ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಖರೀದಿ: ನವಲಗುಂದ ಶಾಸಕ ಶಂಕರಪಾಟೀಲ ಮುನೇಕೊಪ್ಪ

ನವಲಗುಂದ ಶಾಸಕ ಶಂಕರಪಾಟೀಲ ಮುನೇಕೊಪ್ಪ ಭರವಸೆ
Last Updated 23 ನವೆಂಬರ್ 2020, 17:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನವಲಗುಂದ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಸ್ಮಶಾನದ ಕೊರತೆ ಇದೆ. ಕಂದಾಯ ಇಲಾಖೆ ಒದಗಿಸಿರುವ ₹50 ಲಕ್ಷ ವಿಶೇಷ ಅನುದಾನದಲ್ಲಿ ಅಗತ್ಯವಿರುವೆಡೆ ಸ್ಮಶಾನಕ್ಕಾಗಿ ಜಮೀನು ಖರೀದಿ ಮಾಡಲಾಗುವುದು’ ಎಂದು ಶಾಸಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಶಂಕರಪಾಟೀಲ ಮುನೇಕೊಪ್ಪ ಹೇಳಿದರು.

ಕೋಳಿವಾಡ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿದಅವರು, ‘ಕೋಳಿವಾಡದಲ್ಲಿ ಹಲವು ವರ್ಷಗಳಿಂದ ಸ್ಮಶಾನ ಸಮಸ್ಯೆ ಇತ್ತು. ಅದನ್ನು ಪರಿಹರಿಸಲು ಖಾಸಗಿಯವರಿಂದ ಸ್ಮಶಾನಕ್ಕಾಗಿ ₹26 ಲಕ್ಷಕ್ಕೆ ಜಮೀನು ಖರೀದಿಸಲಾಗಿದೆ. ಇದೇ ರೀತಿ ಬೇರೆ ಗ್ರಾಮಗಳಲ್ಲಿ ಕೂಡ ಜಮೀನು ಖರೀದಿ ಮಾಡಲಾಗುವುದು’ ಎಂದರು.

‘ಹಿಂದೆ ನೀಡಿದ ಭರವಸೆಯಂತೆ ಸವದತ್ತಿಯ ನವಿಲುತೀರ್ಥದಲ್ಲಿರುವ ಮಲಪ್ರಭಾ ಜಲಾಶಯದಿಂದ ಧಾರವಾಡ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಪೈಪ್‌ಲೈನ್ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಇದಕ್ಕಾಗಿ ₹1,100 ಕೋಟಿ ವೆಚ್ಚದ ಯೋಜನೆ ಸಿದ್ದವಾಗಿದೆ. ಶೀಘ್ರವೇ ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸಲಾಗುವುದು. ಯೋಜನೆಯಿಂದ 300ಹಳ್ಳಿಗಳಿಗೆ ನೀರು ಲಭಿಸಲಿದೆ’ ಎಂದು ಹೇಳಿದರು.

‘ಕೋಳಿವಾಡ ಗ್ರಾಮಕ್ಕೆ ₹1 ಕೋಟಿ ವಿಷೇಶ ಅನುದಾನ ಒಗಿಸಲಾಗಿದೆ. ಅದರಲ್ಲಿ ಕುಮಾರವ್ಯಾಸ ಭವನ, ಕುಡಿಯುವ ನೀರಿಗೆ ಕೆರೆ ನಿರ್ಮಾಣ, ನಿರಂತರ ಜ್ಯೋತಿ, ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರ ಮನವಿಯಂತೆ, ಕೋಳಿವಾಡ ಉಮಚಗಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜನೆ ಸಿದ್ದಪಡಿಸಲಾಗಿದೆ. ಇದಕ್ಕಾಗಿ, ₹8 ಕೋಟಿ ಅಗತ್ಯವಿದ್ದು, ಈಗಾಗಲೇ ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಗ್ರಾಮದ ಶಾಲೆಯ ಅಭಿವೃದ್ಧಿಗೆ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ಪದವಿ ಪೂರ್ವ ಕಾಲೇಜು ಸ್ಥಾಪನೆಗೂ ಪ್ರಯತ್ನಿಸಲಾಗುವುದು. ಹಸಿ ಹಾಗೂ ಒಣ ತ್ಯಾಜ್ಯ ಘಟಕಗಳನ್ನು ನಿರ್ಮಿಸಲು ಅನುನದಾನ ಬಿಡುಗಡೆ ಮಾಡಲಾಗಿದೆ. ಗ್ರಾಮದ ಜನ ಹೋಬಳಿ, ತಾಲೂಕುಹಾಗೂ ಜಿಲ್ಲಾ ಕೇಂದ್ರಗಳಿಗೆ ವಿವಿಧ ಸರ್ಕಾರಿ ಕೆಲಸಗಳ ಸಲುವಾಗಿ ಅಲೆಯುವುದನ್ನು ತಪ್ಪಿಸಲು ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗುವುದು’ ಎಂದರು.

ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಮನಸ್ವಿನಿ ಹಾಗೂ ಅಂಗವಿಕಲ ವೇತನದಡಿ ಆಯ್ಕೆಯಾದ 19 ಫಲಾನುಭವಿಗಳಿಗೆ ಪಿಂಚಣಿ ಪತ್ರಗಳನ್ನು ನೀಡಲಾಯಿತು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಸ್ವಯಂ ಚಾಲಿತ ಕೂರಿಗೆ, ರೋಟವೇಟರ್, ಟ್ರಾಕ್ಟರ್ ಟ್ರೇಲರ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಗ್ರಾಮದ ಸ್ಮಶಾನಕ್ಕೆ ಜಮೀನು ನೀಡಿದ ಚನ್ನಬಸಮ್ಮ ಕಣವಿ ಅವರಿಗೆ ₹25.72 ಲಕ್ಷ ಮೊತ್ತದ ಚೆಕ್ ನೀಡಲಾಯಿತು. ಅದಾಲತ್‌ನಲ್ಲಿ ವಿವಿಧ ಇಲಾಖೆಗಳಿಗೆ ಸೇರಿದ ಒಟ್ಟು 25 ಅರ್ಜಿಗಳು ಸ್ವೀಕೃತವಾದವು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಶಿರೂರ, ಉಪವಿಭಾಗಧಿಕಾರಿ ಗೋಪಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್. ಪುರುಷೋತ್ತಮ್,ತಹಶೀಲ್ದಾರ್ ಪ್ರಕಾಶ್ ನಾಶಿ, ಕೆಎಸ್‌ಎಸ್‌ ಅಧಿಕಾರಿ ರಾಘವೇಂದ್ರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ದ್ಯಾಮಕ್ಕ ಸತ್ಯಮ್ಮನವರ, ಇಒ ಗಂಗಾಧರ ಕಂದಕೋರ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗಂಗಾಧರ ಗಾಣಿಗೇರ ಇದ್ದರು.

ನಾನು ಕೋಳಿವಾಡದ ಅಳಿಯ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ‘ನಾನು ಕೋಳಿವಾಡದ ಅಳಿಯ. ಹಿರಿಯ ಐಎಎಸ್ ಅಧಿಕಾರಿಯಾದ ನಮ್ಮ ಮಾವ ಶಿವಯೋಗಿ ಕಳಸದ ಕೋಳಿವಾಡದವರು. ಹಾಗಾಗಿ, ಈ ಗ್ರಾಮದ ಬಗ್ಗೆ ನನಗೆ ವಿಶೇಷ ಅಭಿಮಾನವಿದೆ. ಆರಂಭದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕೊರೊನಾ ಲಾಕ್‌ಡೌನ್ ಜಾರಿಯಲ್ಲಿತ್ತು. ಕೋವಿಡ್–19 ತುರ್ತು ಸಂದರ್ಭದ ಕಾರ್ಯಭಾರದಿಂದಾಗಿ ಗ್ರಾಮಕ್ಕೆ ಬರಲು ಸಾಧ್ಯವಾಗಿರಲ್ಲಿಲ್ಲ. ಇದಾದ ಬಳಿಕ ಪದವೀಧರ ಕ್ಷೇತ್ರ ಚುನಾವಣೆ ಕಾರ್ಯದಲ್ಲಿ ನಿರತನಾಗಿದೆ. ಇಂದು ಗ್ರಾಮಕ್ಕೆ ಬರಲು ಯೋಗ ಕೂಡಿ ಬಂದಿದೆ’ ಎಂದರು.

‘ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗ್ರಾಮದ ಬಹುದಿನ ಬೇಡಿಕೆಯಾಗಿದ್ದ ಸ್ಮಶಾನಕ್ಕೆ ಜಮೀನು ಖರೀದಿ ಮಾಡಿ ಬಳಕೆಗೆ ಮುಕ್ತ ಮಾಡಲಾಗಿದೆ. 94ಸಿ ಅಡಿಯಲ್ಲಿ ಗ್ರಾಮದ 26 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ವಿವಿಧ ಪಿಂಚಣಿಗಾಗಿ ಅರ್ಜಿ ಸಲ್ಲಿಸದವರಿಗೆ ಪಿಂಚಣಿ ಪತ್ರಗಳನ್ನು ನೀಡಲಾಗುತ್ತಿದೆ. ಗ್ರಾಮದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಆಯೋಜಿಸಲಾಗಿದ್ದು, ಗ್ರಾಮಸ್ಥರು ಇಲ್ಲಿಯೇ ಅರ್ಜಿಗಳನ್ನು ನೀಡಬಹುದು. ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT