ನಿಷ್ಠೆ, ಸತತ ಪ್ರಯತ್ನದಿಂದ ಯಶಸ್ಸು

ಹುಬ್ಬಳ್ಳಿ: ‘ಸದಸ್ಯರಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ನಿರಂತರ ಪ್ರಯತ್ನವಿದ್ದಾಗ ಮಾತ್ರ ಒಂದು ಸಂಸ್ಥೆಯನ್ನು ಕಟ್ಟಿ ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ’ ಎಂದು ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ಅಧ್ಯಕ್ಷ ವಿದ್ವಾನ್ ಗಣೇಶ ಹೆಗಡೆ ಹೇಳಿದರು.
ನಗರದ ಹವ್ಯಕ ಸಾಂಸ್ಕೃತಿಕ ಸಭಾಭವನದಲ್ಲಿ ಭಾನುವಾರ ನಡೆದ ಜ್ಯೋತಿರ್ವಿಜ್ಞಾನ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮದಲ್ಲಿ ಅವರು ಮಾತನಾಡಿದರು.
25 ವರ್ಷಗಳಲ್ಲಿ ಅಗಲಿರುವ ಸಂಸ್ಥಾಪಕರು, ಪದಾಧಿಕಾರಿಗಳು, ಸದಸ್ಯರನ್ನು ನೆನೆದ ಅವರು, ‘ಸಂಸ್ಥೆ ಬೆಳೆದು ಬಂದ ಹಾದಿಯ ಹಂತಗಳನ್ನು ನೆನಪಿಸಿಕೊಳ್ಳದಿದ್ದರೆ ಅಂತಹ ಸಂಸ್ಥೆ ಹೆಚ್ಚು ಕಾಲ ಬಾಳುವುದಿಲ್ಲ’ ಎಂದರು.
ಧಾರವಾಡದ ಸಂಸ್ಕೃತ ಪಾಠಶಾಲೆ ಮುಖ್ಯ ಪ್ರಾಚಾರ್ಯ ರಾಜೇಶ್ವರ ಶಾಸ್ತ್ರಿ, ‘ಜ್ಯೋತಿಷ ಶಾಸ್ತ್ರವನ್ನು ಇನ್ನಷ್ಟು ಪ್ರಚಾರಗೊಳಿಸಲು ಈ ಸಂಸ್ಥೆ ಮಾಡುತ್ತಿರುವ ಕಾರ್ಯ ಮಹತ್ತರವಾದದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ರಜತ ರಶ್ಮಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿವಿಧೆಡೆಯಿಂದ ಬಂದಿದ್ದ ಜ್ಯೋತಿಷ ತಜ್ಞರನ್ನು ಸನ್ಮಾನಿಸಲಾಯಿತು. 25 ಹಿರಿಯರಿಗೆ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು.
ಎಂ.ಎಸ್. ಹುಲ್ಲೊಳ್ಳಿ, ಎಂ.ಎಸ್. ಉಮಾಪತಿ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಆನಂದ ಹಂದಿಗೋಳ, ಕಾರ್ಯದರ್ಶಿ ವಿ.ಜಿ. ತೊರವಿ, ಪವನ ಜೋಶಿ, ಬಿ.ಬಿ. ಸ್ವಾಮಿ, ಕೃಷ್ಣಭಟ್ಟ, ಶ್ರೀನಿವಾಸ ಕಟ್ಟಿ ಆಚಾರ, ಗುಂಜೂರು ಪ‍್ರಕಾಶ ಶಾಸ್ತ್ರಿ, ವಿಜಯಕುಮಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.