ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿ ಸ್ವಾಗತಿಸಿದ ಜಿಲ್ಲಾಧಿಕಾರಿ

Last Updated 23 ಆಗಸ್ಟ್ 2021, 8:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹದಿನೆಂಟು ತಿಂಗಳ ನಂತರ ಶಾಲೆ ಮತ್ತು ಕಾಲೇಜುಗಳು ಪುನರಾರಂಭವಾಗುತ್ತಿವೆ. ವಿದ್ಯಾರ್ಥಿಗಳು ಶುಚಿತ್ವ ಮತ್ತು ಆರೋಗ್ಯ ಸುರಕ್ಷತೆಯ ಕ್ರಮಗಳೊಂದಿಗೆ ಕಲಿಕೆಗೆ ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 9ರಿಂದ 12ನೇ ತರಗತಿಗಳ ಪುನರಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಹೂವು ನೀಡಿ ಸ್ವಾಗತಿಸಿ ಮಾತನಾಡಿದ ಅವರು, ‘ತರಗತಿಗಳ ಪುನರಾರಂಭ ಸಂತೋಷದಾಯಕ. ಭವಿಷ್ಯ ಉಜ್ವಲವಾಗಿಸಿಕೊಳ್ಳಲು ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಿರಬೇಕು. ಆಸಕ್ತಿದಾಯಕ ವಿಷಯಗಳನ್ನು ಗುರುತಿಸಿಕೊಂಡು ಆ ರಂಗದಲ್ಲಿಯೇ ಉತ್ತಮ ಸಾಧನೆ ಮಾಡಲು ಗಮನ ಕೇಂದ್ರೀಕರಿಸಬೇಕು’ ಎಂದರು.

ಸನ್ಮಾನ ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಪ್ರಯೋಗಾಲಯಗಳು, ಗ್ರಂಥಾಲಯ ಅಭಿವೃದ್ಧಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಠೇವಣಿ ಸೇರಿ ಒಟ್ಟು ₹5 ಲಕ್ಷ ದೇಣಿಗೆ ನೀಡಿದ ಗಾಮನಗಟ್ಟಿಯ ವೀರೇಶಶಾಸ್ತ್ರಿ ಶಾಸ್ತ್ರಿಮಠ ಮತ್ತು ಅನ್ನಪೂರ್ಣ ಶಾಸ್ತ್ರಿಮಠ ದಂಪತಿಗೆ ಜಿಲ್ಲಾಧಿಕಾರಿ ಸನ್ಮಾನಿಸಿದರು.

ಜಿಲ್ಲೆಯ 108 ಸರ್ಕಾರಿ, 146 ಅನುದಾನಿತ ಹಾಗೂ 162 ಅನುದಾನರಹಿತ ಸೇರಿ ಒಟ್ಟು 416 ಪ್ರೌಢಶಾಲೆಗಳ 9ನೇ ತರಗತಿಯ 30,805 ಹಾಗೂ 10ನೇ ತರಗತಿಯ 33,148 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. 27 ಸರ್ಕಾರಿ, 39 ಅನುದಾನಿತ ಹಾಗೂ 110 ಅನುದಾನರಹಿತ ಸೇರಿ 176 ಪದವಿಪೂರ್ವ ಕಾಲೇಜುಗಳು ಪುನರಾರಂಭವಾಗಿವೆ.

ವಿದ್ಯಾರ್ಥಿಗಳ ಹರ್ಷ:

‘ಆನ್‌ಲೈನ್ ತರಗತಿಗಳಿಂದ ಅಭ್ಯಾಸಕ್ಕೆ ಹೆಚ್ಚು ಸಹಾಯವಾಗುತ್ತಿರಲಿಲ್ಲ. ಇದೀಗ ಭೌತಿಕವಾಗಿ ತರಗತಿಗಳು ಪುನರಾರಂಭವಾಗಿರುವುದು ಸಂತಸ ತಂದಿದೆ. ನವನಗರದ ಶಾಲೆ ಉತ್ತಮ ಶಿಕ್ಷಕರೊಂದಿಗೆ ಒಳ್ಳೆಯ ಕಲಿಕಾ ವಾತಾವರಣ ಹೊಂದಿದೆ’ ಎಂದು ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಅಂಧ ವಿದ್ಯಾರ್ಥಿ ಹನುಮಂತಪ್ಪ ಸಂತಸ ವ್ಯಕ್ತಪಡಿಸಿದ.

ಹತ್ತನೇ ತರಗತಿ ವಿದ್ಯಾರ್ಥಿನಿ ಗೌರಮ್ಮ ಕಟ್ಟೇಕಾರ್, ‘ತರಗತಿಗಳ ಪುನರಾರಂಭ ಹರ್ಷ ತಂದಿದೆ. ಬಹುದಿನಗಳ ನಂತರ ಸಹಪಾಠಿಗಳು ಮತ್ತು ಶಿಕ್ಷಕರನ್ನು ಮುಖಾಮುಖಿಯಾಗುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ’ ಎಂದು ಸಂತಸ ಹಂಚಿಕೊಂಡಳು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿದಂಬರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಪ್ರಾಚಾರ್ಯ ಅಶೋಕ ಸವಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT