ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ತನಿಖೆಗೆ ಎಸಿಪಿಗೆ ಸೂಚನೆ

ನವನಗರದಲ್ಲಿ ಮೂವರ ಬಂಧನ ಪ್ರಕರಣ; ಸಾಮೂಹಿಕ ವರ್ಗಾವಣೆಗೆ ಮನವಿ ಮಾಡಿರುವ ಪೊಲೀಸರು
Last Updated 28 ನವೆಂಬರ್ 2020, 4:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವನಗರದ ಕರ್ನಾಟಕ ವೃತ್ತದಲ್ಲಿ ನಡೆದ ಗಲಾಟೆ ವೇಳೆ ಮೂವರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದಕ್ಷಿಣ ವಿಭಾಗದ ಎಸಿಪಿ ಅವರಿಗೆ ಮೇಲಧಿಕಾರಿಗಳು ಸೂಚಿಸಿದ್ದಾರೆ. ಈ ಘಟನೆ ಕುರಿತು ಸ್ವತಂತ್ರ ತನಿಖೆ ನಡೆಸುವ ಜವಾಬ್ದಾರಿಯನ್ನು ವಿದ್ಯಾನಗರ ಠಾಣೆ ಇನ್‌ಸ್ಟೆಕ್ಟರ್‌ಗೂ ವಹಿಸಲಾಗಿದೆ.

ಆಗಿದ್ದೇನು: ಕರ್ನಾಟಕ ವೃತ್ತದ ಬಳಿ ಹಣಕಾಸಿನ ವಿಚಾರವಾಗಿ ರೌಡಿಶೀಟರ್‌ ಪ್ರವೀಣ್‌ ಪೂಜಾರಿ ಸೇರಿದಂತೆ ಮೂವರ ನಡುವೆ ಮಾತಿನ ಚಕಮಕಿ ಹಾಗೂ ಗುದ್ದಾಟ ನಡೆದಿತ್ತು. ಇದನ್ನು ತಡೆಯಲು ಹೋದ ಎಪಿಎಂಸಿ ನವನಗರ ಠಾಣೆ ಇನ್‌ಸ್ಪೆಕ್ಟರ್‌ ಪ್ರಭು ಸೂರಿನ್‌ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ಅವರು ತಳ್ಳಾಡಿದ್ದರು.

‘ಪ್ರವೀಣ್‌ ಪೂಜಾರಿ, ಮಲ್ಲಯ್ಯ ಹಿರೇಮಠ ಮತ್ತು ವಿನೋದ ಪಾಟೀಲ ಎಂಬುವರು ರಸ್ತೆ ಮೇಲೆ ಬೈದಾಡಿಕೊಂಡು, ಜಗಳವಾಡುತ್ತಿದ್ದರು. ಘಟನಾ ಸ್ಥಳಕ್ಕೆ ತೆರಳಿದಾಗ ವಿನೋದ ಪಾಟೀಲ ಠಾಣೆಯ ಬೆಂಗಾವಲು ಸಿಬ್ಬಂದಿಯನ್ನು ನೂಕಿ ಓಡಿಹೋಗಿದ್ದು, ಉಳಿದ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕರ್ತವ್ಯ ನಿರತ ಪೊಲೀಸರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ದೂರು ದಾಖಲಿಸಲಾಗಿದೆ’ ಎಂದು ಪ್ರಭು ಸೂರಿನ್‌ ತಿಳಿಸಿದರು.

ನಂತರ ವಿನೋದ ಪಾಟೀಲ ಅವರನ್ನು ಬಂಧಿಸಿ, ಮೂವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ವಿನೋದ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ.

ಧಾರವಾಡದಲ್ಲಿ ವಕೀಲರು, ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ. ಇತ್ತಠಾಣೆಯ ಬಹುತೇಕ ಸಿಬ್ಬಂದಿ ತಮ್ಮನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಕೆಲಕಾಲ ಠಾಣೆಯ ಹೊರಗಡೆ ಇದ್ದರು.

‘ಅಧಿಕಾರಿಗಳು ಕರಾರುವಾಕ್ಕಾಗಿ ನಡೆದುಕೊಂಡಾಗ ಠಾಣೆಯ ಕೆಲ ಸಿಬ್ಬಂದಿ ವರ್ಗಾವಣೆ ತಂತ್ರ ಅನುಸರಿಸುತ್ತಾರೆ. ಹಿಂದೆ ಹೀಗೆ ಮಾಡಿಯೇ ಠಾಣೆಯ ಪಿಎಸ್‌ಐ ಒಬ್ಬರನ್ನು ಅಮಾನತು ಮಾಡಿಸಿದ್ದರು. ಈಗಿನ ಪರಿಸ್ಥಿತಿ ತಿಳಿಯಾಗಲಿ ಎನ್ನುವ ಕಾರಣಕ್ಕೆ ಕೆಲ ಸಿಬ್ಬಂದಿ ವರ್ಗಾವಣೆ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಹೆಸರು ಹೇಳಲು ಬಯಸದ ನವನಗರ ಠಾಣೆ ಸಿಬ್ಬಂದಿಯೊಬ್ಬರು ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಭು ಸೂರಿನ್‌ ‘ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಿದಾಗ, ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿದಾಗ ಕೆಲ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಾರೆ. ಘಟನೆಯ ಸಮಗ್ರ ತನಿಖೆ ನಡೆಯಬೇಕು, ಸತ್ಯ ಎನೆಂಬುದು ಗೊತ್ತಾಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT