ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಗೇರಿ: ಲೌಕ್‌ಡೌನ್‌ ಪರಿಣಾಮ, ಕ್ಷೌರಕ್ಕೂ ಸಂಕಷ್ಟ

ಹಳೇ ಪದ್ಧತಿ ನೆನಪು, ಮನೆಮನೆಗೆ ತೆರಳುತ್ತಿರುವ ಕ್ಷೌರಿಕರು
Last Updated 9 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಗುಡಗೇರಿ: ಕೊರೊನಾ ಸೋಂಕಿನಿಂದ ಲಾಕ್‌ಡೌನ್‌ ಘೋಷಣೆಯಾಗಿರುವ ಕಾರಣ ಕ್ಷೌರ ಮಾಡಿಸಿಕೊಳ್ಳಲು ಜನ ಪರದಾಡುವಂತಾಗಿದೆ.

ಬೇಸಿಗೆ ಕಾಲವಾದ್ದರಿಂದ ಜಳ ತಡೆಯಲಾರದೇ ಒಂದೆಡೆ ಪರದಾಡುವಂತಿದ್ದರೆ, ಇನ್ನೊಂದೆಡೆ ಕ್ಷೌರ ಮಾಡಿಸಿಕೊಳ್ಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಉದ್ಯೋಗವನ್ನು ನಂಬಿಕೊಂಡ ಕ್ಷೌರಿಕರಿಗೂ ಸಮಸ್ಯೆಯಾಗಿದೆ.

ಬೆಳಗಾದರೆ ಸಾಕು ಜನ ಕರೆ ಮಾಡಿ ಮನೆಗೆ ಬಂದು ಕ್ಷೌರ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿರುವುದರಿಂದ ಕ್ಷೌರಿಕರು ಅವರ ಮನೆಗಳಿಗೆ ತೆರಳಿ ಕ್ಷೌರ ಮಾಡುತ್ತಿದ್ದಾರೆ. ಮೊದಲು ಕ್ಷೌರಿಕರು ಪೆಟ್ಟಿಗೆ ಹಿಡಿದು ಮನೆಮನೆಗೆ ತೆರಳಿ ಚೌಣಿಯಲ್ಲಿ, ಹಿತ್ತಲದಲ್ಲಿ ಕ್ಷೌರ ಮಾಡುತ್ತಿದ್ದರು. ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲರೂ ಅಂಗಡಿಗಳಿಗೆ ತೆರಳುತ್ತಿದ್ದರು. ಕೊರೊನಾ ಕಾರಣಕ್ಕಾಗಿ ಹಳೇ ದಿನಗಳು ಮತ್ತೆ ಮರಳಿ ಬರುತ್ತಿವೆ!

ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಕ್ಷೌರಿಕರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡು ಬಿಸಿನೀರು ಹಾಗೂ ಸೋಪಿನಿಂದ ಸಾಮಗ್ರಿಗಳನ್ನು ಶುಚಿಗೊಳಿಸಿ ಕ್ಷೌರ ಮಾಡುತ್ತಿದ್ದಾರೆ. ತೀರಾ ಅನಿವಾರ್ಯ ಎನಿಸಿದರೆ ಮಾತ್ರ ಕ್ಷೌರ ಮಾಡುತ್ತಿದ್ದು; ಬಹಳ ಕೂದಲು ಇರದಿದ್ದರೆ ಅವರಿಗೆ ಲೌಕ್‌ಡೌನ್‌ ಮುಗಿದ ಬಳಿಕ ಅಂಗಡಿ ತೆರೆಯುತ್ತೇವೆ ಅಲ್ಲಿಗೆ ಬನ್ನಿ ಎಂದು ಹೇಳುತ್ತಿದ್ದಾರೆ.

ಕ್ಷೌರಿಕ ಪ್ರಕಾಶ ನಾವ್ಹಿ ಅವರನ್ನು ಈ ಕುರಿತು ಮಾತನಾಡಿಸಿದಾಗ ‘ಅಂಗಡಿ ತೆರೆಯುವಂತೆ ಜನ ದುಂಬಾಲು ಬಿದ್ದಿದ್ದಾರೆ. ಆದರೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಜನ ನಮ್ಮನ್ನು ಬಿಡುತ್ತಿಲ್ಲ. ಅಗತ್ಯ ಇರುವವರಿಗೆ ಮಾತ್ರ ಮನೆಮನೆಗೆ ಹೋಗಿ ಕ್ಷೌರ ಮಾಡುತ್ತಿದ್ದೇನೆ’ ಎಂದರು.

ಕ್ಷೌರ ಮಾಡಿಸಿಕೊಳ್ಳಲು ಕಾಯುತ್ತಿದ್ದ ಮಂಜುನಾಥ ಗದಗಿನಮಠ ಅವರನ್ನು ಮಾತನಾಡಿಸಿದಾಗ ‘ಮೂರು ತಿಂಗಳ ಹಿಂದೆಯೇ ಕ್ಷೌರ ಮಾಡಿಸಿಕೊಂಡಿದ್ರೀ, ಈಗ ಬಿಸಿಲ ಐತ್ರಿ, ಮೈ ತುಂಬಾ ನೀರ ಇಳಿಯಾಕತ್ತವರೀ, ತಲಿ ಭಾರವಾಗೇತ್ರಿ ಅದಕ್ಕ ಕಟಿಂಗ್ ಮಾಡಸಕೊಣಾಕತ್ತೀನ್ರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT