ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಅಭಿವೃದ್ಧಿ ಎಲ್ಲರ ಕರ್ತವ್ಯ: ದಿನೇಶ್‌ ಗುಂಡೂರಾವ್‌ ಅಭಿಮತ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಭಿಮತ
Last Updated 19 ಡಿಸೆಂಬರ್ 2018, 14:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿರುವುದು ಕೇವಲ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಮಾತ್ರವಲ್ಲ. ಎಲ್ಲ ರಾಜಕೀಯ ಪಕ್ಷಗಳ ಹಾಗೂ ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಮೈತ್ರಿ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯಿಸಿದೆ ಎಂಬ ಆರೋಪದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ಮತ್ತು ಇಂದಿನ ಮೈತ್ರಿ ಸರ್ಕಾರಗಳೆರಡೂ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಆದ್ಯತೆ ನೀಡಿವೆ ಎಂದರು.

ಉತ್ತರ ಕರ್ನಾಟಕ್ಕೆ ಹಲವು ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಈಗಾಗಲೇ ಕೆಇಟಿ ಪೀಠ ಬೆಳಗಾವಿಯಲ್ಲಿ ಆರಂಭಗೊಂಡಿದೆ. ಶೀಘ್ರದಲ್ಲೇ ಕಲಬುರ್ಗಿಯಲ್ಲಿ ಮತ್ತೊಂದು ಕೆಇಟಿ ಪೀಠ ಆರಂಭವಾಗಲಿದೆ ಎಂದು ಹೇಳಿದರು.

ಶೀಘ್ರದಲ್ಲೇ ಹಂಚಿಕೆ:

ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್‌, ಜೆಡಿಎಸ್ ನಡುವೆ ಆಂತರಿಕ ಚರ್ಚೆ ನಡೆದಿದೆ. ಶೀಘ್ರದಲ್ಲೇ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ ಎಂದರು.

ಮಹಿಳೆಯರಿಗೆ ಆದ್ಯತೆ:

ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಅಮರನಾಥ ಹೇಳಿದರು.

ಸಚಿವ ಸಂಪುಟ ವಿಸ್ತರಣೆಯಲ್ಲೂ ಮಹಿಳೆಯರಿಗೆ ಆದ್ಯತೆ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಈಗಾಗಲೇ ಶೇ 50ರಷ್ಟು ಮೀಸಲಾತಿ ಸಿಕ್ಕಿದೆ. ಇದೇ ರೀತಿ ಲೋಕಸಭೆ, ವಿಧಾನಸಭೆಯಲ್ಲೂ ಮೀಸಲಾತಿ ಸಿಕ್ಕರೆ. ರಾಜಕೀಯವಾಗಿ ಮಹಿಳೆಯರು ಬೆಳೆಯಲು ಅವಕಾಶ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಂತ್ವನ:

ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಅವರ ತಂದೆ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ ದಿನೇಶ್‌ ಗುಂಡೂರಾವ್‌ ಮತ್ತು ‍ಪುಷ್ಪಲತಾ ಅಮರನಾಥ್‌, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಮುಖಂಡರಾದ ಸದಾನಂದ ಡಂಗನವರ, ಬಂಗಾರೇಶ ಹಿರೇಮಠ, ರಾಜಾ ದೇಸಾಯಿ, ಪಾರಸಮಲ್‌ ಜೈನ್‌, ಮಹೇಂದ್ರ ಸಿಂಘಿ, ರಜತ್‌ ಉಳ್ಳಾಗಡ್ಡಿಮಠ, ನವೀದ್‌ ಮುಲ್ಲಾ, ಬಸವರಾಜ ಕಿತ್ತೂರ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ದೇವಕಿ ಯೋಗಾನಂದ, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT