ಕುಂದಗೋಳ ‘ಕೈ’ ವಶಕ್ಕೆ ರಣತಂತ್ರ

ಸೋಮವಾರ, ಮೇ 27, 2019
33 °C
ಸೋಮವಾರದಿಂದ ಕಾಂಗ್ರೆಸ್‌ ಸಚಿವರು, ಶಾಸಕರಿಂದ ಹಳ್ಳಿ, ಹಳ್ಳಿಗಳಲ್ಲಿ ರೋಡ್‌ ಷೋ

ಕುಂದಗೋಳ ‘ಕೈ’ ವಶಕ್ಕೆ ರಣತಂತ್ರ

Published:
Updated:
Prajavani

ಹುಬ್ಬಳ್ಳಿ: ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಹಠಾತ್‌ ನಿಧನದಿಂದ ತೆರವಾಗಿರುವ ಕುಂದಗೋಳ ವಿಧಾನಸಭಾ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ರಣತಂತ್ರ ರೂಪಿಸತೊಡಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಶನಿವಾರ ನಗರದ ‘ಮಂತ್ರಾ’ ರೆಸಿಡೆನ್ಸಿಯಲ್ಲಿ ಗೌಪ್ಯ ಸಭೆ ನಡೆಸಿ, ಉಪಚುನಾವಣಾ ಉಸ್ತುವಾರಿಗೆ ನಿಯೋಜನೆಗೊಂಡಿರುವ ಸಚಿವರು, ಶಾಸಕರು, ಮುಖಂಡರೊಂದಿಗೆ ದಿನಪೂರ್ತಿ ಕಾರ್ಯತಂತ್ರವನ್ನು ಹೆಣೆದರು.

ವಿರೋಧ ಪಕ್ಷ ಬಿಜೆಪಿಯು ಸರ್ಕಾರವನ್ನು ಉರುಳಿಸಲು ಕಾರ್ಯತಂತ್ರ ಹೆಣೆಯುತ್ತಿರುವುದರಿಂದ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆ ಅತ್ಯಂತ ಮಹತ್ವದಾಗಿದೆ. ಯಾವುದೇ ಕಾರಣಕ್ಕೂ ಗೆಲುವನ್ನು ಕೈಚೆಲ್ಲಬಾರದು. ಎಲ್ಲಿಯೂ ಸಣ್ಣ ವ್ಯತ್ಯಾಸವೂ ಆಗದಂತೆ ಎಚ್ಚರವಹಿಸಬೇಕು ಎಂದು ದಿನೇಶ್‌ ಗುಂಡೂರಾವ್‌ ಕಟ್ಟುನಿಟ್ಟಿನ ಸೂಚನೆ ರವಾನಿಸಿದರು.

ಮಿತ್ರ ಪಕ್ಷ ಜೆಡಿಎಸ್‌ ಮುಖಂಡರಾದ ಬಸವರಾಜ ಹೊರಟ್ಟಿ, ಎನ್‌.ಎಚ್‌.ಕೋನರಡ್ಡಿ, ಎಂ.ಎಸ್‌.ಅಕ್ಕಿ ಹಾಗೂ ಟಿಕೆಟ್‌ ಸಿಗದೇ ಅಸಮಧಾನಗೊಂಡಿದ್ದ ಪಕ್ಷದ ಮುಖಂಡರನ್ನು ಜೊತೆಯಲ್ಲಿ ಕರೆದುಕೊಂಡು ಮತಯಾಚಿಸುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಲಹೆ ನೀಡಿದರು.

ಸಚಿವರು, ಶಾಸಕರು ನಿಯೋಜನೆ:

ಕುಂದಗೋಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆರು ಜಿಲ್ಲಾ ಪಂಚಾಯಿತಿ ಮತ್ತು ಕುಂದಗೋಳ ಪಟ್ಟಣ ಪಂಚಾಯ್ತಿಗೆ ತಲಾ ಒಬ್ಬ ಸಚಿವರನ್ನು ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿರುವ 40 ಗ್ರಾಮ ಪಂಚಾಯ್ತಿಗೆ ತಲಾ ಒಬ್ಬ ಶಾಸಕರನ್ನು ಚುನಾವಣಾ ಉಸ್ತುವಾರಿಯಾಗಿ ನಿಯೋಜಿಸಲಾಗಿದೆ. ಅವರ ಜೊತೆ ಮಾಜಿ ಶಾಸಕರು, ಮುಖಂಡರು ಸೇರಿದಂತೆ ತಲಾ 20 ಪ್ರಭಾವಿ ಮುಖಂಡರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರದಿಂದ ಪ್ರಚಾರ:

ಸೋಮವಾರದಿಂದ(ಮೇ 6) ಒಂದು ವಾರಗಳ ಕಾಲ ಎಲ್ಲಾ ಉಸ್ತುವಾರಿಗಳು ತಮಗೆ ನಿಯೋಜಿಸಿರುವ ಹಳ್ಳಿಗಳಲ್ಲಿ ತೆರೆದ ವಾಹನಗಳಲ್ಲಿ ರೋಡ್‌ ಷೋ ನಡೆಸಲಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಮನೆ, ಮನೆಗೆ ತೆರಳಿ ಅಭ್ಯರ್ಥಿ ಪರ ಕರಪತ್ರಗಳನ್ನು ವಿತರಿಸುವ ಮೂಲಕ ಮತಯಾಚಿಸಲಿದ್ದಾರೆ ಎಂದರು.

ಮೇ 13ರ ಬಳಿಕ ಕ್ಷೇತ್ರದ ಆಯ್ದ ಭಾಗಗಳಲ್ಲಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಜಾತಿವಾರು ನಿಯೋಜನೆ:

ಆಯಾ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಬಲ್ಯ ಇರುವ ಜಾತಿಗಳಿಗೆ ಅನುಗುಣವಾಗಿ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಖಚಿತ ಪಡಿಸಿದರು.

ಸಚಿವರಾದ ಆರ್.ಬಿ.ತಿಮ್ಮಾಪುರ, ಯು.ಟಿ.ಖಾದರ್‌, ಶಿವಶಂಕರ ರೆಡ್ಡಿ, ಬೆಳಗಾವಿ ವಿಭಾಗದ ಕಾಂಗ್ರೆಸ್‌ ಉಸ್ತುವಾರಿ ಮಾಣಿಕಂ ಟಾಗೂರ್‌, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ, ಎಸ್‌.ಜಿ.ನಂಜಯ್ಯನಮಠ, ಶಾಸಕರಾದ ಪ್ರಸಾದ ಅಬ್ಬಯ್ಯ, ಆನಂದ ನ್ಯಾಮಗೌಡ, ಲಕ್ಷ್ಮಿ ಹೆಬ್ಬಾಳಕರ್‌, ಮುಖಂಡರಾದ ಸದಾನಂದ ಡಂಗನವರ, ವೀರಣ್ಣ ಮತ್ತಿಕಟ್ಟಿ, ಎ.ಎಂ.ಹಿಂಡಸಗೇರಿ, ಜಿ.ಎಸ್‌.ಪಾಟೀಲ, ಎಂ.ಡಿ.ಲಕ್ಷ್ಮಿ ನಾರಾಯಣ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !