ಬುಧವಾರ, ನವೆಂಬರ್ 20, 2019
20 °C
ಮದುವೆ ಸಿಂಧುವನ್ನಾಗಿಸಲು ಆಧಾರ್‌ ದಾಖಲೆಯಲ್ಲಿ ಹುಟ್ಟಿದ ದಿನಾಂಕ ಬದಲು

ಅಪ್ರಾಪ್ತೆ ವಿರುದ್ಧ ಜಿಲ್ಲಾಧಿಕಾರಿಗೆ ತಾಯಿ ದೂರು

Published:
Updated:
Prajavani

ಧಾರವಾಡ: ತನ್ನ ಮಡಿಲಲ್ಲಿ ಹುಟ್ಟಿದ ಮಗಳ ಜನ್ಮದಿನ ಮರೆಯಲು ಸಾಧ್ಯವಿಲ್ಲದ ಆ ತಾಯಿಗೆ, ಅಂಚೆ ಮೂಲಕ ಮನೆಗೆ ಬಂದ ಹೊಸ ಆಧಾರ್‌ ಕಾರ್ಡ್‌ನಲ್ಲಿ ಬದಲಾಗಿದ್ದ ಮಗಳ ಹುಟ್ಟಿದ ದಿನಾಂಕ ಕಂಡು ಅಚ್ಚರಿ ಉಂಟುಮಾಡಿತ್ತು.

ತಾಲ್ಲೂಕಿನ ಕವಲಗೇರಿ ಗ್ರಾಮದ ಸಾವಕ್ಕ ಮೈಸೂರ ಎಂಬುವವರಿಗೆ ಮೂವರು ಪುತ್ರಿಯರು. ಹಿರಿಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಇರುವ ಇನ್ನಿಬ್ಬರು ಪುತ್ರಿಯರು 18 ವರ್ಷದೊಳಗಿನವರು. ಆದರೆ ಪ್ರೀತಿಸಿ ಮದುವೆಯಾಗಿ ಮನೆ ಬಿಟ್ಟಿರುವ ದ್ವಿತೀಯ ಪುತ್ರಿಯ ಆಧಾರ್‌ ಕಾರ್ಡ್‌ ಮನೆಗೆ ಬಂದಾಗ ಆ ತಾಯಿಗೆ ಅಚ್ಚರಿಯ ಜತೆಗೆ ಆಘಾತವೂ ಕಾದಿತ್ತು. 

‘2001ರ ಆಗಸ್ಟ್‌ 18ರಂದು ಹುಟ್ಟಿದ್ದ ಮಗಳ ಆಧಾರ್ ಕಾರ್ಡ್‌ನಲ್ಲಿ 18ನೇ ಫೆಬ್ರುವರಿ 1998 ಎಂದು ನಮೂದಾಗಿತ್ತು. ತಕ್ಷಣ ಹಳೇ ಆಧಾರ್‌ ಕಾರ್ಡ್‌ ಹುಡುಕಿ ಪರಿಶೀಲಿಸಿದೆ. ಜತೆಗೆ ಧಾರವಾಡ ಸರ್ಕಾರಿ ಶಾಲೆಯ ದಾಖಲಾತಿಯಲ್ಲೂ 2001 ಎಂದಿದೆ. ಹೀಗಾಗಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದೇನೆ’ ಎಂದು ಸಾವಕ್ಕ ಘಟನೆ ವಿವರಿಸಿದರು.

‘ಪತಿ ನನ್ನಿಂದ ಬೇರೆ ಆಗಿದ್ದಾರೆ. ಎರಡನೇ ಮಗಳು ಕೆಲವು ತಿಂಗಳ ಹಿಂದೆಯೇ ಬೇರೊಬ್ಬರನ್ನು ಮದುವೆ ಮಾಡಿಕೊಂಡಿದ್ದಾಳೆ. ಇದಕ್ಕೆ ಪತಿ ಮಲ್ಲಿಕಾರ್ಜುನ ಮೈಸೂರ ಅವರ ಕುಮ್ಮಕ್ಕು ಇದೆ. ಎರಡನೇ ಮಗಳಿಗೂ ಮದುವೆ ಮಾಡಿಕೊಡಲಾಗಿದೆ ಎಂದು ಮತ್ತೊಂದು ಪ್ರಕರಣದಲ್ಲಿ ಪತಿಯೇ ನ್ಯಾಯಾಲಯದಲ್ಲೇ ಹೇಳಿಕೆ ನೀಡಿದ್ದಾರೆ. ಆಗಿರುವ ಮದುವೆಯನ್ನು ಸಿಂಧು ಮಾಡಿಕೊಳ್ಳುವ ಸಲುವಾಗಿ ಮಗಳು ನಕಲಿ ದಾಖಲೆ ಸೃಷ್ಟಿಸಿದ್ದಾಳೆ’ ಎಂದು ಆರೋಪಿಸಿದ್ದಾರೆ.

‘ಆಧಾರ್‌ ಗುರುತಿನ ಚೀಟಿಯನ್ನು ಮಹತ್ವದ ದಾಖಲೆ ಎಂದು ನಾವು ಪರಿಗಣಿಸುತ್ತೇವೆ. ಬಹಳಷ್ಟು ಯೋಜನೆಗಳಿಗೆ ಈ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ. ಆದರೆ ಅಂಥ ಆಧಾರ್ ದಾಖಲೆಯಲ್ಲಿ ಜನ್ಮ ದಿನಾಂಕ ಬದಲು ಮಾಡಲು ಸಾಧ್ಯವಾಗುವುದಾದರೆ, ಯಾವ ದಾಖಲೆಯನ್ನು ನಂಬಬೇಕು ಎಂಬ ಪ್ರಶ್ನೆ ಎದುರಾಗಿದೆ. ಈ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಅವರನ್ನು ಕೋರಿದ್ದೇನೆ. ತಾಯಿಯಾಗಿ ಮಗಳ ಇಂಥ ಕೆಲಸವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬೇಸರದಿಂದ ನುಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ‘ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)