ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮಿಣಜಗಿ ಕಲಾ ಗ್ಯಾಲರಿ: ನವೀಕರಿಸಿದರೂ ಆಗಲಿಲ್ಲ ಕಲಾ ಪ್ರದರ್ಶನ

Published 3 ಆಗಸ್ಟ್ 2023, 4:51 IST
Last Updated 3 ಆಗಸ್ಟ್ 2023, 4:51 IST
ಅಕ್ಷರ ಗಾತ್ರ

ಮಹಮ್ಮದ್ ಶರೀಫ್

ಹುಬ್ಬಳ್ಳಿ: ಕ್ಯಾನ್ವಾಸ್ ಎದುರು ಕುಂಚ ಹಿಡಿದು ನಿಲ್ಲುತ್ತಿದ್ದ ಕಲಾವಿದರು ಅಂದು ಆ ಕಟ್ಟಡದ ಗೋಡೆ ಎದುರು ಸುಣ್ಣ, ಬಣ್ಣದ ಡಬ್ಬಿ, ಬ್ರಶ್‌ ಹಿಡಿದು ನಿಂತರು. ಪಾಳು ಬಿದ್ದ ಕಟ್ಟಡದ ಗೋಡೆ ಕೆಲವರು ಶುಚಿಗೊಳಿಸಿದರು. ಇನ್ನೂ ಕೆಲವರು ವಿದ್ಯುತ್ ವೈರ್‌ ಸಂಪರ್ಕಗಳ ದುರಸ್ತಿಪಡಿಸಿ, ಬೆಳಕಿನ ವ್ಯವಸ್ಥೆ ಮಾಡಿದರು. ಕಟ್ಟಡ ಹೊಸ ರೂಪ ಪಡೆಯಿತು.

13 ವರ್ಷಗಳಿಂದ ಪಾಳುಬಿದ್ದಿದ್ದ ಇಲ್ಲಿನ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಕಲಾ ಗ್ಯಾಲರಿ ಕಟ್ಟಡ 2019ರಲ್ಲಿ ಮರುಜೀವ ಪಡೆದದ್ದು ಹೀಗೆ.

30 ಜನವರಿ 2019ಕ್ಕೆ ಕುಂಚಬ್ರಹ್ಮ ಎಂ.ವಿ. ಮಿಣಜಗಿ ಅವರು ಜನಿಸಿ 118 ವರ್ಷಗಳಾಗಿದ್ದವು. ಅವರಿಂದ ಪ್ರಭಾವಿತರಾದ ಹಲವು ಕಲಾವಿದರು ಸೇರಿ ‘ಕುಂಚಬ್ರಹ್ಮ ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ’ ಸಮಿತಿ ರಚಿಸಿದರು. ಗ್ಯಾಲರಿ ನವೀಕರಣಕ್ಕೆ ಪಾಲಿಕೆ ನೆರವು ಕೋರಲಾಯಿತು.

ಪಾಲಿಕೆ ಧನಸಹಾಯದಿಂದ ಗ್ಯಾಲರಿ ನವೀಕರಣ ಕಾರ್ಯ ನಡೆದಿದೆ ಎಂದೇ ಹಲವರ ಭಾವನೆ. ಪಾಲಿಕೆಯಿಂದ ₹1 ಲಕ್ಷ ಸಿಗುವ ಭರವಸೆ ಇತ್ತು. ಆದರೆ ಸಿಗಲಿಲ್ಲ.
ಜಿ.ಆರ್.ಮಲ್ಲಾಪುರ, ಸದಸ್ಯ, ಕುಂಚಬ್ರಹ್ಮ ಡಾ.ಎಂ.ವಿ ಮಿಣಜಗಿ ಆರ್ಟ್‌ ಗ್ಯಾಲರಿ ಸಮಿತಿ

‘ಟೆಂಡರ್ ನೀಡಿದ್ದರೆ ಸಂಪೂರ್ಣ ನವೀಕರಣಕ್ಕೆ ₹5 ಲಕ್ಷ ಖರ್ಚಾಗುತ್ತಿತ್ತು. ಆಗ ಪಾಲಿಕೆ ಆಯುಕ್ತರು ₹ 1 ಲಕ್ಷ ಅನುದಾನ ನೀಡಲು ಮಾತ್ರ ಅವಕಾಶವಿದೆ ಎಂದು ಉತ್ತರಿಸಿದರು. ಅರ್ಥಿಕ ನೆರವಿನ ನಿರೀಕ್ಷೆಯಲ್ಲಿ ಕಲಾವಿದರೆಲ್ಲರೂ ಸೇರಿ ಸಂಭ್ರಮಿಸಿದೆವು. ಆದರೆ, ಅಷ್ಟರಲ್ಲಿ ಪಾಲಿಕೆ ಆಯುಕ್ತರ ವರ್ಗಾವಣೆಯಾದ ಕಾರಣ ಆರ್ಥಿಕ ನೆರವು ಸಿಗಲಿಲ್ಲ. ಕೊನೆಗೆ ನಾವೇ ಎಲ್ಲಾ ಕಲಾವಿದರು ಸೇರಿ ಹಣ ಸಂಗ್ರಹಿಸಿ, ಮಿಣಜಗಿ ಕಲಾ ಗ್ಯಾಲರಿಯನ್ನು ₹ 1.5 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿದೆವು’ ಎಂದು ‘ಕುಂಚಬ್ರಹ್ಮ ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ’ ಸಮಿತಿ ಅಧ್ಯಕ್ಷ, ಹಿರಿಯ ಕಲಾವಿದ ಅರ್.ಬಿ.ಗರಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಕೆಲಸವನ್ನು ಬೇರೆಯವರಿಗೆ ವಹಿಸಿದರೆ ಖರ್ಚು ಹೆಚ್ಚಾಗುತ್ತದೆ ಎಂಬ ಆತಂಕ ಇತ್ತು. ಅದಕ್ಕೆ ನಾವೇ ಕಲಾವಿದರು ಸೇರಿ ಗೋಡೆಗಳಿಗೆ ಬಣ್ಣ ಬಳಿದೆವು. 13 ವರ್ಷಗಳಿಂದ ಮುಚ್ಚಿದ್ದರಿಂದ ಗ್ಯಾಲರಿಯ ಗೋಡೆಗಳೂ ಬಿರುಕು ಬಿಟ್ಟು, ಜೇಡರ ಬಲೆ ತುಂಬಿ, ಪಾಳು ಬಿದ್ದಿತ್ತು. ಕಟ್ಟಡ ಪಾಳು ಬಿದ್ದಿತ್ತು. ಚಾವಣಿಯಿಂದ ನೀರು ಸೋರುತ್ತಿತ್ತು. ಎಲ್ಲವನ್ನೂ ಸರಿಪಡಿಸಿದೆವು. ಗ್ಯಾಲರಿ ನವೀಕರಣ ಮಾಡಿದೆವು. ಆದರೆ, ಕೋವಿಡ್‌ ಸಂದರ್ಭದಲ್ಲಿ ಲಾಕ್‌ಡೌನ್ ಮತ್ತು ಇನ್ನಿತರ ಬೆಳವಣಿಗೆಗಳಿಂದ ಗ್ಯಾಲರಿ ಬಂದ್‌ ಆಯಿತು’ ಎಂದು ಕಲಾವಿದ ಜಿ.ಆರ್ ಮಲ್ಲಾಪುರ ವಿವರಿಸಿದರು.

ಮಿಣಜಗಿ ನೆನಪಿನಲ್ಲಿ ಕಲಾ ಗ್ಯಾಲರಿ ಬೇಕು

‘ಬಿಜಾಪುರದ ಡಾ. ಎಂ.ವಿ. ಮಿಣಜಗಿ ಅವರು ನಾಡಿನ ದೊಡ್ಡ ಕಲಾವಿದರು. ದೇಶ–ವಿದೇಶದಲ್ಲಿ ಚಿತ್ರಕಲೆ ಕುರಿತು ಅಧ್ಯಯನ ಮಾಡಿದ್ದರು. 1954ರಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆದ ಅವರ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಅಂದಿನ ಉಪರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಮತ್ತು 1959ರಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಉದ್ಘಾಟಿಸಿದ್ದರು. ಆವರು ಆರಂಭಿಸಿದ ಕಲಾಶಾಲೆಯು ಶ್ರೀವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯವಾಗಿದ್ದು ಪ್ರಸ್ತುತ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿದೆ. ಕಲಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮಿಣಜಗಿ ಅವರ ನೆನಪಿನಲ್ಲಿ ಒಂದಾದರೂ ಕಲಾ ಗ್ಯಾಲರಿ ಇರಬೇಕು. ಅವರ ಕೊಡುಗೆ ಸ್ಮರಿಸಬೇಕು’ ಎಂದು ಶ್ರೀ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸಿ.ಡಿ ಜತ್ತನ್ನವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT