ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಹೊಸೂರು ವೃತ್ತಕ್ಕೆ ಜನತಾ ಬಜಾರ್ ಸ್ಥಳಾಂತರ

ಭಾರತ್ ಮಿಲ್ ಜಾಗ ಕೈಬಿಟ್ಟ ಪಾಲಿಕೆ; ಕ್ಲಾರ್ಕ್ಸ್ ಇನ್ ಹೋಟೆಲ್ ಬಳಿ ತರಕಾರಿ ವ್ಯಾಪಾರಕ್ಕೆ ಅವಕಾಶ
Last Updated 18 ಜುಲೈ 2020, 16:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಜನತಾ ಬಜಾರ್‌ ಜಾಗದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸುವುದಕ್ಕಾಗಿ, ಅಲ್ಲಿನ 177 ವ್ಯಾಪಾರಿಗಳನ್ನು ತಾತ್ಕಾಲಿಕವಾಗಿ ಹೊಸೂರು ವೃತ್ತ ಮತ್ತು ಗೋಕುಲ ರಸ್ತೆಯ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕದಲ್ಲಿರುವ ಪಾಲಿಕೆಯ ಖಾಲಿ ಜಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮಾರುಕಟ್ಟೆ ನಿರ್ಮಾಣವಾಗಲಿದೆ.

ಹೊಸೂರು ವೃತ್ತದಲ್ಲಿರುವ ಪಾಲಿಕೆಗೆ ಸೇರಿದ ವಾಣಿಜ್ಯ ಸಂಕೀರ್ಣದ ಹಿಂಭಾಗ ಖಾಲಿ ಜಾಗಕ್ಕೆ, ಮೋಹನ ಏಕಬೋಟೆ ರಸ್ತೆ ಕಡೆಯಿಂದ ಮತ್ತು ಸಚಿನ್ ಬಾರ್ ಅಂಡ್ ರೆಸ್ಟೊರೆಂಟ್ ಕಡೆಯಿಂದ ಪ್ರವೇಶವಿದೆ. ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ ಇರುವ ಖಾಲಿ ಜಾಗವನ್ನು ಸದ್ಯ ಹೋಟೆಲ್‌ನ ವಾಹನಗಳನ್ನು ನಿಲ್ಲಿಸಲು ಬಳಸಿಕೊಳ್ಳಲಾಗುತ್ತಿದೆ. ಈ ಜಾಗ ಕೊಳಚೆ ಹರಿಯುವ ರಾಜ ನಾಲಾಗೆ ಹೊಂದಿಕೊಂಡಂತಿದೆ.

ವ್ಯಾಪಾರಿಗಳ ವಿಂಗಡಣೆ:‘ಕಿರಾಣಿ ಮತ್ತು ಸ್ಪೇಷನರಿ ಅಂಗಡಿ ಹೊಂದಿರುವ 50 ವ್ಯಾಪಾರಿಗಳನ್ನು ಹೊಸೂರು ವೃತ್ತಕ್ಕೆ ಮತ್ತು ಕಾಯಿ ಪಲ್ಲೆ ಮಾರಾಟಗಾರರನ್ನು ಕ್ಲಾರ್ಕ್ಸ್ ಇನ್ ಹೋಟೆಲ್ ಬಳಿ ಇರುವ ಜಾಗಕ್ಕೆ ಸ್ಥಳಾಂತರಿಲು ನಿರ್ಧರಿಸಲಾಗಿದೆ. ವ್ಯಾಪಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಪಾಲಿಕೆ ಸೂಚನೆ ನೀಡಿದೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ಯಾಪಾರಿಗಳ ಸ್ಥಳಾಂತರ ಮತ್ತು ಪುನರ್ವಸತಿಗೆ ₹30 ಲಕ್ಷ ಮೀಸಲಿರಿಸಲಾಗಿದ್ದು, ತಾತ್ಕಾಲಿಕವಾಗಿ ಶೆಡ್‌ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಗಳನ್ನು ಮಾಡಿಕೊಡಲಾಗುವುದು. ಹೊಸೂರಿನಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದೆ’ ಎಂದು ಹೇಳಿದರು.

‘ಜನತಾ ಬಜಾರ್‌ನ ಜಾಗದ ವಿಸ್ತೀರ್ಣ 7,432 ಚ.ಮೀ. ಇದೆ. ಉದ್ದೇಶಿತ ಜಾಗದಲ್ಲಿ ತಲೆ ಎತ್ತಲಿರುವ ಜಿ+3 ಹಾಗೂ ಬೇಸ್‌ಮೆಂಟ್ ಮಾರುಕಟ್ಟೆ ಕಟ್ಟಡದಲ್ಲಿ 18 ಕಟ್ಟಾಗಳು ಮತ್ತು 72 ಮಳಿಗೆಗಳು ಇರಲಿವೆ’ ಎಂದು ಮಾಹಿತಿ ನೀಡಿದರು.

ಬೇರೆ ಜಾಗ ಗುರುತಿಸಲಿ:‘ಸದ್ಯ ಪಾಲಿಕೆಯವರು ಗುರುತಿಸಿರುವ ಹೊಸೂರು ವೃತ್ತ ಮತ್ತು ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕದ ಖಾಲಿ ಜಾಗ ಅತ್ಯಂತ ಕಿರಿದಾಗಿದೆ. ಅಲ್ಲಿಗೆ ಎಲ್ಲಾ ವ್ಯಾಪಾರಿಗಳಿಗೆ ಸ್ಥಳಾವಕಾಶ ನೀಡಲು ಆಗುವುದಿಲ್ಲ. ಹಾಗಾಗಿ, ಪಾಲಿಕೆಯವರು ಬೇರೆ ಸ್ಥಳವನ್ನು ಗುರುತಿಸಬೇಕು’ ಎಂದು ಜನತಾ ಬಜಾರ್ ಚಿಕ್ಕ ವರ್ತಕರ ಸಂಘದ ಗೌರವ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಒತ್ತಾಯಿಸಿದರು.

***

ಇದಕ್ಕೂ ಮುಂಚೆ ಗಿರಣಿಚಾಳದ ಬಳಿ ಗುರುತಿಸಿದ್ದ ಭಾರತ್ ಮಿಲ್‌ಗೆ ಸೇರಿದ್ದ ಖಾಲಿ ಮೈದಾನವು ವಿವಾದದಲ್ಲಿದೆ. ಹಾಗಾಗಿ, ಬೇರೆ ಜಾಗಗಳನ್ನು ಗುರುತಿಸಲಾಗಿದೆ.

- ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ

‘ಸ್ಥಳಾವಕಾಶ ಆಧರಿಸಿ ಸ್ಥಳಾಂತರ’

‘ಜನತಾ ಬಜಾರ್ ಮಾರುಕಟ್ಟೆಯ ಐದು ಬ್ಲಾಕ್‌ಗಳ ಪೈಕಿ, ಹೊಸ ಮಾರುಕಟ್ಟೆಗೆ ಎರಡು ಬ್ಲಾಕ್‌ಗಳನ್ನು ಮಾತ್ರ ತೆರವುಗೊಳಿಸಲಾಗುವುದು. ಉಳಿದ ಮೂರರಲ್ಲಿ ಕೆಲ ವ್ಯಾಪಾರಿಗಳಿಗೆ ಅಲ್ಲೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು, ಉಳಿದವರನ್ನು ಹೊಸೂರು ವೃತ್ತದಲ್ಲಿರುವ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಜಾಗದ ಕೊರತೆ ಎದುರಾದರೆ, ತರಕಾರಿ ವ್ಯಾಪಾರಿಗಳಿಗೆ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ ಇರುವ ಪಾಲಿಕೆಯ ಖಾಲಿ ಜಾಗದಲ್ಲಿ ವ್ಯವಸ್ಥೆ ಕಲ್ಪಿಸುವ ಆಲೋಚನೆ ಇದೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದರು.

₹18.36 ಕೋಟಿಜನತಾ ಬಜಾರ್‌ನಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಯೋಜನೆಯ ಮೊತ್ತ

18 ತಿಂಗಳುಕಾಮಗಾರಿಯ ಅವಧಿ

177ಜನತಾ ಬಜಾರ್‌ನಲ್ಲಿರುವ ವ್ಯಾಪಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT