ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಮೌಲ್ಯಕ್ಕೆ ಸಾಹಿತ್ಯ ಪ್ರೇರಣೆ: ಸಾಹಿತಿ ದೊಡ್ಡರಂಗೇಗೌಡ

ಎಸ್‌.ಎಸ್‌. ಶೆಟ್ಟರ್‌ ಸ್ಮಾರಕ ದತ್ತಿ ಉಪನ್ಯಾಸ
Last Updated 1 ಫೆಬ್ರುವರಿ 2020, 9:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಟುಂಬ ವ್ಯವಸ್ಥೆಯ ಮೂಲ ಬೇರು ಇರುವುದೇ ಪ್ರೀತಿಯಲ್ಲಿ. ಪ್ರೀತಿ ಮೌಲ್ಯಾತೀತ; ಈಗ ಕುಟುಂಬದವರ ನಡುವೆ ಪ್ರೀತಿಯೇ ಇಲ್ಲದಂತಾಗಿದೆ. ಆದ್ದರಿಂದ ಕೌಟುಂಬಿಕ ಮೌಲ್ಯ ಬೆಳೆಸಿಕೊಳ್ಳಲು ಹೊಸಗನ್ನಡ ಸಾಹಿತ್ಯ ಪ್ರೇರಣೆಯಾಗಿದೆ ಎಂದು ಸಾಹಿತಿ ದೊಡ್ಡರಂಗೇಗೌಡ ಪ್ರತಿಪಾದಿಸಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಎಸ್‌.ಎಸ್‌. ಶೆಟ್ಟರ್ ಫೌಂಡೇಷನ್‌ ಸಹಯೋಗದಲ್ಲಿ ಶುಕ್ರವಾರ ನಡೆದ ಎಸ್‌.ಎಸ್‌. ಶೆಟ್ಟರ್ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ’ಆಧುನಿಕ ಕಾವ್ಯದಲ್ಲಿ ಕೌಟುಂಬಿಕ ಮೌಲ್ಯಗಳು‘ ವಿಷಯದ ಕುರಿತು ಮಾತನಾಡಿದರು.

’ಈಗ ಮೌಲ್ಯಗಳ ಸಮಾಧಿಯ ಮೇಲೆ ಸೋಗಲಾಡಿತನ ಬಿತ್ತುತ್ತಿದ್ದೇವೆ. ಗುಣ ಮೆಚ್ಚಿಕೊಳ್ಳಬೇಕಾದವರು ಹಣ ಮೆಚ್ಚಿಕೊಳ್ಳುತ್ತಿರುವ ಕಾರಣ ಈ ಕಂದಕ ಉಂಟಾಗುತ್ತಿದೆ‘ ಎಂದರು.

’ಹಳೆಗನ್ನಡ ಸಾಹಿತ್ಯದ ಮೌಲ್ಯಗಳನ್ನು ಆಧುನಿಕ ಕಾಲದ ಕವಿಗಳುಅನೂಚಾನವಾಗಿ ಬಳಸಿಕೊಂಡು ಬಂದಿದ್ದರಿಂದ ಆಧುನಿಕ ಸಾಹಿತ್ಯ ಜೀವನ ಮೌಲ್ಯ, ಪ್ರೀತಿ, ಅಂತಃಕರಣ, ಆದರ್ಶಗಳನ್ನು ಬಿತ್ತಿತು. ಆದ್ದರಿಂದ ಹೊಸಗನ್ನಡ ಸಾಹಿತ್ಯವನ್ನು ಓದಿದವರು ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ. ಪ್ರೀತಿಯ ಅನನ್ಯತೆಯನ್ನು ಸಾಹಿತ್ಯ ಒತ್ತಿ ಹೇಳಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆದರ್ಶ ರೂಢಿಸಿಕೊಳ್ಳಲು ಪ್ರೇರಣೆಯಾಗುವಂಥ ಯಾವ ಸಾಹಿತ್ಯವೂ ಬರುತ್ತಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ’ಎಸ್‌.ಎಸ್‌. ಶೆಟ್ಟರ್‌ ಅವರ ನಡೆ, ನುಡಿ ಎರಡೂ ಒಂದೇ ಆಗಿತ್ತು. ಅವರು ಬಹುಮತದ ಬದಲು ಸತ್ಯದ ಹಾದಿಯಲ್ಲಿ ಸಾಗಿದವರು‘ ಎಂದರು.

ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ’ತಂದೆಯ ಆದರ್ಶಗಳನ್ನು ರೂಢಿಸಿಕೊಂಡಿದ್ದಕ್ಕೆ ಈಗ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಶಾಸಕರಾಗಬೇಕು ಎನ್ನುವ ಅವರ ಆಸೆ ಈಡೇರಲಿಲ್ಲ. ಆದರೂ, ಅವರು ಜನಪರ ಕಾರ್ಯಗಳಿಂದ ಯಾವತ್ತೂ ಹಿಂದೆ ಸರಿಯಲಿಲ್ಲ. ಅವರ ಕೆಲಸದ ಬಳುವಳಿ ನಮ್ಮ ಕುಟುಂಬದವರಿಗೆ ಬಂದಿದೆ‘ ಎಂದರು.

ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್‌. ಕೌಜಲಗಿ, ಬಿಜೆಪಿ ಪ್ರಮುಖರಾದ ಮಲ್ಲಿಕಾರ್ಜುನ ಸಾವುಕಾರ, ನಾಗೇಶ ಕಲಬುರ್ಗಿ, ಸಂತೋಷ ಚವ್ಹಾಣ, ರವಿ ನಾಯ್ಕ, ಶ್ರೀನಿವಾಸ ಶಾಸ್ತ್ರಿ, ಮುರುಗೇಶ ಶೆಟ್ಟರ್, ಕಿರಣ ಉಪ್ಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT