ಹುಬ್ಬಳ್ಳಿ: ‘ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ, ಎಪಿಎಂಸಿ (ನಿಯಂತ್ರಣ ಅಭಿವೃದ್ಧಿ) ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ (ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಬೇಕು ಎಂದು ಆಗ್ರಹಿಸಿ, ಮಾರ್ಚ್ 1ರಿಂದ 15ರವರೆಗೆ ಜನಾಂದೋಲನ ಮಹಾಮೈತ್ರಿ(ಜೆಎನ್‌ಎಂ)ನಿಂದ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಹೇಳಿದರು.
‘ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಹಾಗೂ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಿಂದ ಆರಂಭಗೊಳ್ಳಲಿರುವ ಜಾಥಾಗೆ ರೈತ ಸಂಘದ ಬಡಗಲಪುರ ನಾಗೇಂದ್ರ, ಕಾರ್ಮಿಕ ಸಂಘಟನೆಯ ವರಲಕ್ಷ್ಮಿ ಹಾಗೂ ದಲಿತ ಸಂಘಟನೆಯ ಮುಖಂಡರೊಬ್ಬರು ಚಾಲನೆ ನೀಡಲಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ವಿವಿಧ ಜಿಲ್ಲೆಗಳನ್ನು ಹಾದು ಬರುವ ಜಾಥಾವನ್ನು ರೈತ, ಕೃಷಿ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲಿಸಲಿದ್ದು, ಅಲ್ಲಲ್ಲಿ ಸಣ್ಣ ಸಭೆಗಳು ನಡೆಯಲಿದೆ. ಈ ವೇಳೆ ಕೃಷಿ ಬಿಕ್ಕಟ್ಟು ಸೇರಿದಂತೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಜನ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗುವುದು. ಅಂತಿಮವಾಗಿ ಮಾರ್ಚ್ 15ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾರೋಪಗೊಳ್ಳಲಿದೆ’ ಎಂದರು.
‘ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್, ವಕೀಲ ಪ್ರಶಾಂತ ಭೂಷಣ್, ಹೊನ್ನನ ಮಲ್ಲ ಸೇರಿದಂತೆ ವಿವಿಧ ಹೋರಾಟಗಾರರು ಜಾಥಾವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದರು.
ವಿ.ಆರ್. ಪಾಟೀಲ ಮಾತನಾಡಿ, ‘ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ ಕಾಯ್ದೆಗಳನ್ನು ರದ್ದುಪಡಿಸದಿದ್ದರೆ, ರೈತ ಸಂಘಟನೆಗಳು ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದಂತೆ ಕರ್ನಾಟಕದಲ್ಲೂ ಪ್ರತಿಭಟಿಸಲಾಗುವುದು. ರೈತರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡವರಿಗೆ ರೈತ ಸಂಘಟನೆಗಳು ಚುನಾವಣೆಯಲ್ಲಿ ಬಿಸಿ ಮುಟ್ಟಿಸಿರುವ ನಿದರ್ಶನ ನಮ್ಮ ಮುಂದಿದೆ. ಕಾಯ್ದೆಗಳು ರದ್ದಾಗದಿದ್ದರೆ ರಾಜ್ಯದಲ್ಲೂ ಅದು ಮರುಕಳಿಸಲಿದೆ’ ಎಂದು ಹೇಳಿದರು.
ಮಹಾಮೈತ್ರಿಯ ಎಂ.ಸಿ. ಹಾವೇರಿ, ಎನ್.ಸಿ. ದೊಡ್ಡಮನಿ, ಎಸ್.ವಿ. ಮಕ್ಕಾವಿ ಹಾಗೂ ಐ.ಜಿ. ಪುಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.