ಭಾನುವಾರ, ಆಗಸ್ಟ್ 1, 2021
20 °C

‘ಇನ್ಫೊಸಿಸ್‌ಗೆ ಗ್ರಾಹಕರ ಕಳೆದುಕೊಳ್ಳುವ ಆತಂಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಬೇರೆ ನಗರಗಳಿಗೆ ಬಂದರೆ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕ ಹಾಗೂ ಸಂಸ್ಥೆ ಸಿಬ್ಬಂದಿ ಬೆಂಗಳೂರು ಬಿಟ್ಟು ಬರದಿರುವ ಕಾರಣ ಇನ್ಫೊಸಿಸ್, ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ಮಾಡಲು ಹಿಂದೇಟು ಹಾಕುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಸಾಯಿನಗರದ ದಾನಮ್ಮ ಗುಡಿ ಮುಖ್ಯ ರಸ್ತೆಯ ಕಾಂಕ್ರೀಟ್‌ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ₹350 ಕೋಟಿ ವೆಚ್ಚ ಮಾಡಿ ಗೋಕುಲ ರಸ್ತೆಯಲ್ಲಿ ಇನ್ಫೊಸಿಸ್‌ ಅತ್ಯಾಧುನಿಕ ಕ್ಯಾಂಪಸ್‌ ನಿರ್ಮಿಸಿದೆ. ಆದರೆ, ಅದರ ಗ್ರಾಹಕರು ಬೆಂಗಳೂರಲ್ಲಿಯೇ ವ್ಯವಹಾರ ಕಂಡುಕೊಂಡಿದ್ದರಿಂದ ಅಲ್ಲಿಯೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದರಿಂದಾಗಿ ಇಲ್ಲಿ ಕಂಪನಿ ಕಾರ್ಯಾರಂಭ ಮಾಡಲು ವಿಳಂಬವಾಗುತ್ತಿದೆ ಎಂದರು.

ಹುಬ್ಬಳ್ಳಿಯಲ್ಲಿ ವಿಮಾನ, ರೈಲು, ಸಾರಿಗೆಯಂಥ ಎಲ್ಲ ಮೂಲ ಸೌಲಭ್ಯಗಳು ಅಭಿವೃದ್ಧಿಯಾಗಿವೆ. ಆದಷ್ಟು ಬೇಗ ಇಲ್ಲಿ ಕಾರ್ಯ ಆರಂಭಿಸುವಂತೆ ಒತ್ತಡ ಹೇರುತ್ತಲೇ ಇದ್ದೇವೆ’ ಎಂದು ಹೇಳಿದರು.

‘ಧಾರವಾಡದ ಮಮ್ಮಿಗಟ್ಟಿ, ಬೈಲೂರು ಕೈಗಾರಿಕಾ ವಸಹಾತು ಪ್ರದೇಶದಲ್ಲಿ ಯುಪ್ಲೆಕ್ಸ್‌, ರಾಜೇಶ ಮೆಹ್ತಾ ಎಕ್ಸ್‌ಪೋರ್ಟ್‌ ಕಂಪನಿಗಳಿಗೆ ಜಾಗ ನೀಡಿದ್ದು, ಒಂದೆರಡು ತಿಂಗಳಲ್ಲಿ ಕೈಗಾರಿಕೆ ಆರಂಭಿಸಲಿದ್ದಾರೆ’ ಎಂದು ತಿಳಿಸಿದರು.

‘ಅವಳಿ ನಗರದಲ್ಲಿ ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗೆ ಹಾಗೂ ತಗ್ಗು ಬಿದ್ದ ರಸ್ತೆ ದುರಸ್ತಿಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈಲ್ವೆ ಸ್ಟೇಷನ್‌ಗೆ ಸಂಪರ್ಕ ಕಲ್ಪಿಸುವ ಕೆಳಸೇತುವೆಯ ಗದಗ ರಸ್ತೆ ಕಾಮಗಾರಿ ಸ್ವಲ್ಪ ಬಾಕಿಯಿದೆ. ಅದನ್ನು ಕೂಡಲೇ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಗದಗ–ಗಬ್ಬೂರ್‌ ಬೈಪಾಸ್‌ ರಸ್ತೆ ಕಾಮಗಾರಿ ಸಹ ಬಾಕಿಯಿದ್ದು, ಅದು ಪೂರ್ಣಗೊಂಡರೆ ಟ್ರಾಫಿಕ್‌ ಐಲ್ಯಾಂಡ್‌ ರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ’ ಎಂದರು.

ಯಾರೂ ದೂರು ನೀಡಿಲ್ಲ: ಶೆಟ್ಟರ್‌

ಕೈಗಾರಿಕೆಗಳಿಗೆ ಆಮ್ಲಜನಕ ಕೊರತೆಯಾಗಿದೆ ಎಂದು ಈವರೆಗೆ ಯಾರೂ ದೂರು ನೀಡಿಲ್ಲ ಎಂದು ಸಚಿವ ಶೆಟ್ಟರ್‌ ಹೇಳಿದರು.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರತಿದಿನ 1,200 ಮೆಟ್ರಿಕ್‌ ಟನ್‌ ಆಮ್ಲಜನಕ ವೈದ್ಯಕೀಯ ಬಳಕೆಗೆ ಅಗತ್ಯವಿತ್ತು. ಇದೀಗ ಕೋವಿಡ್‌ ಪ್ರಕರಣ ಪ್ರಮಾಣ ಕಡಿಮೆಯಾಗಿದ್ದು, ಅಷ್ಟೊಂದು ಅಗತ್ಯವಿಲ್ಲ. ರಾಜ್ಯದಲ್ಲಿ ಪ್ರತಿದಿನ 800 ರಿಂದ 900 ಮೆಟ್ರಿಕ್‌ ಟನ್‌ ಉತ್ಪಾದನೆಯಾಗುತ್ತದೆ. ಅದರಲ್ಲಿ 500 ಮೆಟ್ರಿಕ್‌ ಟನ್‌ ವೈದ್ಯಕೀಯ ಬಳಕೆಗೆ ಇಟ್ಟುಕೊಂಡು, ಉಳಿದದನ್ನು ಕೈಗಾರಿಕೆಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು  ಸಚಿವ ಶೆಟ್ಟರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು