ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ಸ್‌, ಜವಳಿ ಉದ್ಯಮಕ್ಕೆ ‘ಹಿಂಜರಿತ’ದ ಬರೆಖರೀದಿಗೆ ಒಲ್ಲದ ಗ್ರಾಹಕ

ಜಾಗತಿಕ ಆರ್ಥಿಕ ಕುಸಿತ ಎಫೆಕ್ಟ್‌: ಖರೀದಿಗೆ ಒಲ್ಲದ ಗ್ರಾಹಕ
Last Updated 23 ಸೆಪ್ಟೆಂಬರ್ 2019, 8:45 IST
ಅಕ್ಷರ ಗಾತ್ರ

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಎಲೆಕ್ಟ್ರಾನಿಕ್ಸ್‌ ಮಳಿಗೆ ಹಾಗೂ ಜವಳಿ ಉದ್ಯಮವನ್ನೂ ಆವರಿಸಿದೆ. ಗ್ರಾಹಕರಲ್ಲಿ ಖರೀದಿಯ ಆಸಕ್ತಿ ಕ್ಷೀಣಿಸುವಂತೆ ಮಾಡಿದೆ. ಮಾರಾಟ ಉತ್ತೇಜಿಸಲು ಡೀಲರ್‌ಗಳು, ಉತ್ಪಾದನಾ ಸಂಸ್ಥೆಗಳು ಭಾರಿ ರಿಯಾಯಿತಿ, ಆಕರ್ಷಕ ಕೊಡುಗೆ ಘೋಷಿಸಿದರೂ ಉತ್ಪನ್ನ ಖರೀದಿಸಲು ಜನರು ಆಸಕ್ತಿ ತೋರುತ್ತಿಲ್ಲ. ಯಾವುದೇ ವಸ್ತು ಖರೀದಿಸುವ ಮುನ್ನ ಮೂರ್‍ನಾಲ್ಕುಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಉತ್ಪಾದನಾ ವಲಯದ ಮೇಲೆ ಆರ್ಥಿಕ ಹಿಂಜರಿತದ ಪರಿಣಾಮ ಉದ್ಯೋಗ ನಷ್ಟ, ಆದಾಯ ಕುಸಿದಿದೆ. ಹಾಗಾಗಿ ಗ್ರಾಹಕರಲ್ಲಿ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತಿದೆ. ದುಬಾರಿ ಬೆಲೆಯ ಉತ್ಪನ್ನ ಖರೀದಿಸಬೇಕೆಂಬ ಆಸೆಯಿದ್ದರೂ ಜಿಎಸ್‌ಟಿ ಮತ್ತಿತರ ಕಾರಣಗಳಿಂದ ಕಡಿಮೆ ಬೆಲೆಯ ಉತ್ಪನ್ನ ಖರೀದಿಗಷ್ಟೇ ಗ್ರಾಹಕರು ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಬಹುತೇಕರು ₹2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಹೆದರುವಂತಾಗಿದೆ. ಸಾಲ, ಮಾಸಿಕ ಕಂತಿನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಹರ್ಷ ಎಲೆಕ್ಟ್ರಾನಿಕ್ಸ್‌ನ ವಿಜಯಕರ್‌.

ಆನ್‌ಲೈನ್‌ ವ್ಯಾಪಾರದಿಂದ ನಷ್ಟ

‘ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಇನ್ನಿತರ ಗೆಜೆಟ್‌ಗಳ ಖರೀದಿ ಆನ್‌ಲೈನ್‌ನಲ್ಲಿ ಹೆಚ್ಚಾಗಿದೆ. ಹಾಗಾಗಿ ಮಾಲ್‌, ಶೋ ರೂಂಗಳಲ್ಲಿ ಇವುಗಳ ವ್ಯಾಪಾರ ಕ್ಷೀಣಿಸಿದೆ. ಇನ್ನು ವಾಷಿಂಗ್‌ ಮಷಿನ್‌, ಟಿ.ವಿ, ಫ್ರಿಜ್‌ನಂಥ ಬೃಹತ್‌ ಗೃಹೋಪಯೋಗಿ ಉಪಕರಣಗಳನ್ನು ಗ್ರಾಹಕರು ಇಂದಿಗೂ ಮಾಲ್‌ಗಳಿಗೇ ಬಂದು ಖರೀದಿಸುತ್ತಾರೆ. ಆನ್‌ಲೈನ್‌ನಲ್ಲಿ ₹35ರಿಂದ 40 ಸಾವಿರದೊಳಗಿನ ಉತ್ಪನ್ನಕ್ಕೆ ₹1ರಿಂದ 1,500 ಸಾವಿರ ವ್ಯತ್ಯಾಸ ಇರುತ್ತದೆ’ ಎಂದು ವಿಜಯಕರ್‌ ಅಭಿಪ್ರಾಯಪಟ್ಟರು.

ನಷ್ಟವೂ ಇಲ್ಲ; ಪ್ರಗತಿಯೂ ಇಲ್ಲ

‘ಈ ವರ್ಷ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮಾರಾಟ ಅಷ್ಟಕ್ಕಷ್ಟೇ. ಬಹುತೇಕ ಮಳಿಗೆಗಳು ನಷ್ಟವೂ ಇಲ್ಲ, ಲಾಭವೂ ಇಲ್ಲದಂತೆ ನಡೆಯುತ್ತಿವೆ. ಸಾಮಾನ್ಯವಾಗಿ ವಾಣಿಜ್ಯ ಮಳಿಗೆಗಳು ಪ್ರತಿ ವರ್ಷ ಶೇ 15–20 ಬೆಳವಣಿಗೆ ಗುರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತವೆ. ಆದರೆ, ಈಗ ಕಳೆದ ವರ್ಷದಷ್ಟೇ ವ್ಯಾಪಾರ ಮಾಡಿದರೆ ಸಾಕು ಎಂಬ ಸ್ಥಿತಿಗೆ ಬಂದಿವೆ. ಹಬ್ಬ ಹರಿದಿನಗಳಲ್ಲಿ ಉತ್ತಮ ವ್ಯಾಪಾರವಾದರೂ ಲಾಭ ಇಲ್ಲ’ ಎಂದು ಡೀಲರ್‌ರೊಬ್ಬರು ಹೇಳಿಕೊಂಡರು.

‘ಇನ್ನು ಮಳಿಗೆಯಲ್ಲಿ ವ್ಯಾಪಾರ ಕುಸಿದರೂ ವೆಚ್ಚಗಳು ಮಾತ್ರ ನಿಲ್ಲುವುದಿಲ್ಲ. ಕಾರ್ಮಿಕರಿಗೆ ನೀಡಬೇಕಾದ ವೇತನ, ಕಟ್ಟಡದ ಬಾಡಿಗೆ, ವಿದ್ಯುತ್‌ ವೆಚ್ಚ ಭರಿಸಬೇಕು. ಕೆಲ ಪ್ರತಿಸ್ಪರ್ಧಿ ಮಳಿಗೆಗಳು ಮಾರ್ಜಿನ್‌ ಬೆಲೆಗಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೆ, ನಾವು ಕೂಡ ನಮ್ಮ ಗ್ರಾಹಕರ ಹಿತದೃಷ್ಟಿಯಿಂದ ಬೆಲೆ ಕಡಿಮೆ ಮಾಡಬೇಕಾಗುತ್ತದೆ. ಇದರಿಂದ ಲಾಭದ ಮೇಲೆ ಹೊಡೆತ ಬೀಳುತ್ತಿದೆ. ಸಾಮಾನ್ಯ ದಿನಗಳಲ್ಲೂ ಆಕರ್ಷಕ ಕೊಡುಗೆ ನೀಡಿದರೂ ಜನ ಖರೀದಿಗೆ ಬರುತ್ತಿಲ್ಲ’ ಎಂದು ಹರ್ಷ ಎಲೆಕ್ಟ್ರಾನಿಕ್ಸ್‌ನ ವಿಜಯಕರ್‌ ‘ಪ್ರಜಾವಾಣಿ ಮೆಟ್ರೊ’ ತಿಳಿಸಿದರು.

ಸ್ಮಾರ್ಟ್‌ಫೋನ್‌ ಬಳಕೆಯ ಟ್ರೆಂಡ್‌ ಹೇಗೆ?

ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ವಿವಿಧ ಕಂಪನಿಗಳು 3 ತಿಂಗಳಿಗೊಂದು ಹೊಸ ಮೊಬೈಲ್‌ ಪರಿಚಯಿಸುತ್ತಿದ್ದು, ಅಗ್ಗದ ಬೆಲೆಗೆ ನೀಡುತ್ತಿರುವುದರಿಂದ ಮಾರಾಟ ಪ್ರಮಾಣ ಹೆಚ್ಚಾಗಿದೆ. ದೇಶದಲ್ಲಿ ಶೇ20ರಷ್ಟು ಮಂದಿ 6 ತಿಂಗಳಿಗೊಮ್ಮೆ ಹೊಸ ಮೊಬೈಲ್‌ ಖರೀದಿಸುತ್ತಾರೆ. ಶೇ 50ರಷ್ಟು ಮಂದಿ 1 ವರ್ಷ, ಶೇ 30ರಷ್ಟು ಮಂದಿ 2 ವರ್ಷ ಮೊಬೈಲ್‌ ಬಳಸುತ್ತಾರೆ. ಹಾಗಾಗಿ ಮೊಬೈಲ್‌ಗೆ ಹೆಚ್ಚಿನ ಬೇಡಿಕೆಯೂ ಇದೆ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.

ಜವಳಿ ಉದ್ಯಮದ ಮೇಲೆ ಬರೆ

‘ಆರ್ಥಿಕ ಹಿಂಜರಿತ ಹಾಗೂ ಕೆಲ ಆಂತರಿಕ ಸಮಸ್ಯೆಗಳಿಂದ ಜವಳಿ ಉದ್ಯಮವೂ ನಷ್ಟದಲ್ಲಿದೆ. ಆನ್‌ಲೈನ್‌ ವ್ಯಾಪಾರ, ರೆಡಿಮೇಡ್‌ ಬಟ್ಟೆಗಳ ಬಳಕೆ ಹಾಗೂ ಜನರಲ್ಲಿ ಬದಲಾದ ಆದ್ಯತೆಯಿಂದಾಗಿ ಉದ್ಯಮವು ಸೊರಗುತ್ತಿದೆ. ಒಂದು ತಿಂಗಳಿಗೆ 5 ಲಕ್ಷ ಮೀಟರ್‌ ಬಟ್ಟೆ ಉತ್ಪಾದಿಸಿದರೆ ಅಷ್ಟು ಪ್ರಮಾಣದ ಬಟ್ಟೆ ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿಲ್ಲ. 3–4 ವರ್ಷದಿಂದ ಜವಳಿ ಉದ್ಯಮ ಸಮಸ್ಯೆಗಳನ್ನೇ ಸಿಲುಕಿಕೊಂಡಿದೆ. ಈಗ ಸೀಸನಲ್‌ ವ್ಯಾಪಾರವೂ ಉಳಿದಿಲ್ಲ. ದೀಪಾವಳಿ, ರಂಜಾನ್‌, ಕ್ರಿಸ್‌ಮಸ್‌ ಹಬ್ಬದಂದು ಬಂಧುಗಳಿಗೆ ಬಟ್ಟೆ ಉಡುಗೊರೆ ನೀಡುವ ಸಂಪ್ರದಾಯ ಇತ್ತು. ಈಗ ವ್ಯಾಪಾರದ ಸಾಮರ್ಥ್ಯವೇ ಕಡಿಮೆಯಾಗಿದೆ’ ಎಂದು ಕರ್ನಾಟಕ ಕ್ಲಾಥ್ ಪ್ಯಾಲೇಸ್‌ ಮಾಲೀಕ ಮುಖೇಶ್‌ ಜೈನ್‌ ತಿಳಿಸಿದರು.

‘10–15 ವರ್ಷದಿಂದ ಅವಳಿ ನಗರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಜನರ ತಲಾದಾಯವೂ ಹೆಚ್ಚಾಗಿಲ್ಲ. ಹೀಗಿರುವಾಗ ಜನರಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗದು.ರಾಜಕೀಯ ನಾಯಕರಲ್ಲಿನ ಇಚ್ಛಾಶಕ್ತಿ ಕೊರತೆ ಇದಕ್ಕೆ ಪ್ರಮುಖ ಕಾರಣ’ ಎಂದು ದೂರುತ್ತಾರೆ ಅವರು.

ರೆಡಿಮೇಡ್‌ಗೇ ಆದ್ಯತೆ

‘ಎಲ್ಲರೂ ಐಷಾರಾಮಿ ಜೀವನದ ದಾಸರಾಗಿದ್ದಾರೆ. ಈ ಹಿಂದೆ ಬಟ್ಟೆಗೆ ಇದ್ದ ಮೊದಲ ಆದ್ಯತೆ ಈಗ ಮೊಬೈಲ್‌, ಇಂಟರ್ನೆಟ್‌ ಇನ್ನಿತರ ಅಗತ್ಯಗಳಿಗೆ ಸಿಗುತ್ತಿದೆ. ಹಾಗಾಗಿ ಜನರು ಎಲ್ಲ ಅಗತ್ಯಗಳನ್ನು ಪೂರೈಸಿಕೊಂಡ ಬಳಿಕವಷ್ಟೇ ಬಟ್ಟೆಯ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಉದ್ಯಮಿಗಳು ಕೂಡ ಪರ್ಯಾಯ ಆಯ್ಕೆಗಳತ್ತ ಯೋಚಿಸುವಂತಾಗಿದೆ’ ಎಂದು ಮುಖೇಶ್‌ ಹೇಳಿದರು.

‌‘ಆನ್‌ಲೈನ್‌ ಶಾಂಪಿಂಗ್‌ನಲ್ಲಿ ರಿಟರ್ನ್ಸ್‌ ಪಾಲಿಸಿ ಇರುವುದರಿಂದ ಬಹುತೇಕರು ರೆಡಿಮೇಡ್‌ ಬಟ್ಟೆ ಖರೀದಿಸುತ್ತಾರೆ. ಬಿಗ್‌ ಬಜಾರ್‌, ರಿಲಯನ್ಸ್‌ನಂಥ ದೈತ್ಯ ಸಂಸ್ಥೆಗಳು ಕಡಿಮೆ ದರದಲ್ಲಿ ಬಟ್ಟೆ ಮಾರಾಟ ಮಾಡುತ್ತಾರೆ. ಅವರಿಗೆ ಒಂದೆರಡು ಅಂಗಡಿಗಳಲ್ಲಿ ನಷ್ಟ ಆದರೂ ಯೋಚಿಸುವುದಿಲ್ಲ. ಏಕೆಂದರೆ ದೇಶವ್ಯಾಪಿ ಮಳಿಗೆಗಳಿರುತ್ತವೆ. ಆದರೆ, ನಮ್ಮಂಥವರು ಒಂದು ಅಂಗಡಿಯನ್ನೇ ನೆಚ್ಚಿಕೊಂಡು ವ್ಯಾಪಾರ ಮಾಡಬೇಕು. ಇದರಿಂದಲೂ ನಾವು ನಷ್ಟದ ಹಾದಿ ತುಳಿದಿದ್ದೇವೆ’ ಎಂದು ಹೇಳಿದರು.

ಟೈಲರಿಂಗ್‌ಗೂ ಹೊಡೆತ

‘ರೆಡಿಮೇಡ್‌ ಹಾಗೂ ಗಾರ್ಮೆಂಟ್ಸ್‌ ಉದ್ಯಮದಿಂದ ಟೈಲರಿಂಗ್‌ ನೆಚ್ಚಿಕೊಂಡಿರುವ ಕುಟುಂಬಗಳು ಬೀದಿ ಪಾಲಾಗಿವೆ. ತರಹೇವಾರಿ ವಿನ್ಯಾಸದ ರೆಡಿಮೇಡ್‌ ಬಟ್ಟೆಗಳು ಸಿಗುವುದರಿಂದ ಬಟ್ಟೆ ಹೊಲಿಸುವುದನ್ನು ಬಹುತೇಕರು ಮರೆತಿದ್ದಾರೆ. ಸಾಮಾನ್ಯವಾಗಿ ಶರ್ಟ್‌ ಹಾಗೂ ಪ್ಯಾಂಟ್‌ ಪೀಸ್‌ಗೆ ₹1,000 ಶುಲ್ಕ ಪಾವತಿಸಬೇಕಾಗುತ್ತದೆ. ದುಬಾರಿ ಶುಲ್ಕ ಪಾವತಿಸುವ ಬದಲು ಅದೇ ₹1,000 ರೆಡಿಮೇಡ್‌ ಬಟ್ಟೆ ತಂದರಾಯಿತು ಎಂಬ ಕಾರಣಕ್ಕೆ ಯಾರೂ ಟೈಲರ್‌ ಬಳಿ ಹೋಗುವುದಿಲ್ಲ. ಇದರಿಂದ ಟೈಲರಿಂಗ್‌ನಲ್ಲಿ ತೊಡಗಿಸಿಕೊಂಡವರು ಸಂಕಷ್ಟಕ್ಕೆ ಬಿದ್ದಿದ್ದಾರೆ. ಮುಂದೊಂದು ದಿನ ಸಾಂಪ್ರದಾಯಿಕ ಟೈಲರಿಂಗ್‌ ಉದ್ಯಮವೇ ನಶಿಸುವ ಆತಂಕವಿದೆ’ ಎಂದು ಮುಖೇಶ್‌ ಅಭಿಪ್ರಾಯಪಟ್ಟರು.

‘ಎರಡು ತಿಂಗಳಿಂದ ವ್ಯಾಪಾರ ತುಂಬ ಕಡಿಮೆಯಾಗಿದೆ. ಗ್ರಾಹಕರು ಬರುವುದನ್ನೇ ಎದುರು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯ ಅಧಿಕಾರಿಗಳು ವ್ಯಾಪಾರ ಆಗದಿರುವ ಬಗ್ಗೆ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಬೇರೆ ಅಂಗಡಿಗಳಲ್ಲಿ ವ್ಯಾಪಾರ ನಡೆಯುತ್ತಿದ್ದು, ನಮ್ಮ ಅಂಗಡಿಯಲ್ಲಿ ಮಾತ್ರ ಆಗದಿದ್ದಾಗ ಏಕೆ ಎಂದು ಕೇಳಿದರೆ ಅದು ಸರಿ. ಆದರೆ ಪ್ರತಿಸ್ಪರ್ಧಿಗಳಿಗೂ ವ್ಯಾಪಾರ ಇಲ್ಲವಾಗಿದೆ. ದಿನೇ ದಿನೇ ಒತ್ತಡ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಬ್ರಾಂಡೆಡ್‌ ಚಪ್ಪಲಿ ಅಂಗಡಿ ಉದ್ಯೋಗಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT