ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಂತೆ ಮಾರುಕಟ್ಟೆಗೆ ಬೇಕಿದೆ ಸೌಲಭ್ಯ

ರಸ್ತೆ ಬದಿಯೇ ನಡೆಯುವ ವಹಿವಾಟು; ಕುಡಿಯುವ ನೀರು, ಶೌಚಾಲಯದ ಕೊರತೆ
Published 5 ಫೆಬ್ರುವರಿ 2024, 6:34 IST
Last Updated 5 ಫೆಬ್ರುವರಿ 2024, 6:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜನರ ನಿತ್ಯದ ಅಗತ್ಯಗಳಾದ ತರಕಾರಿ, ಸೊಪ್ಪು, ಹೂವು, ಹಣ್ಣು, ಮಸಾಲೆ ಪದಾರ್ಥಗಳು ಪೂರೈಸುವ ಹೊಣೆಹೊತ್ತಿರುವುದು ವಾರದ ಸಂತೆ. ಮಾರುಕಟ್ಟೆ, ಮಾಲ್, ಆನ್‌ಲೈನ್ ಶಾಪಿಂಗ್‌ಗಳು ಎಷ್ಟೇ ಹೆಚ್ಚಿದರೂ ಆಕರ್ಷಕ ಆಗಿದ್ದರೂ, ಸ್ಥಳೀಯವಾಗಿ ನಿತ್ಯದ ಅಗತ್ಯಗಳನ್ನು ಪೂರೈಸುವಲ್ಲಿ ಸಂತೆಯೇ ಜನರಿಗೆ ಅಚ್ಚುಮೆಚ್ಚು.

ಹಳ್ಳಿಗಳಿಂದ ಹಿಡಿದು ಪಟ್ಟಣ, ನಗರ ಪ್ರದೇಶಗಳಲ್ಲಿ ವಾರದ ಒಂದು ನಿಗದಿತ ದಿನ ನಡೆಯುವ ಸಂತೆಗಳು ವಾರದ ಜೊತೆಗೆ ಅಥವಾ ಆ ಸ್ಥಳದ ಹೆಸರಿನ ಜೊತೆಗೆ ಗುರುತಿಸಿಕೊಳ್ಳುವುದು ಸಾಮಾನ್ಯ. ಜನರ ನಿತ್ಯ ಬದುಕಿನ ಅಗತ್ಯ ಪೂರೈಸುವ ಸಂತೆ ಸಣ್ಣ ಪುಟ್ಟ ವ್ಯಾಪಾರಸ್ಥರ, ರೈತರ ಪಾಲಿಗೆ ಬದುಕು ದೂಕಿಸುವ ಬಂಡಿ.

ಹುಬ್ಬಳ್ಳಿ – ಧಾರವಾಡ ವ್ಯಾಪ್ತಿಯಲ್ಲಿ ನಡೆಯುವ ಸಂತೆಗಳಲ್ಲಿ ಸಾಮಾನ್ಯವಾಗಿ ಜಾಗದ ಕೊರತೆ, ಕುಡಿಯುವ ನೀರು, ರಾತ್ರಿ ವೇಳೆ ವಿದ್ಯುತ್ ಕಂಬಗಳು ಇಲ್ಲದಿರುವುದು, ಶೌಚಾಲಯ ಕೊರತೆ, ವಾಹನ ದಟ್ಟಣೆ, ಹಣ ವಸೂಲಿಕಾರರ ಕಿರಿಕಿರಿ ಸೇರಿದಂತೆ ಅನೇಕ ಸಮಸ್ಯೆಗಳು ಸಾಮಾನ್ಯವೆನ್ನುವಂತೆ ಕಂಡು ಬರುತ್ತವೆ. ಇನ್ನೂ ತೂಕದಲ್ಲಿ, ಅಳತೆಯಲ್ಲಿಯಾಗುವ ವ್ಯತ್ಯಾಸದಿಂದ ಗ್ರಾಹಕರು ಮೋಸಗೊಂಡರೇ, ತಮ್ಮ ತೋಟದಲ್ಲೇ ಬೆಳೆದ ತರಕಾರಿಗಳನ್ನು ತಂದು ಮಾರುವ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿ ಶ್ರಮಕ್ಕೆ ತಕ್ಕ ಲಾಭ ಪಡೆಯದಂತಾಗುತ್ತದೆ.

ಬಹುತೇಕ ಕಡೆ ರಸ್ತೆಬದಿ, ಮನೆಗಳ ಬದಿ ನಡೆಯುವ ಸಂತೆಯಿಂದ ಅಲ್ಲಿನ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಾರೆ. ಸಂತೆ ನಡೆದ ಬಳಿಕ ಸಂಗ್ರಹವಾದ ಕಸದ ಸೂಕ್ತ ವಿಲೇವಾರಿ ಆಗದಿದ್ದಾಗ ಕೊಳಚೆ ಪ್ರದೇಶ ನಿರ್ಮಾಣವಾಗಿ ರೋಗಗಳು ಹರಡುವ ಭೀತಿಯೂ ಇದೆ. ಇನ್ನೂ ಕೆಲ ಕಡೆ ಉತ್ತಮ ಸುಸಜ್ಜಿತ ವ್ಯವಸ್ಥೆ ಹೊಂದಿದ ಮಾದರಿ ಮಾರುಕಟ್ಟೆಗಳು ಈಚೆಗೆ ನಿರ್ಮಾಣವಾಗಿವೆ ಆದರೂ ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಹುಬ್ಬಳ್ಳಿಯ ಅಶೋಕ ನಗರದ ಬುಧವಾರ ಸಂತೆಗೆ ಸೂಕ್ತ ಜಾಗದ ವ್ಯವಸ್ಥೆಯಿಲ್ಲ. ಮೈದಾನದಲ್ಲೇ ಸಂತೆ ನಡೆಯುತ್ತಿದ್ದು, ಕುಡಿಯುವ ನೀರಿನ, ಶೌಚಾಲಯದ ವ್ಯವಸ್ಥೆ ಇಲ್ಲ. ಬೀದಿ ದೀಪದ ವ್ಯವಸ್ಥೆಯೂ ಇಲ್ಲದ್ದರಿಂದ ರಾತ್ರಿ ಹೊತ್ತು ಸಂತೆ ನಡೆಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು. ವಿದ್ಯಾನಗರದ ಭಾನುವಾರ ಸಂತೆಯ ಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಸರ್ಕಾರಿ ಶಾಲೆಯ ಮೈದಾನದಲ್ಲಿ ಸಂತೆ ನಡೆಯುತ್ತದೆ.

ಉಣಕಲ್‌ನ ಸಿದ್ದಪ್ಪ ಅಜ್ಜಾನ ಕೆಳಗಿನಮಠದ ಬಳಿ ಪ್ರತಿ ದಿನ ಸಂಜೆ 4ರಿಂದ ಸಂತೆ ನಡೆಯುತ್ತದೆ. ರಸ್ತೆಯ ಬದಿಗೆ ಸಂತೆ ನಡೆಯುತ್ತಿದ್ದು, ವಾಹನ ಚಾಲಕರಿಗೆ ತೊಂದರೆಯಾಗುತ್ತದೆ. ದೇವಸ್ಥಾನದವರು ವ್ಯಾಪಾರಸ್ಥರಿಂದ ದಿನಕ್ಕೆ ₹10, ₹20ರಂತೆ ವಸೂಲಿ ಮಾಡುತ್ತಾರೆ. ದಿವಟಿ ಓಣಿಯಲ್ಲಿ ಶನಿವಾರ ನಡೆಯುವ ಸಂತೆಯೂ ರಸ್ತೆ ಬದಿಯನ್ನೇ ಅವಲಂಬಿಸಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ನೀರು, ಶೌಚಾಲಯದ ವ್ಯವಸ್ಥೆ ಇಲ್ಲ. ಹಳೇಹುಬ್ಬಳ್ಳಿ ಸಂತೆಯೂ ರಸ್ತೆ ಬದಿಯಲ್ಲೇ ನಡೆಯುತ್ತಿದ್ದು, ಧೂಳು, ವಾಹನ ದಟ್ಟಣೆ, ಜನ ದಟ್ಟಣೆಯಿಂದ ತಲೆ ನೋವಾಗಿದೆ.

ಕೇಶ್ವಾಪುರದ ಬಳಿ ಬೆಂಗೇರಿ ಮೈದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದೆ. ಉತ್ತಮ ಚಾವಣಿ, ಟೈಲ್ಸ್, ಪಾವತಿ ಶೌಚಾಲಯ ವ್ಯವಸ್ಥೆ, ದೀಪದ ವ್ಯವಸ್ಥೆ ಮಾಡಲಾಗಿದ್ದು,  ವ್ಯಾಪಾರಸ್ಥರಿಗೆ, ಸುತ್ತಲಿನ ನಿವಾಸಿಗಳಿಗೆ ಅನುಕೂಲವಾಗಿದೆ. ತರಕಾರಿ, ಹಣ್ಣು, ತಿನಿಸು, ಮಸಾಲೆ ಪದಾರ್ಥಗಳಿಗೆ ಪ್ರತ್ಯೇಕ ಜಾಗ ನೀಡಲಾಗಿದೆ. ಗುತ್ತಿಗೆದಾರರು ವ್ಯಾಪಾರಸ್ಥರ ಸಾಮಗ್ರಿಗಳ ಆಧಾರದ ಮೇಲೆ ₹30, ₹60ರಂತೆ ಹಣ ಪಡೆಯುತ್ತಾರೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಈ ಮಾರುಕಟ್ಟೆಯ ಕೊರತೆಯಾಗಿದೆ.

ಉಪ್ಪಿನಬೆಟಗೇರಿ:

ಗ್ರಾಮದಲ್ಲಿ ಸಂತೆಗಾಗಿ ಪ್ರತ್ಯೇಕ ಜಾಗವಿಲ್ಲ ಈ ಹಿಂದಿನಿಂದಲೂ ಶನಿವಾರ ರಸ್ತೆಯ ಬದಿ, ಚರಂಡಿ ಬದಿ, ಇಕ್ಕಟ್ಟಾದ ಸ್ಥಳಗಳಲ್ಲೇ ವ್ಯಾಪಾರಿಗಳು ಅಂಗಡಿ ತೆರೆದು ವ್ಯಾಪಾರ ನಡೆಸುತ್ತಾರೆ. ಗ್ರಾಮ ಪಂಚಾಯಿತಿಯಿಂದ ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ಪಡೆದವರು ಒಂದು ಅಂಗಡಿಗೆ ₹20 ಹಣ ಪಾವತಿಸಬೇಕು. ಸಂತೆಯ ದಿನ ಮಧ್ಯಾಹ್ನ 12 ಗಂಟೆ ನಂತರ ನಾಲ್ಕು ಚಕ್ರದ ವಾಹನಗಳು ತೆರಳಲು ಜಾಗವಿರುವುದಿಲ್ಲ. ಗ್ರಾಮದ ಸುತ್ತಲಿರುವ ಗರಗ, ನರೇಂದ್ರ, ತಡಕೋಡ, ಯಾದವಾಡ, ಅಮ್ಮಿನಬಾವಿ, ಹೆಬ್ಬಳ್ಳಿ ಸುತ್ತಲಿನ ಕೆಲವು ಗ್ರಾಮಗಳಲ್ಲೂ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಅಲ್ಲಿಯೂ ಇದೇ ಸ್ಥಿತಿ ಇದೆ.

ಕುಂದಗೋಳ:

ಪಟ್ಟಣದ ಬುಧವಾರ ಸಂತೆಯೂ ಇಕ್ಕಟ್ಟಾದ ಜಾಗದಲ್ಲೇ ನಡೆಯುತ್ತದೆ. ಬಹುತೇಕ ವ್ಯಾಪಾರಸ್ಥರು ಚರಂಡಿ ಪಕ್ಕ ಅಂಗಡಿಗಳನ್ನು ಹಾಕಿರುವುದು ಕಂಡು ಬರುತ್ತದೆ. ಸಂತೆ ನಡೆಯುವ ರಸ್ತೆ ಪಟ್ಟಣದ ಮುಖ್ಯ ರಸ್ತೆಯಾಗಿದ್ದು ವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದೆ. ವ್ಯಾಪಾರಸ್ಥರು ತಾವು ಹೂಡಿರುವ ಅಂಗಡಿಗಳ ಜಾಗದ ವಿಸ್ತೀರ್ಣದ ಆಧಾರದಲ್ಲಿ ₹5, ₹10, ₹20 ನೀಡುತ್ತಾರೆ. ಸಮೀಪದ ಯರಗುಪ್ಪಿಯಲ್ಲಿ ಶನಿವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂತೆ ನಡೆಯುತ್ತದೆ. ಅಕ್ಕ ಪಕ್ಕದ ಮೂರು ಊರಿನ ಜನರಿಗೆ ಈ ಸಂತೆ ಅನುಕೂಲವಾಗಿದೆ. ವ್ಯಾಪಾರಸ್ಥರಿಂದ ₹10, ₹20 ಸಂಗ್ರಹಿಸಲಾಗುತ್ತಿದೆ.


ಗ್ರಾಮದಲ್ಲಿ ಸಂತೆ ನಡೆಸಲೆಂದೆ ‘ಗ್ರಾಮೀಣ ಸಂತೆ’ ಹೆಸರಲ್ಲಿ ತೆರೆದ ಗೋಡೌನ್ ಇದ್ದು ಅದು ಬಳಕೆಯಾಗುತ್ತಿಲ್ಲ. ಗೋಡೌನ್ ದನಕರು ಕಟ್ಟಲು, ಮೇವು ಸಂಗ್ರಹಿಸಲು ಬಳಕೆಯಾಗುತ್ತಿದೆ. ಯಲಿವಾಳ ಗ್ರಾಮದಲ್ಲಿ ನಡೆಯುವ ಶುಕ್ರವಾರ ಸಂತೆಯೂ ರಸ್ತೆಯ ಬದಿ ನಡೆಯುತ್ತಿದ್ದು, ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ವ್ಯಾಪಾರಸ್ಥರಿಂದ ₹25 ಸಂಗ್ರಹಿಸಲಾಗುತ್ತಿದೆ.

ಅಳ್ನಾವರ:

ಪಟ್ಟಣದಲ್ಲಿ ಪ್ರತಿ ಮಂಗಳವಾರ ಮತ್ತು ಬಸ್ ನಿಲ್ದಾಣದ ಪಕ್ಕದ ಬೀದಿಯಲ್ಲಿ ಶುಕ್ರವಾರ ಸಂತೆ ನಡೆಯುತ್ತವೆ. ಸಂತೆಗೆ ಬರುವ ಜನರಿಗೆ, ವ್ಯಾಪಾರಸ್ಥರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಈ ಸಂತೆಗೆ ಸುತ್ತಲಿನ ಗ್ರಾಮದ ಜನರು ಬರುತ್ತಾರೆ. ಆದರೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಾಂತವ್ವ ಪಾಟೀಲ.

ಮಂಗಳವಾರ ಬೆಳಿಗ್ಗೆ ಮುಖ್ಯ ರಸ್ತೆಯಲ್ಲಿ ನಡೆಯುವ ಸಗಟು ವ್ಯಾಪಾರದಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ವ್ಯಾಪಾರಕ್ಕೆ ಮುಖ್ಯ ರಸ್ತೆ ಬಿಟ್ಟು ಬೇರೆಡೆ ಸ್ಥಳ ನೀಡಬೇಕು ಎಂಬ ಮನವಿ ಕೂಡಾ ಸಾರ್ವಜನಿಕ ವಲಯದಲ್ಲಿದೆ.

ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ, ಬಸನಗೌಡ ಪಾಟೀಲ, ರಾಜಶೇಖರ ಸುಣಗಾರ, ರಮೇಶ ಓರಣಕರ, ಜಗದೀಶ ಗಾಣಿಗೇರ

ನವನಗರದಲ್ಲಿ ನಿರ್ಮಾಣಗೊಂಡ ಹೈಟೆಕ್ ಮಾರುಕಟ್ಟೆ
ನವನಗರದಲ್ಲಿ ನಿರ್ಮಾಣಗೊಂಡ ಹೈಟೆಕ್ ಮಾರುಕಟ್ಟೆ
ಧಾರವಾಡದ ಗಾಂಧಿಚೌಕ ಸಮೀಪದ ಸೂಪರ್‌ ಮಾರುಕಟ್ಟೆಯಲ್ಲಿ ಬಿಸಿಲಿನಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿರುವುದು
ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ 
ಧಾರವಾಡದ ಗಾಂಧಿಚೌಕ ಸಮೀಪದ ಸೂಪರ್‌ ಮಾರುಕಟ್ಟೆಯಲ್ಲಿ ಬಿಸಿಲಿನಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿರುವುದು ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ 
ಉಪ್ಪಿನಬೆಟಗೇರಿಯಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ನಡೆಯುವ ಶನಿವಾರದ ಸಂತೆ
ಉಪ್ಪಿನಬೆಟಗೇರಿಯಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ನಡೆಯುವ ಶನಿವಾರದ ಸಂತೆ
ಉಣಕಲ್‌ ಕೆರೆಯ ಬಳಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಎದುರು ಉದ್ಘಾಟನೆಗೊಳ್ಳದೇ ಖಾಲಿಯಿರುವ ಮಾರುಕಟ್ಟೆ
ಉಣಕಲ್‌ ಕೆರೆಯ ಬಳಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಎದುರು ಉದ್ಘಾಟನೆಗೊಳ್ಳದೇ ಖಾಲಿಯಿರುವ ಮಾರುಕಟ್ಟೆ
ಹುಬ್ಬಳ್ಳಿಯ ಬಹುತೇಕ ಸಂತೆಗಳಲ್ಲಿ ಕಟ್ಟಡ ಮಳಿಗೆಗಳು ಚಾವಣಿ ಇಲ್ಲ. ಬಿಸಿಲಿನಿಂದ ರಕ್ಷಣೆಯಿಲ್ಲ. ಮಳೆ ಬಂದರಂತೂ ವ್ಯಾಪಾರಕ್ಕೆ ತಂದ ತರಕಾರಿ ಸಾಮಗ್ರಿಗಳನ್ನು ಸಂಗ್ರಹಿಸಿಡಲೂ ಜಾಗವಿಲ್ಲ
ಪ್ರಕಾಶ ತರಕಾರಿ ವ್ಯಾಪಾರಸ್ಥ ಹುಬ್ಬಳ್ಳಿ
ವಿದ್ಯಾನಗರದಲ್ಲಿ ಸಂತೆ ನಡೆಯುವ ಶಾಲೆ ಮೈದಾನದ ಬಳಿ ಬೀದಿದೀಪ ಅಳವಡಿಸಿದರೆ ರಾತ್ರಿ ಸಂತೆಯ ಜೊತೆಗೆ ಈ ಭಾಗದ ಜನರಿಗೂ ಓಡಾಡಲು ಅನುಕೂಲ ಆಗುತ್ತದೆ
ಗೌರಮ್ಮ ವಿದ್ಯಾನಗರ ನಿವಾಸಿ
ಸಂತೆಯ ಬಳಿ ಶೌಚಾಲಯದ ವ್ಯವಸ್ಥೆ ಇಲ್ಲದ್ದರಿಂದ ವ್ಯಾಪಾರಸ್ಥರು ಹೊಲದಲ್ಲಿ ಪರಿಚಯಸ್ಥರ ಮನೆಗಳಿಗೆ ಹೋಗುವಂತಾಗಿದೆ. ಕುಡಿಯುವ ನೀರಿಗಾಗಿಯೂ ಅಕ್ಕ ಪಕ್ಕದ ಮನೆ ಹೋಟೆಲ್‌ಗಳನ್ನು ಅವಲಂಬಿಸಿದ್ದೇವೆ
ಕಮಲಮ್ಮ ಬೆಳವಡಿ ತರಕಾರಿ ವ್ಯಾಪಾರಸ್ಥೆ ಉಪ್ಪಿನಬೆಟಗೇರಿ
ಶಾಸಕರು ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ನವನಗರದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದ್ದು ಬೀದಿಬದಿ ವ್ಯಾಪಾರಸ್ಥರಿಗೆ ಒಂದೆಡೆ ಜಾಗ ಕಲ್ಪಿಸುವ ಉದ್ದೇಶದಿಂದ ಮಾಡಲಾಗಿದೆ
ರಮೇಶ ನೂಲ್ವಿ ನವನಗರ ಪಾಲಿಕೆ ವಲಯಾಧಿಕಾರಿ
ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಬೇಕು. ಮಳೆಯಾದಾಗ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಮೂಲಸೌಕರ್ಯಗಳನ್ನು ಕಲ್ಪಿಸಬೇಕು
ಲಕ್ಷ್ಮಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆ ಧಾರವಾಡ

ನವನಗರದ ಹೈಟೆಕ್ ಮಾರುಕಟ್ಟೆ

ಹುಬ್ಬಳ್ಳಿ –ಧಾರವಾಡದ ಮಧ್ಯ ಇರುವ ನವನಗರದಲ್ಲಿ ಒಂದು ಎಕರೆ ಜಾಗದಲ್ಲಿ  ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದ್ದು ಈಚೇಗಷ್ಟೆ ಉದ್ಘಾಟನೆಗೊಂಡಿದೆ. ಬೀದಿಬದಿ ವ್ಯಾಪಾರಸ್ಥರನ್ನು ತಳ್ಳು ಗಾಡಿ ವ್ಯಾಪಾರಸ್ಥರಿಗೆ ಒಂದೆಡೆ ಸುಸಜ್ಜಿತ ವ್ಯವಸ್ಥೆ ಮಾಡಿಕೊಡುವ ಉದ್ದೇಶದಿಂದ ಈ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಸುತ್ತಲಿನ ಗ್ರಾಮಗಳಾದ ಗಾಮನಗಟ್ಟಿ ಸುತಗಟ್ಟಿ ಅಮರಗೋಳ ಬೈರಿದೇವರಕೊಪ್ಪದ ನಿವಾಸಿಗಳಿಗೆ ಈ ಮಾರುಕಟ್ಟೆ ಅನುಕೂಲವಾಗಿದೆ. ತರಕಾರಿ ಹೂವು– ಹಣ್ಣು ವ್ಯಾಪಾರ ಮಾಂಸದ ವ್ಯಾಪಾರಗಳಿಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಕೊಡಲಾಗಿದೆ. ಚಾವಣಿ ಟೈಲ್ಸ್ ದೀಪದ ವ್ಯವಸ್ಥೆ ವ್ಯಾಪಾರಸ್ಥರಿಗೆ ಕೂಡಲು ಸುಸಜ್ಜಿತ ಕಟ್ಟೆಗಳನ್ನು ನಿರ್ಮಿಸಲಾಗಿದೆ.

ತಾಲ್ಲೂಕು ಕೇಂದ್ರಕ್ಕಿಲ್ಲ ಕಾಯಂ ಮಾರುಕಟ್ಟೆ ಭಾಗ್ಯ

ಅಣ್ಣಿಗೇರಿ: ಪಟ್ಟಣ ತಾಲ್ಲೂಕು ಕೇಂದ್ರವಾಗಿ ಪರಿವರ್ತನೆ ಆಗಿದ್ದರೂ ಸಂತೆ ವ್ಯವಹಾರಕ್ಕಾಗಿ ಕಾಯಂ ಮಾರುಕಟ್ಟೆ ಭಾಗ್ಯ ಇನ್ನೂ ಸಿಕ್ಕಿಲ್ಲ. ಪ್ರತಿವಾರ ಪಟ್ಟಣದಲ್ಲಿ ಶುಕ್ರವಾರ ಸಂತೆ ಜರುಗುತ್ತದೆ. ಈ ಸಂತೆಯನ್ನು ಮೊದಲು ಅಮೃತೇಶ್ವರ ದೇವಸ್ಥಾನದ ಬಯಲಿನಲ್ಲಿ ಮಾಡಲಾಗುತ್ತಿತ್ತು. ಜನದಟ್ಟಣೆ ಹೆಚ್ಚಾಗಿದ್ದರಿಂದ ಅಗಸಿ ಓಣಿಯ ಅಮೃತೇಶ್ವರ ಮಹಾದ್ವಾರದಿಂದ ಪುರಸಭೆ ಮುಂಭಾಗದವರೆಗೆ ಮಾಡಲಾಗುತ್ತಿದೆ. ಸಂತೆ ದಿನದಂದು ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ವ್ಯಾಪಾರಸ್ಥರಿಗೆ ಮೂಲಸೌಕರ್ಯ ಇಲ್ಲ ಎಂದು ಸ್ಥಳೀಯ ತರಕಾರಿ ವ್ಯಾಪಾರಿ ದಾದಾಪೀರ ಕುರ್ತಕೋಟಿ ತಿಳಿಸಿದರು. ‘ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದರೂ ಸ್ಥಳೀಯ ಆಡಳಿತ ಗುತ್ತಿಗೆದಾರರ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪಟ್ಟಣಕ್ಕೆ ಕಾಯಂ ಮಾರುಕಟ್ಟೆ ಭಾಗ್ಯ ಕಲ್ಪಿಸಬೇಕು’ ಎಂದು ಆಗ್ರಹಿಸುತ್ತಾರೆ ಸ್ಥಳೀಯ ನಿವಾಸಿ ಭರತೇಶ ಜೈನ.

ಸೂಪರ್‌ ಮಾರ್ಕೆಟ್‌ನಲ್ಲಿ ಸೌಲಭ್ಯ ಇಲ್ಲ

ಧಾರವಾಡ: ನಗರದ ಗಾಂಧಿ ಚೌಕ ಸಮೀಪದ ಸೂಪರ್‌ ಮಾರ್ಕೆಟ್‌ ಸಂತೆಮಾಳವು ಮೂಲಸೌಕರ್ಯಗಳ ಕೊರತೆಯಿಂದ ಸೊರಗಿದೆ. ವ್ಯಾಪಾರಿಗಳು ಬಿಸಿಲು ಚಳಿ ಮಳೆಯಲ್ಲೇ ವ್ಯಾಪಾರ ಚಟುವಟಿಕೆ ನಡೆಸಬೇಕಾದ ಸ್ಥಿತಿ ಇದೆ. ಮಾರುಕಟ್ಟೆ ತಗ್ಗು ಪ್ರದೇಶದಲ್ಲಿದೆ. ನೆಲಹಾಸಿನಲ್ಲಿ ಇಂಟರ್‌ಲಾಕಿಂಗ್‌ ಸಿಮೆಂಟ್‌ ಇಟ್ಟಿಗೆ ಅಳವಡಿಸಲಾಗಿದೆ. ಮಾರಾಟ ಮಾಡುವ ಪದಾರ್ಥಗಳನ್ನು (ತರಕಾರಿ ಹಣ್ಣು....) ಇಟ್ಟುಕೊಳ್ಳಲು ಕಟ್ಟೆಗಳನ್ನು ನಿರ್ಮಿಸಿಲ್ಲ. ನೆರಳಿಗೆ ಶೆಡ್‌ಗಳ ವ್ಯವಸ್ಥೆಯೂ ಇಲ್ಲ. ಈ ಮಾಳದಲ್ಲಿ ತರಕಾರಿ ಇತ್ಯಾದಿ ವ್ಯಾಪಾರ ನಡೆಯುತ್ತದೆ. ವಾರದ ಸಂತೆ ಮಂಗಳವಾರ ನಡೆಯುತ್ತದೆ. ಸುಮಾರು 400ಕ್ಕೂ ಹೆಚ್ಚು ವ್ಯಾಪಾರಿಗಳು ಇದ್ದಾರೆ. ನಗರ ಮತ್ತು ಸುತ್ತಲಿನ ಗ್ರಾಮಗಳು ಸಹಸ್ರಾರು ಗ್ರಾಹಕರು ನಿತ್ಯ ಭೇಟಿ ನೀಡುತ್ತಾರೆ.

ಮಾರುಕಟ್ಟೆಯಲ್ಲಿ ವಿದ್ಯುತ್‌ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಎರಡು ಕಡೆ ವಿದ್ಯುತ್‌ ದೀಪಗಳಿರುವ ಎರಡು ಕಂಬಗಳು ಇವೆ. ಈ ಪೈಕಿ ಒಂದು ಕಂಬದ ದೀಪ ಹಾಳಾಗಿದೆ. ಮಾರುಕಟ್ಟೆ ಸುತ್ತ ಕಾಪೌಂಡ್‌ ನಿರ್ಮಿಸಿಲ್ಲ. ಬಿಡಾಡಿ ದನ ಹಂದಿಗಳು ಇಲ್ಲಿ ಓಡಾಡುತ್ತವೆ.

ಒಂದು ಪಾವತಿ ಶೌಚಾಲಯ ಇದೆ. ಇಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು ಎಂಬ ಬೇಡಿಕೆ ಇದೆ. ‘ಮಳೆಯಾದಾಗ ಭಾರಿ ಸಮಸ್ಯೆಯಾಗುತ್ತದೆ. ತರಕಾರಿಗಳು ಇತರ ಪದಾರ್ಥಗಳು ನೀರು ಪಾಲಾಗುತ್ತವೆ. ಅವುಗಳನ್ನು ರಕ್ಷಿಸಿಕೊಳ್ಳುವುದೇ ಸವಾಲು. ಪಾಲಿಕೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಕಟ್ಟೆ ಶೆಡ್‌ ನಿರ್ಮಾಣಕ್ಕೆ ಕ್ರಮ ವಹಿಸಿಲ್ಲ’ ಎಂದು ವ್ಯಾಪಾರಿ ರಾಜು ಕಾಳೆ ತಿಳಿಸಿದರು.

‘ವ್ಯಾಪಾರಿಗಳು ಬೆಳ್ಳಿಗೆಯಿಂದ ಸಂಜೆವರೆಗೂ ಇಲ್ಲಿ ಇರುತ್ತಾರೆ. ಆಹಾರ ಸೇವನೆಗೆ ಒಂದು ಕೊಠಡಿ ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮಹಿಳೆಯರಿಗೆ ವಿಶ್ರಾಂತಿ ಕೊಠಡಿಯೊಂದನ್ನು ನಿರ್ಮಿಸಬೇಕು. ಪದಾರ್ಥಗಳನ್ನು ದಾಸ್ತಾನು ಇಡಲು ದೊಡ್ಡ ಮಳಿಗೆಯೊಂದನ್ನು ನಿರ್ಮಿಸಬೇಕು’ ಎಂದು ವ್ಯಾಪಾರಿ ರಾಜೇಂದ್ರ ತಿಳಿಸಿದರು.

ಉದ್ಘಾಟನೆಯಾಗದ ಮಾರುಕಟ್ಟೆ
ಉಣಕಲ್‌ ಕೆರೆಯ ಬಳಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಎದುರು ಸ್ಮಾರ್ಟ್‌ಸಿಟಿ ಯೋಜನೆಯಡಿ ಸಂತೆಗೆಂದು ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದೆ. ನಿರ್ಮಾಣಗೊಂಡು ಎರಡು– ಮೂರು ವರ್ಷ ಕಳೆದರೂ ಇನ್ನೂ ಉದ್ಘಾಟನೆಗೊಂಡಿಲ್ಲ. ತಿಂಗಳಿಗೊಮ್ಮೆ ಆವರಣ ಸ್ವಚ್ಛಗೊಳಿಸಲಾಗುತ್ತದೆ. ಸ್ಮಾರ್ಟ‌್‌ಸಿಟಿ ಅವರು ಈ ಕಟ್ಟಡವನ್ನು ಪುರಸಭೆಗೆ ಹಸ್ತಾಂತರಿಸಿಲ್ಲ. ಸಧ್ಯ ಈ ಸುಸಜ್ಜಿತ ಕಟ್ಟಡದ ಗೋಡೆ, ಗೇಟು ಸ್ಥಳೀಯ ನಿವಾಸಿಗಳ ಬಟ್ಟೆ ಒಣಗಿಸುವ ತಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT