ಶನಿವಾರ, ಜನವರಿ 28, 2023
13 °C
ಸಾಹಿತಿ ಶ್ರೀಧರ ಹೆಗಡೆ ಭದ್ರನ್ ಅಭಿಮತ

ಕನ್ನಡಿಗರ ಮೇಲೆ ಕುವೆಂಪು ಪ್ರಭಾವ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಅಕ್ಷರ ತಿಳಿದವರ ಹಾಗೂ ತಿಳಿಯದವರನ್ನೂ ಒಳಗೊಂಡಂತೆ ಕನ್ನಡ ಜನತೆಯ ಮೇಲೆ ಕುವೆಂಪು ಅವರು ಬೀರಿರುವ ಪ್ರಭಾವ ದೊಡ್ಡದು’ ಎಂದು ಸಾಹಿತಿ ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯಪಟ್ಟರು.

ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿದ್ಧರಾಮೇಶ್ವರ ಪ್ರೌಢಶಾಲೆಯ ವತಿಯಿಂದ ಮಾನವ ಧರ್ಮ ಪ್ರತಿಷ್ಠಾನದ ದತ್ತಿ ಹಾಗೂ ಎಸ್.ಎಸ್.ವಿದ್ವಾನ್ ಮತ್ತು ಎಸ್.ಗುರುಕುಮಾರ ದತ್ತಿ ಅಂಗವಾಗಿ ದತ್ತಿ ಉಪನ್ಯಾಸ ಹಾಗೂ ವಿಶ್ವ ಮಾನವ ದಿಣಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುವೆಂಪು ಅವರ ಕವಿತೆಗಳನ್ನು ಹಾಡಿದವರು ನೂರಾರು ಜನ. ಅವರ ಕವಿತೆಯೊಂದು ನಾಡಗೀತೆಯಾಗಿ ಕಿವಿಯ ಮೇಲೆ ಬೀಳುತ್ತಲೇ ಇರುತ್ತದೆ. ಅವರ ಬರಹಗಳು ಅದೆಷ್ಟೋ ಮಧುರ ಕಂಠಗಳನ್ನು ಹಾದು ಬಂದಿವೆ. ಅವರ ಕಾದಂಬರಿಗಳು, ನಾಟಕಗಳು, ಕಥೆಗಳು ರಂಗದ ಮೇಲೆ, ಸಿನಿಮಾ ಪರದೆಯ ಮೇಲೆ ಕಾಣಿಸಿಕೊಂಡು ಜನರನ್ನು ತಲುಪಿವೆ. ವಿದ್ವತ್ ವಲಯದ ಮೇಲೆ ಕುವೆಂಪು ಬರಹಗಳು, ಚಿಂತನೆಗಳು, ವಿಮರ್ಶೆಯ ನೋಟಗಳು ಬೀರಿರುವ ಪ್ರಭಾವವೂ ದೊಡ್ಡದು’ ಎಂದರು.

‘ಇದೆಲ್ಲದರ ಜೊತೆಗೆ ಕುವೆಂಪು ಕರ್ನಾಟಕದಲ್ಲಿ ವೈಚಾರಿಕ ಎಚ್ಚರವನ್ನು ಮೂಡಿಸಿದವರು ಮಕ್ಕಳ ಬಹರದ ಮೇಲೆ ಬೆಳಕು ಚೆಲ್ಲಿದವರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ ಮಾತನಾಡಿ, ‘ಕುವೆಂಪು ತಮ್ಮ ಬರಹದಲ್ಲಿ ಮೌಢ್ಯಗಳಿಂದ ಹೊರಬರಲು, ಮುಕ್ತ ಮನಸ್ಸಿನಿಂದ ಯೋಚಿಸಲು ಹಾಗೂ ಯಾರ ಅಂಕುಶದಲ್ಲೂ ಬದುಕು ಕಟ್ಟಿಕೊಳ್ಳದಂತೆ ತರುಣರಿಗೆ ಕಿವಿಮಾತು ಹೇಳಿದರು. ಅಂತಹ ಆಲೋಚನೆಗಳಿಂದ ಮಕ್ಕಳು ಆದರ್ಶದ ಬದುಕು ಕಟ್ಟಿಕೊಳ್ಳಬೇಕು’ ಎಂದರು.

ಮಾನವ ಧರ್ಮ ಪ್ರತಿಷ್ಠಾನದ ಕಾರ್ಯದರ್ಶಿ ಬಿ.ಜಿ.ಭಟ್, ಡಾ. ಗಿರಿಜಾ ಹಿರೇಮಠ ಇದ್ದರು. ಡಾ. ಡಿ.ಪಿ.ತಿಪ್ಪೇಸ್ವಾಮಿ ಹಾಗೂ ವಿನಯಶ್ರೀ ಕೂಡ್ಲಗಿ ಅವರಿಂದ ಕುವೆಂಪು ಕಾವ್ಯಗಳ ಗಾಯನ ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ರಘು ಸಾಥ್ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.