ಗುರುವಾರ , ಮೇ 26, 2022
26 °C
ಸಾಂಸ್ಕೃತಿಕ ಭವನದಲ್ಲಿ ಸ್ಥಾಪನೆ; ಒಂದೇ ಕಡೆ ಹಲವು ಸೇವೆಗಳ ಮೇಲೆ ನಿಗಾ, ನಿಯಂತ್ರಣ

ಹು–ಧಾ ಮಹಾನಗರ ಪಾಲಿಕೆ ಸೇವೆಗಳ ಕಾರ್ಯಾಚರಣೆಗೆ ಕಮಾಂಡ್ ಕೇಂದ್ರ ಸಜ್ಜು

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸಾಂಸ್ಕೃತಿಕ ಭವನದಲ್ಲಿ ಸುಸಜ್ಜಿತ ಕಮಾಂಡ್ ಕೇಂದ್ರ ಮತ್ತು ನಿಯಂತ್ರಣ ಕೊಠಡಿ ತಲೆ ಎತ್ತಿದೆ. ಸದ್ಯ ಅಂತಿಮ ಹಂತದ ತಯಾರಿ ಜೊತೆಗೆ, ಪ್ರಾಯೋಗಿಕ ಹಂತದ ಕಾರ್ಯಾಚರಣೆ ಮತ್ತು ಅಲ್ಲಿನ ಸಿಬ್ಬಂದಿಯನ್ನು ಅಣಿಗೊಳಿಸುವ ಕೆಲಸ ನಡೆಯುತ್ತಿದೆ.

ಕೇಂದ್ರ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಿದರೆ, ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಇಲಾಖೆಗಳ ಸೇವೆಗಳ ನಿಗಾ ಮತ್ತು ನಿಯಂತ್ರಣ ಕೆಲಸ ಇಲ್ಲಿಂದಲೇ ಸಾಧ್ಯವಾಗಲಿದೆ.

ಕಾರ್ಯಾಚರಣೆ ಹೇಗೆ?

ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿ (ಜಿಐಎಸ್) ಪಾಲಿಕೆ ವ್ಯಾಪ್ತಿಯ ಪ್ರದೇಶದ ಮೇಲೆ ಕೇಂದ್ರ‌ನಲ್ಲಿ ದಿನದ ಇಪ್ಪತ್ತನಾಲ್ಕು ತಾಸು ನಿಗಾ ಇಡಲಾಗುತ್ತದೆ. ಅವಳಿ ನಗರದಾದ್ಯಂತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಎಲ್ಲಿ, ಏನು ನಡೆಯುತ್ತಿದೆ ಎಂಬುದನ್ನು ಸಿಬ್ಬಂದಿ ತಮ್ಮ ಕಂಪ್ಯೂಟರ್‌ ಮತ್ತು ಕೇಂದ್ರ‌ನಲ್ಲಿರುವ ದೊಡ್ಡ ಪರದೆಯಲ್ಲಿ ವೀಕ್ಷಿಸುತ್ತಾರೆ.

‘ಘನತ್ಯಾಜ್ಯ ನಿರ್ವಹಣೆ ನಿಗಾ ಮತ್ತು ನಿಯಂತ್ರಣವನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಮನೆ ಮನೆಗೆ ಆಟೊ ಟಿಪ್ಪರ್‌ಗಳು ಹೋಗುತ್ತಿವೆಯೇ? ಪೌರ ಕಾರ್ಮಿಕರು ಕಸ ಸಂಗ್ರಹಿಸಿದ ಬಳಿಕ ತಮಗೆ ಕೊಟ್ಟಿರುವ ಆರ್‌ಎಫ್‌ಡಿ ಟ್ಯಾಗ್‌ ರೀಡ್ ಮಾಡುತ್ತಿದ್ದಾರೆಯೇ? ವಾಹನಗಳ ಕಾರ್ಯಾಚರಣೆ ಹೇಗಿದೆ? ಸಾರ್ವಜನಿಕ ಸ್ಥಳಗಳಲ್ಲಿ ಕಸ ತೆರವಿಗೆ ಸಂಬಂಧಿಸಿದ ಮಾಹಿತಿಯನ್ನು ಸಿಬ್ಬಂದಿ ಕುಳಿತಲ್ಲೇ ವೀಕ್ಷಿಸಿ, ಸಂಬಂಧಪಟ್ಟವರಿಗೆ ಮಾಹಿತಿ ಕಳಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ತಳಮಟ್ಟದ ಸಿಬ್ಬಂದಿಗೂ ನಿಯಮಿತವಾಗಿ ತರಬೇತಿ ನೀಡಲಾಗುತ್ತಿದೆ’ ಎಂದು ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಂದೆ ಅವಳಿ ನಗರದ ಆಸ್ಪತ್ರೆಗಳ ಮಾಹಿತಿ, ಶಾಲಾ–ಕಾಲೇಜುಗಳು, ಇಂಟೆಲಿಜೆಂಟ್ ಸಾರಿಗೆ ನಿರ್ವಹಣಾ ವ್ಯವಸ್ಥೆ, ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ–ನಿಗಾ, ವಿದ್ಯುತ್ ಪೂರೈಕೆ ಮತ್ತು ಸಮಸ್ಯೆ, ಮಳೆ ಅನಾಹುತ ಮತ್ತು ಪ್ರವಾಹದ ಎಚ್ಚರಿಕೆ, ಸಂಚಾರ ದಟ್ಟಣೆ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳ ಹಲವು ಸೇವೆಗಳು ಇಲ್ಲಿ ಆರಂಭವಾಗಲಿವೆ. ಇದಕ್ಕೆ ಪೂರಕವಾಗಿ ನಗರದ ಮುಖ್ಯ ಭಾಗಗಳಲ್ಲಿ ಸ್ಮಾರ್ಟ್ ಕಂಬ ಹಾಗೂ ಡಿಜಿಟಲ್ ಬೋರ್ಡ್ ಅಳವಡಿಲಾಗುವುದು’ ಎಂದು ಹೇಳಿದರು.

ಅಹವಾಲು ಸಲ್ಲಿಸಲು ಆ್ಯಪ್

‘ಸಾರ್ವಜನಿಕರು ಯಾವುದೇ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಲು ‘ಸಿಟಿಜನ್’ ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ತೆರವು ಮಾಡದಿದ್ದರೆ, ಸ್ಥಳೀಯರು ಆ್ಯಪ್‌ನಲ್ಲಿ ಚಿತ್ರ ತೆಗೆದು ಪೋಸ್ಟ್ ಮಾಡಿದರೆ ತಕ್ಷಣ ಅದು ಕಮಾಂಡ್ ಕೇಂದ್ರ‌ ತಲುಪಲಿದೆ. ಅಲ್ಲಿಂದ, ಸಂಬಂಧಪಟ್ಟ ಸಿಬ್ಬಂದಿ ಹೋಗಲಿದೆ. ನಿಗದಿತ ಅವಧಿಯಲ್ಲಿ ಕಸ ತೆರವು ಮಾಡಿ ಅದರ ಚಿತ್ರವನ್ನು ಸಿಬ್ಬಂದಿ ಪೋಸ್ಟ್ ಮಾಡಬೇಕು. ಇಲ್ಲದಿದ್ದರೆ, ಆ ಕುರಿತು ಮೇಲಧಿಕಾರಿಗಳಿಗೆ ದೂರು ಹೋಗಲಿದೆ. ಕೇಂದ್ರ ನಿರ್ವಹಣೆಯನ್ನು ಟೆಂಡರ್‌ ಮೂಲಕ ಎನ್‌ಇಸಿ ಕಂಪನಿಗೆ ಐದು ವರ್ಷಗಳ ಅವಧಿಗೆ ನೀಡಲಾಗಿದೆ’ ಎಂದು ತಿಳಿಸಿದರು.

ಪಾಲಿಕೆ ನಿಯಂತ್ರಣ ಕೊಠಡಿ ಸ್ಥಳಾಂತರ

‘ಕಮಾಂಡ್ ಕೇಂದ್ರಕ್ಕೆ ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿ ಸ್ಥಳಾಂತರಿಸುವ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿವೆ. ಅದಕ್ಕಾಗಿ, ಸೆಂಟರ್‌ನಲ್ಲಿ ಸುಸಜ್ಜಿತ ಕೊಠಡಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಎಲ್ಲವೂ ಒಂದೇ ಕಡೆ ಇದ್ದರೆ ಒಳ್ಳೆಯದು ಎಂಬ ಉದ್ದೇಶದಿಂದ ನಿಯಂತ್ರಣ ಕೊಠಡಿಯನ್ನು ಕಮಾಂಡ್ ಸೆಂಟರ್‌ ಇರುವಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು