನ್, ಸೋಮಾಪೋರ್ ಆರ್ಮ್ ಸಿಗ್ನಲ್, ನೀರಿನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಇದೆ. 

ಉಗಿ ಎಂಜಿನ್‌ನಲ್ಲಿ ಕಲ್ಲಿದ್ದಲು, ನೀರನ್ನು ಹೊತ್ತೊಯ್ಯಲು ಬಳಸುತ್ತಿದ್ದ ಟ್ರಾಲಿಯೂ ಸಹ ಇಲ್ಲಿ ಕಾಣಸಿಗುತ್ತದೆ. ಇದು ಗದಗಿನ ಹಳೆಯ ಉಗಿ ಎಂಜಿನ್ ಶೆಡ್‌ನಿಂದ ತರಲಾಗಿದೆ. ಇದರ ಜತೆಗೆ ಗ್ರೌಂಡ್ ಲಿವರ್ ಫ್ರೇಮ್, ಇಂಟರ್ ಲಾಕಿಂಗ್ ಫ್ರೇಮ್‌ಗಳನ್ನು ಇಡಲಾಗಿದೆ.

ವಸ್ತು ಸಂಗ್ರಹಾಲಯ ಮಲಪ್ರಭಾ, ಘಟಪ್ರಭಾ ಎಂಬ ಎರಡು ಒಳಾಂಗಣ ಭಾಗವನ್ನೂ ಹೊಂದಿವೆ. 1907ರಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆಂದು ನಿರ್ಮಿಸಿದ್ದ ವಸತಿ ನಿಲಯವನ್ನೇ ಮ್ಯುಸಿಯಂ ಆಗಿ ಪರಿವರ್ತಿಸಲಾಗಿದೆ. ಅಗತ್ಯಕ್ಕೆ ತಕ್ಕಂತೇ ರೂಪಾಂತರಿಸಲಾಗಿದೆ ಆದರೂ ಮೂಲಸ್ವರೂಪದಲ್ಲಿ ಬದಲಾವಣೆ ಮಾಡಿಲ್ಲ. ಈ ಎರಡೂ ಘಟಕಗಳು ರೈಲಿನ ಯಾಂತ್ರಿಕ ಹಾಗೂ ತಾಂತ್ರಿಕ ಇತಿಹಾಸವನ್ನು ಸಾರುತ್ತವೆ.

ಘಟಪ್ರಭಾ ಘಟಕವು ರೈಲಿನ ಯಾಂತ್ರಿಕ ಉಪಕರಣಗಳನ್ನು ಹೊಂದಿದೆ. ರೈಲಿನ ಪ್ರತಿ ಮೈಲುಗಲ್ಲಿನಲ್ಲೂ ಬಳಸಲಾದ ಎಂಜಿನ್, ಕಂಬಿ, ಅವುಗಳ ಜೋಡಣೆ, ಜೋಡಣೆಗೆ ಬೇಕಾದ ಸಲಕರಣೆ, ವ್ಯಾಗನ್, ವ್ಯಾಟ್, ರೇಲ್ವೆ ಸಿಬ್ಬಂದಿ ಬಳಸುತ್ತಿದ್ದ ಉಡುಗೆ–ತೊಡುಗೆಗಳು, ಮೆಡಿಕಲ್ ಸಾಮಗ್ರಿಗಳು, ಮಾದರಿ ರೈಲು ಸಂಚಾರ ಮಾರ್ಗ, ಸಂವಹನಕ್ಕೆ ಬಳಸುತ್ತಿದ್ದ ಉಪಕರಣಗಳು, ಸಿಗ್ನಲಿಂಗ್ ಉಪಕರಣಗಳು, ಹಳೆಯ ಕಾಲದ ಗಡಿಯಾರಗಳು ಇವೆ.

ಹಳೆಯ ವಸ್ತುಗಳನ್ನೆಲ್ಲ ಸಂಗ್ರಹಿಸಿ ಇಟ್ಟಿದ್ದು, ಅವುಗಳ ಕುರಿತು ಮಾಹಿತಿ ನೀಡುತ್ತಿರುವುದು ಖುಷಿ ಕೊಡುತ್ತದೆ. ಮಾದರಿ ರೈಲು, ಗಾರ್ಡನ್, ಅಲಂಕಾರ ಆಕರ್ಷಕವಾಗಿವೆ
ಮೇಘಾ ಕನ್ನೂರ, ಸ್ಥಳೀಯರು

ಮಲಪ್ರಭಾ ಘಟಕವು ಬುಕಿಂಗ್ ಆಫಿಸ್, ಸ್ಟೇಷನ್ ಮ್ಯಾನೇಜರ್ ರೂಮ್, ಟಿಕೆಟ್ ಕೌಂಟರ್, ಟಿಕೆಟ್ ಪ್ರಿಂಟಿಂಗ್ ಮಷಿನ್, ಲಾಕರ್‌ಗಳು, ಹಣ ಸಂಗ್ರಹಕ್ಕೆ ಬಳಸುತ್ತಿದ್ದ ಥಿಜೊರಿಗಳು, ವೆಟಿಂಗ್ ರೂಮ್, ಆರಾಮ ಕುರ್ಚಿ, ಹಳೆಯ ಲ್ಯಾಂಪ್‌ಗಳು, ಎಣ್ಣೆ ಹಾಕಿ ಬೆಳಕು ಹಚ್ಚುತ್ತಿದ್ದ ಪಣತಿ, ವಿವಿಧ ಆಕಾರದ ಚಿಮುನಿ, ಲಾಟನ್‌ಯಿಂದ ಹಿಡಿದು ಈಗಿನ ಎಲ್‌ಇಡಿ ಬಲ್ಬ್‌ವರೆಗೂ ಎಲ್ಲ ರೀತಿಯ ಬೆಳಕಿನ ಸಾಧನಗಳು, ರೇಲ್ವೆ ಸಿಬ್ಬಂದಿ ಒಬ್ಬರು ಪೆನ್ಸಿಲ್‌ ಸಹಾಯದಿಂದ ಬಿಡಿಸಿದ ಹಳೆಯ ರೈಲ್ವೆ ನಿಲ್ದಾಣಗಳ ಚೆಂದದ ಚಿತ್ರಗಳು ಇವೆ.

‘ವಸ್ತು ಸಂಗ್ರಹಾಲಯದ ಆವರಣದಲ್ಲಿ ಒಂದು ಸುತ್ತು ಹಾಕಿದರೆ, 50–60 ವರ್ಷದ ಹಿಂದೆ ಹೋದಂತೆ ಭಾಸವಾಗುತ್ತದೆ. ಆವರಣವನ್ನೂ ಅಷ್ಟೇ ಅಚ್ಚುಕಟ್ಟಾಗಿ ಇಡಲಾಗಿದೆ. ಈ ವಸ್ತುಸಂಗ್ರಹಾಲಯದ ಆವರಣವನ್ನು ವಿಸ್ತರಿಸುವ ಆಲೋಚನೆ ಇಲಾಖೆಗೆ ಇದೆ. ಕುಟುಂಬ ಸಮೇತರಾಗಿ ಹೋಗಿ ಒಂದೊಳ್ಳೆ ಸಮಯವನ್ನು, ಮನರಂಜನೆಯನ್ನು, ಉತ್ತಮ ಮಾಹಿತಿಯನ್ನು ಪಡೆಯಲು ಈ ಜಾಗ ಹೇಳಿ ಮಾಡಿಸಿದ್ದು’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಯಾವಾಗ ಭೇಟಿ ನೀಡಬಹುದು?
ಈ ವಸ್ತು ಸಂಗ್ರಹಾಲಯವು ಮಂಗಳವಾರದಿಂದ ಭಾನುವಾರದವರೆಗೆ ತೆರೆದಿರುತ್ತದೆ. ಮಂಗಳವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12 ರಿಂದ ಸಂಜೆ 7ರವರೆಗೆ ಶನಿವಾರ–ಭಾನುವಾರ ಮಧ್ಯಾಹ್ನ 12 ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ₹20 ಹಾಗೂ 5ರಿಂದ 12 ವರ್ಷದ ಒಳಗಿನ ಮಕ್ಕಳಿಗೆ ₹10 ಟಿಕೆಟ್ ದರವಿದೆ. ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಶನಿವಾರ ಮತ್ತು ಭಾನುವಾರ 400 ಜನ ಭೇಟಿ ನೀಡುತ್ತಾರೆ. ವರ್ಷಕ್ಕೆ ಅಂದಾಜು ₹10 ಲಕ್ಷ ಆದಾಯವಿದೆ.

ಆಕರ್ಷಕ ಥೇಟರ್, ರೆಸ್ಟೋರೆಂಟ್

ವಸ್ತು ಸಂಗ್ರಹಾಲಯದ ಆವರಣದಲ್ಲಿ ಹಳೆಯ ಎರಡು ಬೋಗಿಗಳನ್ನು ಥೇಟರ್ ಹಾಗೂ ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದೆ. ಥೇಟರ್‌ನ ಪ್ರವೇಶಕ್ಕಾಗಿ ₹20 ಶುಲ್ಕವಿದ್ದು, ಮಕ್ಕಳಿಗೆ ₹10 ನಿಗದಿಪಡಿಸಲಾಗಿದೆ. ಅತ್ಯಾಧುನಿಕ ವ್ಯವಸ್ಥೆ ಹೊಂದಿದ ಥೇಟರ್ ಇದಾಗಿದ್ದು, ಇಲ್ಲಿ ರೇಲ್ವೆ ಇಲಾಖೆ ಹಾಗೂ ಸಿಬ್ಬಂದಿಗೆ ಸಂಬಂಧಪಟ್ಟ ಕಿರುಚಿತ್ರ, ಸಾಕ್ಷಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ರೆಸ್ಟೋರೆಂಟ್ ಕೋಚ್ ಅತ್ಯಂತ ಆಕರ್ಷಕವಾಗಿದೆ. ಇಲ್ಲಿ ಕಿಟಕಿಯ ಜಾಗದಲ್ಲಿ ಸ್ಕ್ರೀನ್‌ಗಳನ್ನು ಇಟ್ಟಿದ್ದು, ರೈಲು ಓಡುವಾಗ ಕಾಣಬಹುದಾದ ಹೊರ ಜಗತ್ತಿನ ಚಿತ್ರಣದ ವಿಡಿಯೊವನ್ನು, ರೈಲು ಓಡುವ ಸದ್ದಿನೊಂದಿಗೆ ಸ್ಕ್ರಿನ್‌ಗಳ ಮೇಲೆ ಹಾಕಲಾಗುತ್ತದೆ. ಇದು ರೈಲಿನಲ್ಲಿ ಪ್ರಯಾಣಿಸುವ ಅನುಭವ ನೀಡುತ್ತದೆ. ಸದ್ಯ ಇಲ್ಲಿನ ಕ್ಯಾಂಟಿನ್ ಚಾಲ್ತಿಯಲ್ಲಿಲ್ಲ. ಶೀಘ್ರದಲ್ಲೇ ಕ್ಯಾಂಟಿನ್‌ ಆರಂಭಿಸಿ, ಈ ರೆಸ್ಟೋರೆಂಟ್‌ಲ್ಲಿ ಜನರಿಗೆ ಉಪಹಾರ ಒದಗಿಸುವ ಯೋಚನೆಯಿದೆ ಎನ್ನುತ್ತಾರೆ ಜೂನಿಯರ್ ಎಂಜಿನಿಯರ್ ಮಹಾರುದ್ರ.

ವಸ್ತು ಸಂಗ್ರಹಾಲಯದ ನಿರ್ವಹಣೆಗೆ 5 ಜನ ಸಿಬ್ಬಂದಿ ಇದ್ದಾರೆ. 4 ಮಂದಿ ಬೆಳಿಗ್ಗೆಯಿಂದ ಸಂಜೆವರೆಗೆ, ಒಬ್ಬರು ರಾತ್ರಿ ಕಾರ್ಯನಿರ್ವಹಿಸುತ್ತೇವೆ. ದಿನ ಬೆಳಿಗ್ಗೆ 10ಕ್ಕೆ ಬಂದು ಕೆಲಸ ಆರಂಭಿಸುತ್ತೇವೆ
ಮನಿಷ್, ಸಿಬ್ಬಂದಿ

ಹಣ ಸಂಗ್ರಹದ ಲಾಕರ್‌ಗಳು

ಬ್ಯಾಂಕ್‌ಗಳ ವ್ಯವಸ್ಥೆಯಿಲ್ಲದ ಕಾಲದಲ್ಲಿ ಹಣ ಸಂಗ್ರಹಿಸಲು ಬಳಸುತ್ತಿದ್ದ ಚರ್ಮದ ಚೀಲ, ಕಬ್ಬಿಣದ ಲಾಕರ್‌ಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು. ಸಣ್ಣ ರೈಲು ನಿಲ್ದಾಣಗಳಲ್ಲಿ ಹಣವನ್ನು ಸಂಗ್ರಹಿಸುವುದು ಸುಲಭದ್ದಾಗಿರಲಿಲ್ಲ. ಹೀಗಾಗಿ 100 ರಿಂದ 200 ಕೆಜಿ ಭಾರದ ಲಾಕರ್‌ಗಳನ್ನು ಇರಿಸಲಾಗುತ್ತಿತ್ತು.

ಆ ದಿನ ಸಂಗ್ರಹವಾದ ಹಣವನ್ನು ಚರ್ಮದ ಚೀಲದಲ್ಲಿ ಹಾಕಿ ಅದನ್ನು ಲಾಕರ್ ಒಳಗೆ ಹಾಕಿ ಒಂದು ಸುತ್ತು ಸುತ್ತಿದರೇ ಅದು ಲಾಕರ್‌ನ ಕೆಳ ಭಾಗದಲ್ಲಿ ಹೋಗಿ ಬೀಳುತ್ತಿತ್ತು. ಹಾಕಿದ ಹಣವನ್ನು ಹೊರ ತೆಗೆಯಬೇಕೆಂದರೆ ಕೆಳಭಾಗದಲ್ಲಿರುವ ಕೀಲಿಯನ್ನು ತೆಗೆಯಬೇಕಿದ್ದು, ಆ ಕೀಲಿಯ ಕೈ ಕೇಂದ್ರ ನಿಲ್ದಾಣದ ಅಧಿಕಾರಿ ಬಳಿ ಇರುತ್ತಿತ್ತು. ಕಚೇರಿಯಲ್ಲಿ ಬಳಸುತ್ತಿದ್ದ ಸುಮಾರು 100 ವರ್ಷದ ಹಳೆಯ ಲಾಕರ್‌ಗಳೂ ಇಲ್ಲಿವೆ.

ಮಕ್ಕಳಿಗೆ ಆಡಲು ಟಾಯ್ ಟ್ರೈನ್, ಥೇಟರ್, ರೈಲಿನ ಹಳೆ ಕೊಚ್‌ಗಳು ನೋಡುಗರನ್ನು ಸೆಳೆಯುತ್ತವೆ. ಕುಟುಂಬ ಸಮೇತ ಬಂದು ಒಳ್ಳೇಯ ಸಮಯ ಕಳೆಯಬಹುದು. ರೈಲು ಕುರಿತು ಮಾಹಿತಿ ಪಡೆಯಬಹುದು.
ಅಕ್ಷಯ ಬಾಗಡೆ, ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT