ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕೊಲೆ ಪ್ರಕರಣ; ಇಬ್ಬರಿಗೆ ಜೀವಾವಧಿ ಶಿಕ್ಷೆ

ಹತ್ಯೆ ಮಾಡಿ, ದಾಂಡೇಲಿಯಲ್ಲಿ ಶವ ಹೂತು ಹಾಕಿದ್ದ ಅಪರಾಧಿಗಳು
Last Updated 13 ಆಗಸ್ಟ್ 2021, 3:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಶವವನ್ನು ದಾಂಡೇಲಿ ಬಳಿ ಹೂತು ಹಾಕಿದ್ದ ಇಬ್ಬರಿಗೆ, ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ಹಾಗೂ ₹1.60 ಲಕ್ಷ ದಂಡ ವಿಧಿಸಿದೆ.ರಾಘವೇಂದ್ರ ಮಾಳಗಿ ಮತ್ತು ಮಂಜುನಾಥ ಜೈನಗೌಡ್ರ ಶಿಕ್ಷೆಗೊಳಗಾದವರು.

ಇಬ್ಬರೂ 2014ರಲ್ಲಿ ರವಿಚಂದ್ರ ಕುಂದಗೋಳ ಅವರನ್ನು ಕೊಲೆ ಮಾಡಿದ್ದರು.ಮಾಳಗಿ ಸಹೋದರಿ ಮತ್ತು ಜೈನಗೌಡ್ರ ಪತ್ನಿಯೊಂದಿಗೆ ರವಿಚಂದ್ರ ಅನೈತಿಕ ಸಂಬಂಧ ಬೆಳೆಸಲು ಯತ್ನಿಸಿದ್ದಾನೆಂದು ಅಪರಾಧಿಗಳು ಶಂಕಿಸಿದ್ದರು. ಹಾಲಿನ ಪಾಕೆಟ್ ಸಾಗಿಸುವ ಟಾಟಾ ಏಸ್ ಚಾಲಕರಾಗಿದ್ದ ರವಿಚಂದ್ರ ಅವರು,2014ರ ಮೇ 20ರಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ಬೆಂಡಿಗೇರಿಯ ಕರಿಗಣ್ಣವರ ಹಕ್ಕಲದಲ್ಲಿರುವ ಹಾಲಿನ ಡೈರಿಯಲ್ಲಿ ಟ್ರೇಗಳನ್ನು ಜೋಡಿಸಿ ಇಡುತ್ತಿದ್ದರು.

ಆಗ ಸ್ಥಳಕ್ಕೆ ಬಂದ ಆರೋಪಿಗಳು ರವಿಚಂದ್ರ ಅವರ ಕಣ್ಣಿಗೆ ಖಾರಪುಡಿ ಎರಚಿ, ಬಡಿಗೆಯಿಂದ ತಲೆಗೆ ಹೊಡೆದಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಅವರ ಕೈ–ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಅದೇ ವಾಹನದಲ್ಲಿ ಅಪಹರಿಸಿಕೊಂಡು, ದಾಂಡೇಲಿ ಸಮೀಪ ರವಿಚಂದ್ರ ಅವರ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು. ಬಳಿಕ, ಅರಣ್ಯದಲ್ಲಿ ಹೆಣವನ್ನು ಹೂತು ಹಾಕಿದ್ದರು. ಕೃತ್ಯಕ್ಕೆ ಬಳಸಿದ್ದ ಬಡಿಗೆ, ಮೃತನ ಮೊಬೈಲ್ ಹಾಗೂ ಸಾಗಿಸಲು ಬಳಸಿದ್ದ ಬೆಡ್‌ಶಿಟ್‌ ಅನ್ನು ನೀರಿನಲ್ಲಿ ಎಸೆದಿದ್ದರು. ವಾಹನವನ್ನು ಧಾರವಾಡದ ತಪೋವನದಲ್ಲಿರುವ ಕೆಐಡಿಬಿ ಲೇಔಟ್‌ನ ನೀರಿನ ಟ್ಯಾಂಕ್ ಬಳಿ ಬಿಟ್ಟು ಹೋಗಿದ್ದರು.

ಪುತ್ರ ಕಾಣೆಯಾಗಿರುವ ಕುರಿತು ರವಿಚಂದ್ರ ಅವರ ತಾಯಿ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಇನ್‌ಸ್ಪೆಕ್ಟರ್ ಟಿ.ಜಿ. ದೊಡ್ಡಮನಿ ಅವರು, ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.

ಸುಳಿವು ನೀಡಿದ ರಕ್ತದ ಕಲೆ: ರವಿಚಂದ್ರ ಅವರ ತಲೆಗೆ ಆರೋಪಿಗಳು ಬಡಿಗೆಯಿಂದ ಹೊಡೆದಾಗ, ಸ್ಥಳದಲ್ಲಿದ್ದ ಫೈಬರ್ ಗಾಜಿಗೆ ರಕ್ತದ ಕಲೆ ಅಂಟಿತ್ತು. ಘಟನಾ ಸ್ಥಳದಲ್ಲಿ ಸಿಕ್ಕ ಗಾಜಿನ ತುಂಡನ್ನು ಪರೀಕ್ಷೆಗೆ ಕಳಿಸಿದ ಬೆಂಡಿಗೇರಿ ಪೊಲೀಸರು, ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ದರುಎಂದು ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ಹೇಳಿದರು.

ಇದಾದ ಒಂದೂವರೆ ತಿಂಗಳ ಬಳಿಕ, ರವಿಚಂದ್ರ ಅವರು ಚಲಾಯಿಸುತ್ತಿದ್ದ ಟಾಟಾ ಏಸ್ ಧಾರವಾಡದ ತಪೋವನದ ಬಳಿ ಪತ್ತೆಯಾಗಿತ್ತು. ಕೃತ್ಯ ನಡೆದಾಗಿನಿಂದ ವಾಹನ ಕಾಣೆಯಾಗಿರುವುದನ್ನು ಗಮನಿಸಿದ ಪೊಲೀಸರು, ರವಿಚಂದ್ರ ಅವರ ಮೊಬೈಲ್ ಫೋನ್ ಕರೆಗಳ ವಿವರವನ್ನು ಪರಿಶೀಲಿಸಿದಾಗ, ರಾಘವೇಂದ್ರ ಮಾಳಗಿ ಮತ್ತು ಮಂಜುನಾಥ ಜೈನಗೌಡ್ರ ಅವರ ಬಗ್ಗೆ ಸಂಶಯ ಬಂತು.

ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡರು. ಶವವನ್ನು ಹೂತು ಹಾಕಿದ್ದ ಸ್ಥಳವನ್ನು ತೋರಿಸಿದರು. ಸ್ಥಳದಲ್ಲಿ ಸಿಕ್ಕ ಮೃತನ ಕೂದಲು, ಮೂಳೆ, ಫೈಬರ್ ಗಾಜಿಗೆ ಅಂಟಿದ ರಕ್ತವನ್ನು ಹಾಗೂ ಮೃತನ ತಾಯಿಯ ರಕ್ತವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಯಿತು. ಡಿಎನ್‌ಎ ವರದಿಯಲ್ಲಿ ಮೃತನು ರವಿಚಂದ್ರ ಎಂಬುದು ಖಚಿತವಾಯಿತುಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT