ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ | ದಶಕ ಕಳೆದರೂ ಕಾರ್ಯಾರಂಭಿಸದ ಪ್ರಾಥಮಿಕ ಆರೋಗ್ಯ ಕೇಂದ್ರ

ಬಸನಗೌಡ ಪಾಟೀಲ
Published 17 ಡಿಸೆಂಬರ್ 2023, 4:52 IST
Last Updated 17 ಡಿಸೆಂಬರ್ 2023, 4:52 IST
ಅಕ್ಷರ ಗಾತ್ರ

ಕುಂದಗೋಳ: ಮಂಜೂರಾಗಿ ಹತ್ತು ವರ್ಷ ಕಳೆದರೂ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಕಟ್ಟಡ ಮಂಜೂರಾಗದ ಕಾರಣ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ. ಸದ್ಯ ಇರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಒಬ್ಬ ನರ್ಸ್, ಆರೋಗ್ಯ ಕಾರ್ಯಕರ್ತೆಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ಬಸವರಾಜ ಬೊಮ್ಮಾಯಿ ಅವರ ಮೂಲ ಊರಿನ ಅವ್ಯವಸ್ಥೆ ಇದು. ಜಿಲ್ಲೆಯಲ್ಲಿಯೇ ‘ಹಿಂದುಳಿದ ತಾಲ್ಲೂಕು’ ಹಣೆಪಟ್ಟಿ ಹೊಂದಿರುವುದು ಕುಂದಗೋಳ. ತಾಲ್ಲೂಕಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ (ಅಂದಾಜು 15 ಸಾವಿರ) ಊರುಗಳಲ್ಲಿ ಇದೂ ಒಂದು.

ಗ್ರಾಮಕ್ಕೆ ಮಂಜೂರಾದ ಆರೋಗ್ಯ ಕೇಂದ್ರ ಕಾರಣಾಂತರಗಳಿಂದ 2012ರಲ್ಲಿ ರದ್ದಾಗಿತ್ತು. ಈ ಆದೇಶವನ್ನು 2014ರ ಫೆಬ್ರುವರಿಯಲ್ಲಿ ಹಿಂಪಡೆದ ಸರ್ಕಾರವು ಆರೋಗ್ಯ ಕೇಂದ್ರವನ್ನು ಪುನಃ ಮಂಜೂರು ಮಾಡಿತ್ತು. ಬಸವರಾಜ ಬೊಮ್ಮಾಯಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಎರಡು ಎಕರೆ ಭೂಮಿಯನ್ನೂ ದಾನ ನೀಡಿದ್ದಾರೆ. ಆದರೆ ಈವರೆಗೂ ಶಾಶ್ವತ ಕಟ್ಟಡ ನಿರ್ಮಾಣ ಕಾರ್ಯ ಮಾತ್ರ ಮರೀಚಿಕೆಯೇ ಆಗಿದೆ.

‘ಸಮಸ್ಯೆಯ ಬಗ್ಗೆ ಈ ಹಿಂದೆ ಶಾಸಕರಾದ ಸಿ.ಎಸ್. ಶಿವಳ್ಳಿ, ಎಸ್.ಐ. ಚಿಕ್ಕನಗೌಡ್ರ, ಕುಸುಮಾವತಿ ಶಿವಳ್ಳಿ ಅವರ ಗಮನಕ್ಕೆ ತಂದಿದ್ದೆವು. ಹಾಲಿ ಶಾಸಕ ಎಂ.ಆರ್. ಪಾಟೀಲ ಅವರ ಗಮನಕ್ಕೂ ತಂದಿದ್ದೇವೆ. ಚುನಾವಣೆ ಇದ್ದಾಗ ಮಾತ್ರ ಕಮಡೊಳ್ಳಿ ಜನ ಬೇಕು, ನಂತರ ನಾವ್ಯಾರಿಗೂ ಬೇಡ’ ಎಂದು ಊರಿನ ಮುಖಂಡ ಜಗದೀಶ ಸಂಶಿ ಅಲವತ್ತುಕೊಂಡರು.

‘ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಯವರ ಗಮನಕ್ಕೂ ತಂದಿದ್ದೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎನ್ನುತ್ತಾರೆ ವೀರನಗೌಡಗೌಡ ಪಾಟೀಲ.

‘ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಆಮ್ಲಜನಕ ವ್ಯವಸ್ಥೆಯೂ ಇಲ್ಲ. ಹಾವು ಕಚ್ಚಿದರೆ, ಅಪಘಾತವಾದಾಗ, ಹೆರಿಗೆ ಸಮಯದಲ್ಲಿ ತಾಲ್ಲೂಕು ಕೇಂದ್ರವಾದ ಕುಂದಗೋಳ ಆಸ್ಪತ್ರೆಗೆ ಹೋಗದೆ ವಿಧಿಯಿಲ್ಲ’ ಎಂದು ತಿಳಿಸಿದರು ಮುಖಂಡ ರುದ್ರಪ್ಪ ಖ್ಯಾತಗೌಡ್ರ.

ಗ್ರಾಮದಲ್ಲಿ ಖಾಸಗಿ ವೈದ್ಯರಿದ್ದಾರೆ, ಆದರೆ ಸರ್ಕಾರಿ ಆಸ್ಪತ್ರೆ ಕನಸಾಗಿಯೇ ಉಳಿದಿದೆ. ಸ್ಥಳೀಯ ರಾಜಕೀಯ ಕೆಸರೆರಚಾಟಕ್ಕೆ ಬಡವರು ಬೆಲೆ ತೆರಏಕಾಗಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಸಮಸ್ಯೆ ಗಮನಕ್ಕೆ ಬಂದಿದೆ. ಅದರ ಬಗ್ಗೆ ಚಿಂತನೆ ಮಾಡಿದ್ದೇವೆ. ಆದಷ್ಟು ಬೇಗ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಆರಂಭಿಸಲಾಗುವುದು
ಎಂ.ಆರ್. ಪಾಟೀಲ, ಕುಂದಗೋಳ ಶಾಸಕ
ಆಸ್ಪತ್ರೆ ಮಂಜೂರಾಗಿದ್ದರೂ ಕಟ್ಟಡ ಇಲ್ಲದ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅಲ್ಲಿಂದ ಉತ್ತರ ಬಂದ ಕೂಡಲೇ ನಿರ್ಮಾಣ ಕಾರ್ಯ ಆರಂಭವಾಗುತ್ತದೆ
ಶಶಿ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT