ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಆದೇಶ: ಅಕ್ರಮ ಮನೆಗಳಿಗೆ ಬೀಗ

ಹೊಸೂರಿನ ಕುಲಕರ್ಣಿ ಚಾಳದಲ್ಲಿ ವಾಸವಾಗಿದ್ದ ಕುಟುಂಬಗಳು
Last Updated 15 ಜುಲೈ 2019, 16:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಹೊಸೂರು ಬಳಿ ಕುಲಕರ್ಣಿ ಚಾಳದಲ್ಲಿರುವ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ 72 ಮನೆಗಳನ್ನು ಹೈ ಕೋರ್ಟ್‌ ಆದೇಶದ ಮೇರೆಗೆ ಜಾಗದ ಮೂಲ ಮಾಲೀಕರು ಸೋಮವಾರ ವಶಕ್ಕೆ ಪಡೆದುಕೊಂಡರು.

ಮಂಗಲಬಾಯಿ ವೀರನಗೌಡ ಪಾಟೀಲ ಹಾಗೂ ಇತರ ಐವರಿಗೆ ಸೇರಿದ 1 ಎಕರೆ 17 ಗುಂಟೆ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳಿಗೆ ಪೊಲೀಸರ ಸಮ್ಮುಖದಲ್ಲಿ ಬೀಗ ಹಾಕಲಾಯಿತು. ಆ ವೇಳೆ ಕೆಲವು ಕುಟುಂಬದವರು ಪ್ರತಿರೋಧ ವ್ಯಕ್ತ ಪಡಿಸಿದರಾದರೂ, ಪೊಲೀಸರು ಅವರನ್ನು ಸಮಾಧಾನ ಪಡಿಸಿದರು.

‘ಜಾಗದ ವಾರಸುದಾರರು ಸುಮಾರು 70 ವರ್ಷಗಳ ಹಿಂದೆ ಇಲ್ಲಿಯ ಕೆಲವು ಮನೆಗಳನ್ನು ಬಾಡಿಗೆ ನೀಡಿದ್ದರು. ಆದರೆ, ಬಾಡಿಗೆ ಪಡೆದವರು ಕೆಲವು ವರ್ಷಗಳ ನಂತರ ಯಾರ‍್ಯಾರಿಗೋ ಬಾಡಿಗೆ ನೀಡಿ, ಮಾರಾಟ ಮಾಡಿ ಹೋಗಿದ್ದರು. ಬಾಡಿಗೆ ಪಡೆದವರು ಈ ಜಾಗದ ಕುರಿತು ಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ಬಳಿಕ ಮೂಲ ವಾರಸುದಾರರಿಗೆ ಜಾಗ ನೀಡಬೇಕು ಎಂದು ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ 2016–17ರಲ್ಲಿ 22 ಕುಟುಂಬಗಳು ಜಾಗ ಖಾಲಿ ಮಾಡಿದ್ದವು. ಉಳಿದವರಿಗೆ ಮನೆ ಖಾಲಿ ಮಾಡುವಂತೆಯೂ ಸೂಚಿಸಲಾಗಿತ್ತು. ಆದರೂ ನಮ್ಮ ಮಾತು ಕೇಳಿರಲಿಲ್ಲ. ಹೈಕೋರ್ಟ್‌ಗೆ ಮೇಲ್ಮನವಿ ಹಾಕಿದಾಗ ತೆರವುಗೊಳಿಸಬೇಕೆಂದು ಆದೇಶ ನೀಡಿದೆ’ ಎಂದು ವಕೀಲ ಸುಮಿತ್‌ ಶೆಟ್ಟರ್‌ ತಿಳಿಸಿದರು.

‘ಕೋರ್ಟ್‌ ಆದೇಶದಂತೆಯೇ ಎಲ್ಲ ಮನೆಗಳ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಮನೆಗಳಿಗೆ ಬೀಗ ಹಾಕಿದ್ದೇವೆ. ಕೆಲವರು ಸ್ವಯಂ ಪ್ರೇರಿತರಾಗಿ ಸಾಮಗ್ರಿಗಳನ್ನು ಹೊರಗೆ ಹಾಕಿ ಬೇರಡೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಕೆಲವರು ಸಮಯಾವಕಾಶ ಕೇಳಿದ್ದಾರೆ. ಹೊರಗೆ ಹಾಕಿದ ಸಾಮಗ್ರಿಗಳನ್ನು ಕಾನೂನು ಪ್ರಕಾರ ಕೋರ್ಟ್‌ಗೆ ಸಲ್ಲಿಸಿ, ಮುಂದಿನ ಕ್ರಮಕ್ಕೆ ಸೂಚಿಸುತ್ತೇವೆ’ ಎಂದರು.

ಸುಮಾರು ಅರವತ್ತು ವರ್ಷಗಳಿಂದ ಬದುಕಿ ಬಾಳಿದ್ದ ಮನೆಗೆ ಬೀಗ ಜಡಿಯುವಾಗ ಮನೆಯವರ ಕಣ್ಣಾಲಿಗಳು ತೇವವಾಗಿದ್ದವು. ಕೆಲವರು ಉಮ್ಮಳಿಸಿ ಬರುವ ದುಃಖವನ್ನು ತಡೆಯಲು ಪ್ರಯತ್ನಿಸಿದ್ದರೆ, ಮತ್ತೆ ಕೆಲವರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಮನೆ ಸದಸ್ಯರೆಲ್ಲ ಸಾಮಗ್ರಿಗಳನ್ನು ಹೊರ ತೆಗೆದು ಒಂದೊಂದಾಗಿ ವಾಹನಕ್ಕೆ ತುಂಬುತ್ತಿದ್ದರು.

‘70 ವರ್ಷಗಳಿಂದ ಇಲ್ಲೇ ವಾಸವಿದ್ದು, ಮದುವೆಯಾಗಿ ಮಕ್ಕಳ ಮದುವೆಯನ್ನೂ ಮಾಡಿದ್ದೆ. ಈಗ ಆಸರೆಗೆಂದು ಒಬ್ಬ ಮಗ ಇದ್ದಾನೆ. ಅವನ ಆರೋಗ್ಯವೂ ಸರಿಯಿಲ್ಲ. ಈ ಸಂದರ್ಭದಲ್ಲಿ ಮನೆ ಬಿಡಿಸಿದರೆ ಎಲ್ಲಿಗೆ ಹೋಗಬೇಕು. ನಮಗೆ ಯಾರು ದಿಕ್ಕು?’ ಎಂದು ವೃದ್ಧೆ ಹನುಮವ್ವ ಹಾದಿಮನಿ ಕಣ್ಣೀರಾದರು.

‘ಮನೆ, ಜಾಗ ನಮ್ಮದು ಎನ್ನಲು ಯಾವ ದಾಖಲೆಗಳು ನಮ್ಮ ಬಳಿ ಇಲ್ಲ. ಆದರೆ, ಪ್ರತಿ ತಿಂಗಳು ಮನೆಗೆ ಕರ ಪಾವತಿಸುತ್ತೇವೆ. ಪ್ರತಿ ತಿಂಗಳು ನೀರು ಹಾಗೂ ವಿದ್ಯುತ್‌ ಬಿಲ್‌ ತುಂಬುತ್ತಿದ್ದೇವೆ. ದುಡಿದು ತಿನ್ನುವ ಕುಟುಂಬ ನಮ್ಮದಾಗಿರುವುದರಿಂದ ನಮಗೆ ನೆಲೆ ಎನ್ನುವುದು ಇಲ್ಲ. ಜನ ಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಕಡೆಗೆ ತುಸು ಗಮನ ಹರಿಸಬೇಕು’ ಎಂದು ಸಂತ್ರಸ್ತ ನಿಂಗಪ್ಪ ಹುಬ್ಬಳ್ಳಿ ವಿನಂತಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT