ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀನೇಜ್‌ಗೆ ವಿದಾಯ: ಸಂಕಟ ಬಾರದಿರಲಿ... ಸಂತಸ ವ್ಯಾಪಿಸಲಿ

Last Updated 28 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಟೀನೇಜಿನ ಕೊನೆಯ ಹಂತದ ಸಂಭ್ರಮವ ಸವಿಯಬೇಕೆಂಬ 2Kಯ ಯೌವ್ವನದ ಹೆಬ್ಬಯಕೆ ಎದೆಯಲ್ಲಿ ತವಕಿಸುತ್ತಿತ್ತು. ಆ ಕಾತರದಿಂದಲೇ ಮೊದಲದಿನದ ಆ ಸೂರ್ಯನ ಉದಯವನ್ನು ನೋಡಿದ್ದೆ. ಏನೋ ಒಂದು ಹೊಸತನ, ಹೊಸಹುರುಪು, ಆರು ದಶಕಗಳ ನಂತರ ಈ ನೆಲದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂಬ ಸಂತಸ ಎಲ್ಲರಲ್ಲೂ ಮನೆಮಾಡಿತ್ತು. ಅದು ನನ್ನ ಅವಧಿಯಲ್ಲಿ ಎಂದು ನನ್ನ ಎದೆಯುಬ್ಬಿತ್ತು. ಆದರೆ ಆ ಸಂಭ್ರಮದ ಬೆನ್ನ ಹಿಂದೆಯೇ ಸಾಕಷ್ಟು ಜನರ ಸಾವು, ನೋವಿಗೂ ನಾನು ಸಾಕ್ಷಿಯಾಗುತ್ತೇನೆ ಎಂದು ಕನಸಿನಲ್ಲೂ ನೆನೆಸಿರಲಿಲ್ಲ.

ಈಗ ನಿರ್ಗಮಿಸುವ ಅವಧಿಯಲ್ಲಿ ಹಿಂದಿನದನ್ನು ಮೆಲುಕು ಹಾಕಿದರೆ, ಸಿಹಿಗಿಂತ ನೋವು ಉಂಡಿದ್ದೇ ಹೆಚ್ಚು…

ಹಲವು ವರ್ಷಗಳಿಂದ ಬರಗಾಲ ಜಿಲ್ಲೆಯಲ್ಲಿ ಅತೀವವಾಗಿ ಬಾಧಿಸಿತ್ತು. ಈ ಅವಧಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದರೂ, ಜನರ ಉತ್ಸಾಹ ಬತ್ತಿರಲಿಲ್ಲ. ಜನರೇ ತಾಮುಂದು, ನಾ ಮುಂದು ಎಂದು ಕನ್ನಡದ ಕೆಲಸಕ್ಕೆ ಮುಂದಾಗುತ್ತಿದ್ದರು. ಗೋಡೆ ಬರಹಗಳಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದು ಬರೆಯುವಾಗ ಮರೆಯದೇ ಧಾರವಾಡ ಮತ್ತು ನನ್ನ ಹೆಸರನ್ನು ಬರೆಯುತ್ತಿದ್ದುದು ಈ ಮಣ್ಣಿನ ಇತಿಹಾಸಗಳ ಪುಟಗಳಲ್ಲಿ ನನ್ನ ಹೆಸರು ಅಜರಾಮರವಾಗಿ ದಾಖಲಾಯಿತು ಎಂದು ಹೆಮ್ಮೆಯಿಂದ ಸಂಭ್ರಮಿಸುತ್ತಿದ್ದೆ.

ನನ್ನನ್ನು ಬರಮಾಡಿಕೊಂಡ ಜನತೆ, ಜ.4ರಿಂದ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಣಿಯಾದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜನೆಗೊಂಡ ಸಮ್ಮೇಳನಕ್ಕೆ ನಾಡಿನುದ್ದಗಲದಿಂದ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಧಾರವಾಡದ ಆತಿಥ್ಯವನ್ನು ಮನಸಾರೆ ಸವಿದರು. ಸಮ್ಮೇಳನಾಧ್ಯಕ್ಷ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಕುಟುಂಬ ಸಮೇತರಾಗಿ ಬಂದು, ತಾವು ಓಡಾಡಿದ ನೆಲದಲ್ಲೇ ಸಮ್ಮೇಳನಾಧ್ಯಕ್ಷರಾಗಿ ಸಾರೋಟಿನಲ್ಲಿ ಸಂಚರಿಸಿದ್ದು, ಈ ನನ್ನ ಅವಧಿಯಲ್ಲೇ.

ಪ್ರಗತಿಪರರ ಸಾಕಷ್ಟು ವಿರೋಧದ ನಡುವೆಯೂ 1,001 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತವನ್ನು ಆಯೋಜಿಸಿದ್ದು ಮತ್ತು ಆ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲೀ ಮತ್ತು ಸಮ್ಮೇಳನ ಅಧ್ಯಕ್ಷರಾಗಲೀ ಏನೂ ಹೇಳದೆ ಮೌನಬೆಂಬಲ ವ್ಯಕ್ತಪಡಿಸಿದ್ದರ ಕುರಿತು ಹಲವಾರು ಗೋಷ್ಠಿಗಳಲ್ಲಿ ಪ್ರಸ್ತಾಪವಾಯಿತು. ಕೆಲವರು ಪ್ರತಿಭಟಿಸಿ ಮಾತನಾಡಿದರು, ಇನ್ನೂ ಕೆಲವರು ಸಮ್ಮೇಳನಕ್ಕೆ ಬಾರದೆ ತಮ್ಮ ಪ್ರತಿಭಟನೆ ದಾಖಲಿಸಿದರು.

ಇವುಗಳ ನಡುವೆಯೇ ಶತಮಾನ ಕಂಡ ಕರ್ನಾಟಕ ಕಾಲೇಜು ಮೈದಾನದಿಂದ ಸಮ್ಮೇಳನ ಆಯೋಜನೆಗೊಂಡಿದ್ದ ಕೃಷಿ ವಿಶ್ವವಿದ್ಯಾಲಯವರೆಗಿನ ಐದು ಕಿಲೋ ಮೀಟರ್ ಉದ್ದದ ಮೆರವಣಿಗೆಯಲ್ಲಿ ನಾಲ್ಕು ಕಿಲೋ ಮೀಟರ್‌ನಷ್ಟು ಉದ್ದ ಇಡೀ ಧಾರವಾಡವೇ ಸಾಲುಗಟ್ಟಿ ನಿಂತು ಸಮ್ಮೇಳನ ಅಧ್ಯಕ್ಷರನ್ನು ಸ್ವಾಗತಿಸಿ ಅಭಿಮಾನ ಮೆರೆದರು. 25 ಸಾವಿರಕ್ಕೂ ಹೆಚ್ಚು ಮಕ್ಕಳು, 60ಕ್ಕೂ ಹೆಚ್ಚು ಕಲಾ ತಂಡಗಳು, ಸಾವಿರಾರು ಕನ್ನಡಾಸಕ್ತರ ಜಯಘೋಷಗಳ ನಡುವೆ ಕನ್ನಡಾಂಬೆಯ ತೇರನ್ನು ಎಳೆದು ಸಂಪ್ರೀತರಾದರು. ಆ ದೃಶ್ಯಗಳೆಲ್ಲವೂ ನೆನಪಿಸಿಕೊಂಡರೆ ಕಣ್ಣ ಮುಂದೆ ಹಾಯುತ್ತದೆ.

ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ‘ಒಂದರಿಂದ ಏಳನೇ ತರಗತಿಯವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು; ತುರ್ತಾಗಿ ಸರ್ಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು, ಅನಂತರದ 8ನೆಯ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇದಾಗದಿದ್ದಲ್ಲಿ ರಾಜ್ಯಭಾಷೆಗಳಿಗೆ ಭವಿಷ್ಯವಿಲ್ಲ‘ ಎಂದು ಡಾ. ಕಂಬಾರ ಎಚ್ಚರಿಸಿದರು.

ದಿನೇ ದಿನೇ ವ್ಯಾಪಿಸುತ್ತ, ಹೆಚ್ಚು ಹೆಚ್ಚು ಪ್ರಭಾವಶಾಲಿಯಾಗುತ್ತಿರುವ ಇಂಗ್ಲಿಷ್ ಭಾಷೆಯು ದೇಸಿ ಭಾಷೆಗಳ, ಸಂಸ್ಕೃತಿಯ ಕತ್ತು ಹಿಸುಕುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಖಾಸಗಿ ಶಾಲೆಗಳ ಅಬ್ಬರದಲ್ಲಿ ಕನ್ನಡ ಶಾಲೆಯ ಮಕ್ಕಳನ್ನು ನಿರ್ಗತಿಕರಂತೆ ಕಾಣುತ್ತಿರುವುಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು ಇಂದಿಗೂ ನೆನಪಿದೆ. ಈ ನೆನಪು ಕನ್ನಡಿಗರಾದ ಪ್ರತಿಯೊಬ್ಬರಿಗೂ ನೆನಪಿರಲೇಬೇಕು ಎಂಬ ಮಾತಿ ನನಗಂತೂ ನೆನಪಿರುತ್ತದೆ. ಆದರೆ ಜನರಿಗೆ ನನ್ನ ನೆನಪಿಲ್ಲದಿದ್ದರೂ ಪರವಾಗಿಲ್ಲ, ಕನ್ನಡದ ಉಳಿವಿಗೆ ಈ ಮಾತುಗಳನ್ನು ನೆನಪಿಡಬೇಕಾದ್ದು ಅತ್ಯಗತ್ಯ.

ಸಮ್ಮೇಳನದ ಆ ಮೂರು ದಿನಗಳಿಗಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ಇಡೀ ಜಿಲ್ಲೆಯ ಅಧಿಕಾರಿ ವರ್ಗ, ಪೊಲೀಸರು, ಕಲಾವಿದರು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಾಕಷ್ಟು ಪರಿಶ್ರಮಪಟ್ಟಿದ್ದರು. ಮೂರು ದಿನಗಳ ಕಾಲ ಇಡೀ ಹುಬ್ಬಳ್ಳಿ ಧಾರವಾಡ ಸಂಭ್ರಮದಲ್ಲಿ ತೇಲಾಡಿತು. ಪೇಢೆಯನ್ನು ಸರ್ವರೂ ಸವಿದು ಧಾರವಾಡದ ಸಿಹಿ ನೆನಪನ್ನು ಹೊತ್ತು ಸಾಗಿದರು. ನನ್ನ ಹೆಸರು ಶಾಶ್ವತವಾಗಿಸಲು ಅವರೆಲ್ಲರೂ ಪರಿಶ್ರಮಪಟ್ಟಿದ್ದಕ್ಕೆ ಅವರೆಲ್ಲರಿಗೂ ಮರೆಯದೇ ಧನ್ಯವಾದ ಹೇಳುವೆ.

ಇದಾದ ಬೆನ್ನಲ್ಲೇ ಸಾಹಿತ್ಯ ಸಂಭ್ರಮವೂ ಅಷ್ಟೇ ಸಂಭ್ರಮದಿಂದ ನಡೆಯಿತು. ಡಾ. ಶಿವ ವಿಶ್ವನಾಥನ್ ಅವರು ಸೈನಿಕರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ನಿವೃತ್ತ ಸೈನಿಕರು ಪ್ರತಿಭಟಿಸಿದರು. ಆರ್‌ಎಸ್‌ಎಸ್ ಕಾರ್ಯಕರ್ತರು ದಾಂದಲೆ ನಡೆಸಿದರು.

ಪ್ರಜಾವಾಣಿ ರಸಪ್ರಶ್ನೆ ಕಾರ್ಯಕ್ರಮವೂ ವಿದ್ಯಾರ್ಥಿಗಳ ಅದೇ ಉತ್ಸಾಹದಿಂದ ಜರುಗಿತು. ಇಸಳೂರಿನ ಶ್ರೀನಿಕೇತನ ಶಾಲೆ ತಂಡ ಧಾರವಾಡ ವಲಯ ಮಟ್ಟದಲ್ಲಿ ಗೆದ್ದು, ಮುಂದಿನ ಹಂತಕ್ಕೆ ಬಡ್ತಿ ಪಡೆಯಿತು.

ಇದಾದ ಬೆನ್ನಲ್ಲೇ 64ನೇ ರಾಷ್ಟ್ರಮಟ್ಟದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯೂ ನಗರದಲ್ಲಿ ಆಯೋಜನೆಗೊಂಡಿತ್ತು. ಇಲ್ಲಿನ ಡಿಎಆರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ ತಂಡ ಪ್ರಶಸ್ತಿ ಗೆದ್ದುಕೊಂಡಿತು.

ಅಪ್ಪಳಿಸಿತು ‘ಸುನಾಮಿ’

ಹೀಗೆ ಸಂಭ್ರಮಗಳ ಮೇಲೆ ಸಂಭ್ರಮದ ಅಲೆಯಲ್ಲೇ ತೇಲುತ್ತಿದ್ದ ನನಗೆ ಸುನಾಮಿ ಅಪ್ಪಳಿಸಿದ್ದು ಮಾರ್ಚ್ 19ರ ಮಧ್ಯಾಹ್ನ 3.45ರ ಸುಮಾರಿಗೆ. ಅದನ್ನು ನೆನೆದರೆ ಈಗಲೂ ಮೈ ಕಂಪಿಸುತ್ತದೆ. ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿದ ದುರಂತ ಧಾರವಾಡ ಮಾತ್ರವಲ್ಲ, ಇಡೀ ದೇಶವನ್ನೇ ಧಾರವಾಡದತ್ತ ನೋಡುವಂತೆ ಮಾಡಿತು. ದುರಂತದಲ್ಲಿ 19 ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. 50ಕ್ಕೂ ಹೆಚ್ಚು ಜನರು ಗಾಯಗೊಂಡರು. ತಮ್ಮವರನ್ನು ಕಳೆದುಕೊಂಡ ಅದೆಷ್ಟೋ ಕುಟುಂಬಗಳ ಕನಸಿನ ಗೋಪುರವೇ ಕುಸಿದಿತ್ತು. ಕೆಲವರ ಜೀವ, ಕೆಲವರು ಬದುಕು, ಹಲವರ ಕನಸು ಎಲ್ಲವೂ ಕುಸಿದ ಕಟ್ಟಡದ ಅಡಿ ಸಿಲುಕಿತು.

ಕಟ್ಟಡದ ಅವಶೇಷ ತೆರವುಗೊಳಿಸಿ, ಸಿಲುಕಿದವರನ್ನು ಬದುಕಿಸುವ ಕೆಲಸ ಭರದಿಂದ ಸಾಗಿತ್ತು. ಸಿಲುಕಿರುವ ತಮ್ಮವರು ಸುರಕ್ಷಿತವಾಗಿ ಬದುಕಿ ಬರುವವರೆಂಬ ನಿರೀಕ್ಷೆ ಕುಟುಂಬದವರಲ್ಲಿ ಮಾತ್ರವಲ್ಲ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರದ್ದೂ ಆಗಿತ್ತು. ಹೀಗಿದ್ದರೂ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಅವಿರತ ಶ್ರಮದಿಂದಾಗಿ ಹಲವು ಅಮೂಲ್ಯ ಜೀವಗಳನ್ನು ರಕ್ಷಿಸಲಾಯಿತು. ಆದರೆ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡವರು ಎಂದಿಗೂ ನನ್ನನ್ನು ಮರೆಯಲಾರರು. ಸಂಭ್ರಮಕ್ಕೆ ನೆನಪಾಗಬೇಕಾದ ನಾನು ಅವರ ನೋವಿನ ನೆನಪಿಗೆ ಕಾರಣನಾದೆನಲ್ಲಾ ಎಂಬ ನೋವು ನನ್ನದು.

ದುರಂತ ಕಟ್ಟಡದ ಮಾಲೀಕರನ್ನು ಬಂಧಿಸಲಾಗಿದೆ. ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಕಳೆದುಕೊಂಡವರ ಕುಟುಂಬಗಳಿಗೆ ಸರ್ಕಾರ ಪರಿಹಾರವನ್ನೂ ನೀಡಿದೆ. ಆದರೆ ಕಾಡುತ್ತಿರುವಕಳೆದುಕೊಂಡವರ ನೆನಪು, ತನ್ನವರನ್ನು ಕಳೆದುಕೊಂಡ ಆ ತಾಯಂದಿರ ಶೋಕ ಕರಳು ಹಿಂಡುತ್ತದೆ. ಅವಶೇಷಗಳ ಅಡಿಯಲ್ಲಿ ಸಿಲುಕಿ ಇಂದಿಗೂ ನೋವುಣ್ಣುತ್ತಿರುವವರು ಎಂದಿಗೂ ನನ್ನೀ ವರ್ಷದ ಆ ದಿನವನ್ನು ಮರೆಯಲಾರರು.

ನಂತರ ಬಂದ ಲೋಕಸಭಾ ಚುನಾವಣೆ ಜ್ವರ, ಅದೇ ಅವಧಿಯಲ್ಲಿ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ, ಅದಕ್ಕೆ ಜಾತಿ, ಪಕ್ಷ ಬೇಧ ಮರೆತು ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟಿಸಿದರು. ಚುನಾವಣೆ ಜ್ವರ ಕಾವೇರಿತ್ತು. 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂತಿಮವಾಗಿ ಬಿಜೆಪಿಯ ಪ್ರಹ್ಲಾದ ಜೋಶಿ ಅವರಿಗೆ ಅಭೂತಪೂರ್ವ ಜಯ ಸಿಕ್ಕಿತು. ಇಷ್ಟು ಮಾತ್ರವಲ್ಲ, ಹಲವು ದಶಕಗಳ ನಂತರ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರೊಬ್ಬರಿಗೆ ಕೇಂದ್ರದಲ್ಲಿ ಮಂತ್ರಿ ಹುದ್ದೆ ಸಿಕ್ಕಿತು. ಕಳೆದುಹೋದ ನೋವಿಗೆ ಇದು ಪರಿಹಾರವಲ್ಲವಾದರೂ, ಒಂದು ಮುಲಾಮು ಅಷ್ಟೇ.

ಚುನಾವಣೆ ಮುಗಿದ ನಂತರ ಮತ್ತದೇ ಬರದ ಬರೆ ಮೈಸುಡಲಿದೆಯೇ ಎಂದು ರೈತರು ಜನರು ಆತಂಕ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲೇ ಕುಂಭದ್ರೋಣ ಮಳೆಗೆ ಪ್ರವಾಹ ಸೃಷ್ಟಿಯಾಯಿತು. ಆಗಸ್ಟ್‌ನಲ್ಲಿ ಸುರಿದ ಮಳೆ ಮತ್ತದೇ ಸಾವು, ನೋವು. 50 ವರ್ಷಗಳಲ್ಲೇ ಆಗದಷ್ಟು ಮಳೆ ಈ ನನ್ನ ವರ್ಷದಲ್ಲೇ ಆಯಿತು ಎಂಬ ಮತ್ತದೇ ಕರಾಳ ಕೀರ್ತಿ. ಕೆರೆಕಟ್ಟೆಗಳು ಉಕ್ಕಿ ಹರಿದವು. ಹಲವರ ಮನೆಗಳೊಳಗೆ ನುಗ್ಗಿದ ನೀರು ಅವರ ಹಲವು ವರ್ಷಗಳ ಗಳಿಕೆಯನ್ನೇ ಕೊಚ್ಚಿಕೊಂಡುಹೋಯಿತು. ಮತ್ತೆ ಹೊಸ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಅವರದ್ದು. ಇಷ್ಟು ಸಾಲದು ಎಂಬಂತೆ ಅಕ್ಟೋಬರ್‌ನಲ್ಲೂ ಸುರಿದ ಮಳೆ ಮತ್ತೆ ಹಲವರ ಬದುಕು ಹೈರಾಣಾಗಿಸಿತು.

ಇಷ್ಟಾಗಿದ್ದರೆ ಸಾಕೇ, ಕೊಲೆ, ಕಳ್ಳತನ, ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆದವು. ಆ ಮೂಲಕ ಜನರ ಸಾವು ನೋವುಗಳಿಂದಲೇ ಈ ನನ್ನ ಅವಧಿ ಕೊನೆಯ ಹಂತ ತಲುಪಿದೆ. ಈ ನನ್ನ 365 ದಿನಗಳಲ್ಲಿ ಸುಖ ಹಾಗೂ ದುಃಖಗಳ ಸಮೃದ್ಧವಾಗಿದ್ದವು. ಅವೆಲ್ಲವೂ ಇತಿಹಾಸಗಳ ಪುಟಗಳಲ್ಲಿ ದಾಖಲಾಗಿವೆ. ಆದರೆ ಹಲವರ ಸಂತೋಷದ ಜತೆಗೆ ಕೆಲವರ ನೋವುಗಳ ಪುಟಗಳಲ್ಲೂ ನಾನಿರುವ ಸಂಕಟವನ್ನು ಎಂದಿಗೂ ನಾನು ಮರೆಯಲಾರೆ.

ಈ ಸಂಕಟಗಳ ನಡುವೆಯೇ ನಮ್ಮ ಹೆಮ್ಮೆಯ ಮಳೆಯ ಕವಿ ಡಾ. ಚೆನ್ನವೀರ ಕಣವಿ ಅವರಿಗೆ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ದೊರೆತವು. ಹಾಗೆಯೇ ಜಿಲ್ಲೆಯ ಇತರ ಸಾಧಕರಿಗೂ ಒಂದಷ್ಟು ಪ್ರಶಸ್ತಿಗಳು ಲಭಿಸಿದವು. ಓಜಲ್‌ ನಲವಡಿ ಎಂಬ ಪುಟಾಣಿ 51.25 ಸೆಕೆಂಡ್‌ನಲ್ಲಿ 400 ಮೀಟರ್ ಬ್ಲೈಂಡ್ ಫೋಲ್ಡ್‌ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದು ಈ ನನ್ನ ಅವಧಿಯಲ್ಲೇ. ಇಂಥ ಹಲವು ಸಾಧನೆಗಳು ಈ ಪುಣ್ಯ ಭೂಮಿಯಲ್ಲಿ ನಡೆದಿದೆ ಎಂಬುದಷ್ಟೇ ಸಮಾಧಾನ ನನ್ನದು.

ಸೂರ್ಯಗ್ರಹಣದೊಂದಿಗೆ ಈ ನನ್ನ ಟೀನೇಜ್ ಅವಧಿ ಪೂರ್ಣಗೊಳ್ಳುತ್ತಿದೆ. ಜ.1ರಂದು ಉದಯಿಸುವ ಸೂರ್ಯ ಹೊಸ ವರ್ಷವನ್ನು ಹೊಸ ಹರ್ಷದೊಂದಿಗೆ ತರಲಿ. ನನ್ನ ಅವಧಿಯಲ್ಲಿ ಆದ ಆ ಸಂಕಟ ಮತ್ತೆಂದೂ ಬಾರದಿರಲಿ. ದುಃಖವ ಸರಿಸಿ, ಸುಖವನ್ನು ಸ್ಥಾಪಿಸಲಿ ಎಂಬುದಷ್ಟೇ ನನ್ನ ಹಾರೈಕೆ.

ಇದೋ ನಿಮಗೆಲ್ಲ ನನ್ನ ಅಂತಿಮ ವಿದಾಯ

ನಿಮ್ಮಯ

2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT