ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಅಂದ ಹೆಚ್ಚಿಸುವ ‘ಲಹತಿ’ ಬಳೆಗಳು

ಬಾಲಿವುಡ್‌ ತಾರೆಯರಿಗೂ ಅಚ್ಚುಮೆಚ್ಚು; ವಿವಿಧ ರಾಜ್ಯಗಳಲ್ಲಿ ಬೇಡಿಕೆ
Last Updated 16 ಜನವರಿ 2023, 6:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಳೆ ಹಾಗೂ ಹೆಣ್ಣುಮಕ್ಕಳಿಗೆ ಅವಿನಾಭಾವ ಸಂಬಂಧ. ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ವಿಶೇಷ ‘ಲಹತಿ’ ಬಳೆಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ.

ಕೆಸಿಡಿ ಮೈದಾನದಲ್ಲಿನ ‘ಯುವ ಕೃತಿ’ ಮಳಿಗೆಯಲ್ಲಿ ಆಕರ್ಷಕ ಬಣ್ಣದ, ವಿವಿಧ ವಿನ್ಯಾಸದ ಬಳೆಗಳು ಹೆಣ್ಣು ಮಕ್ಕಳ ಕೈಗಳನ್ನು ಅಲಂಕರಿಸಲು ಕಾಯುತ್ತಿವೆ. ಮಳಿಗೆಯಲ್ಲಿ ಬಳೆಗಳ ಖರೀದಿಗೆ ಹೆಣ್ಣುಮಕ್ಕಳು ಮುಗಿಬಿದ್ದುದು ಭಾನುವಾರ ಕಂಡುಬಂತು.

ಸಾಮಾನ್ಯವಾಗಿ ಗಾಜಿನ ಬಳೆಗಳನ್ನು ಯಂತ್ರಗಳ ಸಹಾಯದಿಂದ ತಯಾರಿಸಲಾಗುತ್ತದೆ. ಲಹತಿ ಬಳೆಗಳನ್ನು ಪಲಾಸ್‌ (ಮುತ್ತುಗ) ಮರದಿಂದ ಬರುವ ಲಾಹ್‌ ಎಂಬ ಅಂಟು ಬಳಸಿ, ಯಾವುದೇ ಯಂತ್ರಗಳ ನೆರವಿಲ್ಲದೆ ಕೈಯಿಂದಲೇ ತಯಾರಿಸುವುದು ವಿಶೇಷ.

‘ಲಾಹ್‌ ಅನ್ನು ಸಂಗ್ರಹಿಸಿ ಹದಗೊಳಿಸಲಾಗುತ್ತದೆ. ನಂತರ ಅದನ್ನು ಬಳೆಯಾಕಾರಕ್ಕೆ ತಂದು ಬಣ್ಣ ಲೇಪನ ಮಾಡಲಾಗುತ್ತದೆ. ವಿವಿಧ ಬಣ್ಣದ ಹರಳುಗಳಿಂದ ಅಲಂಕರಿಸಲಾಗುತ್ತದೆ’ ಎನ್ನುತ್ತಾರೆ ಬಿಹಾರದ ನೆಹರೂ ಯುವ ಕೇಂದ್ರದ ಯುವ ಪ್ರತಿನಿಧಿ ರಾಹುಲ್‌ಕುಮಾರ್.

‘ಗಾಜಿನ ಬಳೆಗಳನ್ನು ಧರಿಸಿ ಕೆಲಸ ಮಾಡುವಾಗ ಅವು ಒಡೆಯುತ್ತವೆ. ಹೆಚ್ಚು ದಿನ ಬಳಸಿದರೆ ಬಣ್ಣ ಮಾಸುತ್ತದೆ. ಲಹತಿ ಬಳೆಗಳು ದೀರ್ಘಕಾಲ ಬಾಳಿಕೆ ಬರುತ್ತವಲ್ಲದೆ, ಬಿದ್ದರೆ ಒಡೆಯುವುದಿಲ್ಲ. ಹೊಳಪು ಸಹ ಕಡಿಮೆ ಆಗುವುದಿಲ್ಲ’ ಎಂದು ಬಳೆಗಳ ವಿಶೇಷತೆಯನ್ನು ಬಣ್ಣಿಸಿದರು.

‘ಮುಜಾಫರ್‌ಪುರದಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ಬಳೆಗಳ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಹೀಗಾಗಿಯೇ ಹಲವು ಕುಟುಂಬಗಳು ಈ ಬಳೆಗಳ ತಯಾರಿಕೆಯಲ್ಲಿ ಬದುಕು ಕಟ್ಟಿಕೊಂಡಿವೆ. ವಿವಿಧ ಗಾತ್ರ, ವಿನ್ಯಾಸಕ್ಕೆ ಅನುಗುಣವಾಗಿ ಒಂದು ಪ್ಯಾಕ್‌ನ ದರ ₹600ರಿಂದ ₹2,900 ವರೆಗೆ ಇದೆ. ಬೇರೆ ರಾಜ್ಯಗಳಲ್ಲಿಯೂ ಈ ಬಳೆಗಳಿಗೆ ಬೇಡಿಕೆ ಇದೆ’ ಎಂದು ತಿಳಿಸಿದರು.

ಮದುವೆಗೆ ವಿಶೇಷ ಬಳೆ

‘ಮದುವೆಗಾಗಿಯೇ ವಿಶೇಷವಾಗಿ ಸುಹಾಗ್ ಬಳೆಗಳನ್ನು ತಯಾರಿಸಲಾಗುತ್ತದೆ. ಇವುಗಳಿಗೆ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಚಿನ್ನ ಅಥವಾ ಇನ್ನಿತರ ಲೋಹದ ಲೇಪನ ಮಾಡಲಾಗುತ್ತದೆ’ ಎಂದು ರಾಹುಲ್‌ಕುಮಾರ್ ಹೇಳಿದರು.

‘ಬಳೆಗಳಲ್ಲಿ ವಧು–ವರರ ಹೆಸರು, ಅವರ ಭಾವಚಿತ್ರ ಅಳವಡಿಸಲಾಗುತ್ತದೆ. ಇವುಗಳ ಬೆಲೆ ₹3 ಸಾವಿರದಿಂದ ₹1 ಲಕ್ಷದವರೆಗೂ ಇದೆ. ಬಾಲಿವುಡ್ ನಟಿಯರು ಸಹ ಮದುವೆಯಲ್ಲಿ ಈ ಬಳೆಗಳನ್ನು ಧರಿಸಿರುವುದು ವಿಶೇಷ’ ಎನ್ನುತ್ತಾರೆ ಅವರು.

‘ಇದೇ ವರ್ಷ ಜಿ–20 ಶೃಂಗ ಸಭೆ ದೇಶದಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲಿರುವ ಮಹಿಳಾ ಪ್ರತಿನಿಧಿಗಳಿಗೆ ಮುಜಾಫರ್‌ಪುರ ಜಿಲ್ಲೆಯ ‘ಲಹತಿ’ ಬಳೆಗಳನ್ನು ನೀಡಲಾಗುತ್ತದೆ. ಇದು ನಮಗೆ ಹೆಮ್ಮೆಯ ವಿಷಯ’ ಎಂದರು.

****

ಕರ್ನಾಟಕದ ಭಾಷೆ, ಸಂಸ್ಕೃತಿ ವಿಶಿಷ್ಟವಾದದ್ದು. ಇಲ್ಲಿ ನಡೆಯುತ್ತಿರುವ ಯುವಜನೋತ್ಸವದಲ್ಲಿ ವ್ಯಾಪಾರದ ಉದ್ದೇಶಕ್ಕಿಂತ ನಮ್ಮ ಉತ್ಪನ್ನಗಳನ್ನು ಇಲ್ಲಿ ಪರಿಚಯಿಸಲು ಹೆಚ್ಚು ಒತ್ತು ನೀಡುತ್ತಿದ್ದೇವೆ
– ರಾಹುಲ್‌ ಕುಮಾರ್‌, ಯುವ ಪ್ರತಿನಿಧಿ, ಬಿಹಾರದ ನೆಹರು ಯುವ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT