ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಗುರಿ ತಲುಪದ ಮಾನವದಿನ ಸೃಜನೆ

ನರೇಗಾ; ಬೇಸಿಗೆಯಲ್ಲಿ ಸಾಧಿಸಬೇಕಿದ್ದ ಪ್ರಗತಿ ಕುಂಠಿತ; ಚುನಾವಣೆ ಪ್ರಕ್ರಿಯೆ ಅಡ್ಡಿ
Published 24 ಜೂನ್ 2023, 4:01 IST
Last Updated 24 ಜೂನ್ 2023, 4:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಮಾನ್ಯವಾಗಿ ಬೇಸಿಗೆಯಲ್ಲಿ ನರೇಗಾ ಕಾಮಗಾರಿಯಡಿ ಹೆಚ್ಚು ಕಾಮಗಾರಿಗಳು ನಡೆದು, ಅಧಿಕ ಪ್ರಮಾಣದಲ್ಲಿ ಮಾನವ ದಿನ ಸೃಜನೆಯಾಗುತ್ತದೆ. ಆದರೆ, ಧಾರವಾಡ ಜಿಲ್ಲೆಯ ಬಹುತೇಕ ಕಡೆ ಈ ಅವಧಿಯಲ್ಲಿ ನಿರೀಕ್ಷಿತ ಗುರಿಯನ್ನೂ ತಲುಪಲಾಗಿಲ್ಲ.

ಈ ವರ್ಷ ಧಾರವಾಡ ಜಿಲ್ಲೆಗೆ 26.75 ಲಕ್ಷ ಮಾನವ ದಿನ ಸೃಜನೆಯ ಗುರಿ ನೀಡಲಾಗಿದೆ. ಆರ್ಥಿಕ ವರ್ಷ ಆರಂಭವಾಗುವ ಏಪ್ರಿಲ್‌ನಿಂದ ಹಿಡಿದು ಜೂನ್‌ 15ರವರೆಗೆ ಶೇ 20.81ರಷ್ಟು ಮಾನವ ದಿನ ಸೃಜಿಸಲಾಗಿದೆ. ಜೂನ್‌ ತಿಂಗಳನಲ್ಲೇ 7.84 ಲಕ್ಷ ಮಾನವ ದಿನ ಸೃಜನೆ ಗುರಿ ನೀಡಲಾಗಿದ್ದು, 5.41 ಲಕ್ಷ ಸೃಜಿಸಲಾಗಿದೆ. 2.43 ಲಕ್ಷ ಬಾಕಿ ಉಳಿದಿದೆ.

26 ಗ್ರಾಮ ಪಂಚಾಯ್ತಿಗಳನ್ನು ಹೊಂದಿರುವ ಹುಬ್ಬಳ್ಳಿ ತಾಲ್ಲೂಕಿಗೆ ನೀಡಿದ್ದ 87,500 ಮಾನವದಿನ ಸೃಜನೆಯ ಗುರಿಯಲ್ಲಿ ಜೂನ್ 15ರವರೆಗೆ 87,497 ಸಾಧಿಸಲಾಗಿದೆ. ಕಲಘಟಗಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಾನವ ದಿನ ಸೃಜಿಸಲಾಗಿದೆ. 2.18 ಲಕ್ಷ ಗುರಿಯಲ್ಲಿ 1.16 ಲಕ್ಷ ಮಾತ್ರ ಸಾಧಿಸಲಾಗಿದ್ದು, ಒಂದು ಲಕ್ಷದಷ್ಟು ಗುರಿ ಸಾಧನೆ ಬಾಕಿ ಇದೆ.

ಚುನಾವಣೆ ಕಾರಣ ಹಿನ್ನಡೆ: ನರೇಗಾದಡಿ ಮಾನವ ದಿನ ಸೃಜನೆಯಲ್ಲಿ ಜಿಲ್ಲೆಯು ಕಳೆದ ವರ್ಷ ಶೇ 84ರಷ್ಟು ಪ್ರಗತಿ ಸಾಧಿಸಿತ್ತು. ಅದರ ಹಿಂದಿನ ವರ್ಷ ಶೇ 97ರಷ್ಟಿತ್ತು. ಈ ಬಾರಿ ನರೇಗಾ ಕಾಮಗಾರಿ ಆರಂಭದಲ್ಲೇ ಚುನಾವಣೆ ನಡೆದಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲಾಗಿಲ್ಲ. ಆದರೂ, ಧಾರವಾಡ ಜಿಲ್ಲೆ ತೀರಾ ಹಿಂದುಳಿದಿಲ್ಲ, ರಾಜ್ಯದ ವಿವಿಧ ಜಿಲ್ಲೆಗಳ ಪಟ್ಟಿ ಗಮನಿಸಿದರೆ 14ನೇ ಸ್ಥಾನದಲ್ಲಿದೆ’ ಎಂದು ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ರೇಖಾ ಡೊಳ್ಳಿನ ತಿಳಿಸಿದರು.

‘ಮೇ 15ರ ನಂತರ ನರೇಗಾ ಕಾಮಗಾರಿಯಲ್ಲಿ ಪ್ರಗತಿ ಕಂಡಿದೆ. ನರೇಗಾ ಕಾಮಗಾರಿಗಳಲ್ಲಿ ಹೆಚ್ಚು ಮಂದಿ ಪಾಲ್ಗೊಳ್ಳಬೇಕೆಂದು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಕೆಲಸ ಬೇಕಾದಾಗ ಅರ್ಜಿ: ‘ಬೇಸಿಗೆಯಲ್ಲೇ ಹೆಚ್ಚು ಜನರ ಕೂಲಿ ಕೆಲಸಕ್ಕೆ ಬರುತ್ತಾರೆ. ಮಳೆಗಾಲದಲ್ಲಿ ಕೃಷಿಯತ್ತ ಮುಖ ಮಾಡುತ್ತಾರೆ. ಮತ್ತೆ ಡಿಸೆಂಬರ್‌ನಲ್ಲಿ ಕೂಲಿ ಅರಸಿ ಬರುವುದರಿಂದ ಆಯಾ ಕಾಲಕ್ಕೆ ತಕ್ಕಂಕೆ ಮಾನವ ದಿನ ಸೃಜನೆಯ ಗುರಿ ನಿರ್ಧರಿಸಲಾಗುತ್ತದೆ. ಈ ಬೇಸಿಗೆಯಲ್ಲಿ ಹೆಚ್ಚು ಸಾಧನೆಯಾಗಿಲ್ಲ. ಕೂಲಿ ಕೆಲಸ ಬೇಕೆಂದು ಗ್ರಾಮ ಪಂಚಾಯ್ತಿಗೆ ಅರ್ಜಿ ನಮೂನೆ ಸಲ್ಲಿಸಿದಾಗ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ’ ಎಂದು ನರೇಗಾ ಅಧಿಕಾರಿಯೊಬ್ಬರು ತಿಳಿಸಿದರು.

ಅಂಕಿ–ಅಂಶ 26.75 ಲಕ್ಷ ವಾರ್ಷಿಕ ಮಾನವ ದಿನ ಸೃಜನೆ ಗುರಿ 5.41 ಲಕ್ಷ ಜೂನ್‌ ತಿಂಗಳ ಸಾಧನೆ 20.81 ಶೇಕಡವಾರು ಪ್ರಗತಿ

ನರೇಗಾ ಮಾನವದಿನ ಸೃಜನೆ ವಿವರ (ಜೂನ್‌ 15ರವರೆಗೆ) ತಾಲ್ಲೂಕು;ಗುರಿ;ಸಾಧನೆ ಕುಂದಗೋಳ;128250;78034 ಕಲಘಟಗಿ;218136;116177 ನವಲಗುಂದ;62401;57433 ಧಾರವಾಡ;219943;132380 ಅಳ್ನಾವರ;34286;23501 ಹುಬ್ಬಳ್ಳಿ;87500;87497 ಅಣ್ಣಿಗೇರಿ;33920;46020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT