ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಕ.ಕ್ಕೂ ಸೌಲಭ್ಯ ವಿಸ್ತರಣೆಯಾಗಲಿ

ರಫ್ತುದಾರರ ಸಮಾವೇಶ; ವಸಂತ ಲದ್ವಾ ಆಗ್ರಹ
Last Updated 24 ಸೆಪ್ಟೆಂಬರ್ 2021, 14:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಫ್ತು ಉದ್ಯಮದಲ್ಲಿ ರಾಜ್ಯ ಜಾಗತಿಕ ನಕಾಶೆಯಲ್ಲಿ ಹೆಸರು ಮಾಡಿದರೂ, ಉತ್ತರ ಕರ್ನಾಟಕಕ್ಕೆ ಆ ಎತ್ತರಕ್ಕೆ ಏರಲು ಸಾಧ್ಯವಾಗಿಲ್ಲ. ಆದ್ದರಿಂದ, ಈ ಭಾಗಕ್ಕೂ ಮೂಲ ಸೌಕರ್ಯಗಳು ವಿಸ್ತರಣೆಯಾಗಬೇಕಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ವಸಂತ ಲದ್ವಾ ಅಭಿಪ್ರಾಯಪಟ್ಟರು.

ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಹಯೋಗದಲ್ಲಿ ಆಜಾದಿಕಾ ಅಮೃತ ಮಹೋತ್ಸವ ವಾಣಿಜ್ಯ ಸಪ್ತಾಹದ ಅಂಗವಾಗಿ ಶುಕ್ರವಾರ ನಡೆದ ರಫ್ತುದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಆರಂಭಿಸುವಂತೆ ಹಲವಾರು ದಶಕಗಳಿಂದ ಬೇಡಿಕೆ ಇಟ್ಟರೂ ಕಾರ್ಯಗತಗೊಂಡಿಲ್ಲ. ಹೀಗಾಗಿ ರಫ್ತುದಾರರಿಗೆ ವಿದೇಶಿ ಮಾರುಕಟ್ಟೆ ತಲುಪುವುದು ನಿರೀಕ್ಷಿತ ವೇಗದಲ್ಲಿ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಿಂದ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಇದರ ಜೊತೆಗೆ ಬೇರೆ ಉತ್ಪನ್ನಗಳ ರಫ್ತಿಗೂ ಗಂಭೀರವಾಗಿ ಯೋಚಿಸಬೇಕು. ಆತ್ಮನಿರ್ಭರ್ ಪ್ರಗತಿ ಸಾಧಿಸಲು ರಫ್ತು ಉದ್ಯಮ ಪರಿಣಾಮಕಾರಿಯಾಗಿರಬೇಕು. ರೈಲು ಸೌಲಭ್ಯ, ಕಂಟೇನರ್‌ ಡಿಪೊಗಳ ನಿರ್ಮಾಣವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಕೆನ್ ಅಗ್ರಿಟೆಕ್ ವ್ಯವಸ್ಥಾಪಕ ನಿರ್ದೇಶಕ ವಿವೇಕ ಪಿ. ನಾಯಕ ಮಾತನಾಡಿ ‘ರಫ್ತಿನ ಪ್ರಮಾಣ ಹೆಚ್ಚಿಸಲು ಕೃಷಿಯ ಮೇಲೆ ಹೆಚ್ಚು ಗಮನ ಹರಿಸಬೇಕು. ಕೃಷಿ ಮತ್ತು ಆಹಾರ ಸಂಸ್ಕೃರಣೆ ವಿಭಾಗದಲ್ಲಿ ಜಿಲ್ಲೆ ಹೆಚ್ಚು ರಫ್ತು ಮಾಡುತ್ತಿದೆ. ರಾಜ್ಯದಲ್ಲಿ ಕೃಷಿ ಬೆಳೆಗೆ ಭೂಮಿ ಹಾಗೂ ಒಳ್ಳೆಯ ವಾತಾವರಣ ಇರುವುದರಿಂದ ರಫ್ತಿನಲ್ಲಿ ಮೇಲುಗೈ ಸಾಧಿಸಲು ಸಹಾಯಕವಾಗಿದೆ. ಎಲ್ಲಿ, ಹೇಗೆ ಸ್ಪರ್ಧೆ ಮಾಡಬೇಕು ಎಂಬುವುದನ್ನು ತಿಳಿದುಕೊಂಡರೆ ಉನ್ನತ ಸಾಧನೆ ಸಾಧ್ಯ’ ಎಂದರು.

ಸಾಂಬಾರು ಮಂಡಳಿ ವಿಜ್ಞಾನಿ ಬಿ.ಎ.ವಾದಿರಾಜ ಮಾತನಾಡಿ ‘ಹಾವೇರಿಯಲ್ಲಿ ಚಿಲ್ಲಿ ಪಾರ್ಕ್‌ ಆರಂಭಿಸಲು ಐದು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿದ್ದು, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಹಾವೇರಿಯವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು, ರಾಜ್ಯದ ಮೊದಲ ಚಿಲ್ಲಿ ಪಾರ್ಕ್‌ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ,ಉಪಾಧ್ಯಕ್ಷ ವಿನಯ ಜವಳಿ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಮಾಜಿ ಅಧ್ಯಕ್ಷ ರಮೇಶ ಪಾಟೀಲ, ಸದಸ್ಯರಾದ ಉಮೇಶ ಗಡ್ಡದ, ಅಶೋಕ ಗಡಾದ, ಸಿದ್ದೇಶ ಕಮ್ಮಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜು, ಉಪನಿರ್ದೇಶಕ ಎನ್‌.ಎಂ. ಭೀಮಪ್ಪ, ಡಿಜಿಎಫ್‌ಟಿ ನಿರ್ದೇಶಕಿ (ಆಡಳಿತ) ಗೀತಾ ಕೆ., ಸಾಂಬಾರು ಮಂಡಳಿ ವಿಜ್ಞಾನಿ ಬಿ.ಎ ವಾದಿರಾಜ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT