ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಮಾರುಕಟ್ಟೆ ಸಂಕೀರ್ಣ ವಿರೋಧಿಸಿ ಪ್ರತಿಭಟನೆ

ಪರ್ಯಾಯ ವ್ಯವಸ್ಥೆಗೂ ಮುನ್ನವೇ ಸ್ಥಳಾಂತರಗೊಳ್ಳುವಂತೆ ಪಾಲಿಕೆಯಿಂದ ನೋಟಿಸ್‌
Last Updated 27 ಜೂನ್ 2020, 17:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಮಾರುಕಟ್ಟೆ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಮಾರುಕಟ್ಟೆ ಸಂಕೀರ್ಣ ವಿರೋಧಿಸಿ, ಕಿಲ್ಲಾ ಮಾರುಕಟ್ಟೆ ವರ್ತಕರ ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೇ ಹುಬ್ಬಳ್ಳಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಹೆಗ್ಗೇರಿಯ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅದರಂತೆ, ಪಾಲಿಕೆ ಜೂನ್ 12ರಂದು ವ್ಯಾಪಾರಿಗಳಿಗೆ ನೋಟಿಸ್ ನೀಡಿ, 7 ದಿನಗಳ ಒಳಗೆ ತಾತ್ಕಾಲಿಕ ಮಾರುಕಟ್ಟೆ ಮೈದಾನಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿತ್ತು. ಆದರೆ, ಅಲ್ಲಿ ಪರ್ಯಾಯ ವ್ಯವಸ್ಥೆಯನ್ನೇ ಮಾಡಿಲ್ಲ. ಹೀಗಾದರೆ ನಾವೆಲ್ಲಿಗೆ ಹೋಗಬೇಕು ಎಂದು ಸಂಘದ ಅಧ್ಯಕ್ಷ ಮಹಮದ್ ಯೂನಸ್ ಸವಣೂರ ಹೇಳಿದರು.

ಕಿರಾಣಿ, ಕಾಯಿಪಲ್ಲೆ ಮಾರಾಟ ಮಾಡುವವರು ಸೇರಿದಂತ ಸದ್ಯ ಇಲ್ಲಿ 200 ವರ್ತಕರಿದ್ದೇವೆ. ಹೊಸ ಸಂಕೀರ್ಣದಲ್ಲಿ ಕಡಿಮೆ ಮಳಿಗೆಗಳು ಇರಲಿವೆ. ಹಾಗಾದರೆ, ಉಳಿದ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದ ಸಂಘದ ಉಪಾಧ್ಯಕ್ಷ ಬಿ.ಎಫ್. ಹೊಸೂರ, ಈ ಯೋಜನೆಯಿಂದಾಗಿ ವ್ಯಾಪಾರಿಗಳು ಬೀದಿ ಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘದ ಅಲ್ತಾಫ್ ಹುಸೇನ್ ಸವಣೂರ, ಎಂ.ಆರ್. ತಾಂಬೆ, ಸಿ.ಎಸ್. ಭಂಡಾರಿ, ಜಿ.ಎಂ. ಗದಗಕರ, ಜಿ.ಕೆ. ದುಲೆವಾಲೆ, ರಜಾಕ್ ಸಾಬ್ ಹುಕ್ಕೇರಿ, ಸುಭಾಸ್ ಮಾಗಿ, ಸಾರಾಬಿ ಸವಣೂರ, ನಾಗೇಂದ್ರವ್ವ ಬೆಳಮಕರ, ಸೋನುಬಾಯಿ ಇದ್ದರು.

‘ಪರ್ಯಾಯ ವ್ಯವಸ್ಥೆ ನಂತರವೇ ಸ್ಥಳಾಂತರ’

‘ವ್ಯಾಪಾರಿಗಳಿಗೆ ಅಂಬೇಡ್ಕರ್ ಮೈದಾನದಲ್ಲಿ ಪರ್ಯಾಯ ವ್ಯವಸ್ಥೆ ಈ ವೇಳೆಗಾಗಲೇ ಆಗಬೇಕಿತ್ತು. ಆದರೆ, ವಿಳಂಬವಾಗಿದೆ. ಈಗ ಕೆಲಸ ಆರಂಭವಾಗಿದ್ದು, ಹದಿನೈದು ದಿನಗಳ ಒಳಗೆ ಪೂರ್ಣಗೊಳ್ಳಲಿದೆ. ಬಳಿಕ, ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

5 ಅಂತಸ್ತಿನ ಸಂಕೀರ್ಣ: ‘ಸ್ಥಳದಲ್ಲಿ ಐದು ಅಂತಸ್ತಿನ (ಜಿ+3) ಮಾರುಕಟ್ಟೆ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಅದರಲ್ಲಿ 92 ಸ್ಟಾಲ್‌ಗಳು ಹಾಗೂ 25 ಶಾಪ್‌ಗಳು ನಿರ್ಮಾಣವಾಗಲಿವೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ಹೇಳಿದರು.

ಅಂಕಿ ಅಂಶ....

ಮಾರುಕಟ್ಟೆ ಸಂಕೀರ್ಣ ಯೋಜನೆಯ ಮೊತ್ತ: ₹13.95 ಕೋಟಿ

ಯೋಜನೆಯ ಅವಧಿ: 15 ತಿಂಗಳು

ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳು: 200

ಪರ್ಯಾಯ ವ್ಯವಸ್ಥೆಗೆ ನಿಗದಿಪಡಿಸಿರುವ ಮೊತ್ತ: ₹76 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT