ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕದ ಮಲಾಲಾ’ ಮಂಜುಳಾ ಮುನವಳ್ಳಿ

Published 21 ಅಕ್ಟೋಬರ್ 2023, 6:06 IST
Last Updated 21 ಅಕ್ಟೋಬರ್ 2023, 6:06 IST
ಅಕ್ಷರ ಗಾತ್ರ

ಚಿಕ್ಕ ವಯಸ್ಸಿನಲ್ಲೆ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮಾಡಿ, ಬಾಲ್ಯವಿವಾಹ ತಡೆದು, ಜೀತಕ್ಕಿದ್ದ ಮಕ್ಕಳನ್ನು ರಕ್ಷಿಸಿ  ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಂಜುಳಾ ಮುನವಳ್ಳಿ, ಪ್ರಸ್ತುತ ಮಹಿಳಾ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ.

ಬೆಳಗಾವಿ ಜಿಲ್ಲೆ ಚಚಡಿ ಗ್ರಾಮದ ಮಂಜುಳಾ, ಧಾರವಾಡದ ರಾಮಾಪುರದಲ್ಲಿ ನೆಲೆಸಿ, ಅಲ್ಲಿಯೇ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿದ್ದಾರೆ. ಧಾರವಾಡದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಿಂದ ಬಿಎ ಎಲ್‍ಎಲ್‍ಬಿ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಎಲ್‍ಎಲ್‍ಎಂ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

6ನೇ ತರಗತಿ ಓದುತ್ತಿದ್ದಾಗ ರಾಮಾಪುರಕ್ಕೆ ಭೇಟಿ ನೀಡಿದ್ದ ‘ಕಿಡ್ಸ್’ ಸಂಸ್ಥೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿತ್ತು. ಇದರಿಂದ ಪ್ರೇರಿತರಾದ ಮಂಜುಳಾ ಕಿಡ್ಸ್‌ನಲ್ಲಿ ಪ್ರತಿನಿಧಿಯಾಗಿ ಧಾರವಾಡದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹಗಳನ್ನು ತಡೆದರು. ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳನ್ನು ಗುರುತಿಸಿ ಅವರನ್ನು ಜೀತಮುಕ್ತರನ್ನಾಗಿ ಮಾಡಿ, ಬಾಲಮಂದಿರಕ್ಕೆ ಸೇರಿಸಿದರು.  ಈ ಮಧ್ಯೆ ಊರಿನ ಜನರು ವಿರೋಧ ವ್ಯಕ್ತಪಡಿಸಿ, ಮನೆವರೆಗೂ ಬಂದು ಜಗಳ ಮಾಡಿದರೂ ವಿಚಲಿತರಾಗದ ಮಂಜುಳಾ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮುಂದುವರೆಸಿದ್ದಾರೆ.

ಮಂಜುಳಾ, 2013ರಲ್ಲಿ ಜಿನೇವಾದಲ್ಲಿ ನಡೆದ 66ನೇ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಮಹಾಸಮ್ಮೇಳನದಲ್ಲಿ (ಯುಎನ್‍ಸಿಆರ್‌ಸಿ– ಯುನೈಟೆಡ್‌ ನೇಷನ್ಸ್‌ ಕಮಿಟಿ ಆನ್‌ ದ್‌ ರೈಟ್ಸ್‌ ಆಫ್‌ ದ್‌ ಚೈಲ್ಡ್‌) ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ 20 ನಿಮಿಷ ಕನ್ನಡದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ವರದಿ ಮಂಡಿಸಿದರು. ಆಗ ಮಂಜುಳಾಗೆ 16 ವರ್ಷ. ನಂತರ ಅವರನ್ನು ‘ಕರ್ನಾಟಕದ ಮಲಾಲಾ’ ಎಂದೇ ಕರೆಯಲಾರಂಭಿಸಿದರು. ‘ಇದು ನನ್ನ ಜೀವನದ ದೊಡ್ಡ ಮೈಲಿಗಲ್ಲು, ಬದುಕನ್ನೆ ಬದಲಿಸಿದ ಕ್ಷಣ’ ಎನ್ನುತ್ತಾರೆ ಅವರು.

ರಾಜ್ಯದಾದ್ಯಂತ ಓಡಾಡಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. 2019ರಲ್ಲಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸೇವಾ ಸಂಸ್ಥೆ ಆರಂಭಿಸಿ, ಮಕ್ಕಳು ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸತೊಡಗಿದರು. ನ್ಯಾಯಮಿತ್ರ ಲಿಗಲ್ ಟ್ರಸ್ಟ್ ಮೂಲಕ ನೊಂದ ಮಹಿಳೆಯರಿಗೆ ಕಾನೂನು ಸಲಹೆ ನೀಡುತ್ತಿದ್ದಾರೆ.

ಬಾಲಪ್ರತಿಭೆ, ಅವ್ವ ಪ್ರಶಸ್ತಿ, ಪ್ರೈಡ್ ಆಫ್ ಕೆಎಲ್‍ಇ ಪ್ರಶಸ್ತಿ, ವಾತ್ಸಲ್ಯ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಹಲವು ಪ್ರಶಸ್ತಿಗಳು ದೊರೆತಿವೆ. 

ಮಂಜುಳಾ ಮುನವಳ್ಳಿ
ಮಂಜುಳಾ ಮುನವಳ್ಳಿ
ಮಂಜುಳಾ ಮುನವಳ್ಳಿ
ಮಂಜುಳಾ ಮುನವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT