ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ಪರೀಕ್ಷೆ ರದ್ಧತಿಗೆ ಆಗ್ರಹ: ಎನ್‌ಎಸ್‌ಯುಐ ಸದಸ್ಯರಿಂದ ಪ್ರತಿಭಟನೆ

Last Updated 22 ಜುಲೈ 2021, 15:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಡಿಪ್ಲೊಮಾ ಕೋರ್ಸ್‌ನ ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಸದಸ್ಯರು ಗುರುವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಮಳೆಯನ್ನೂ ಲೆಕ್ಕಿಸದೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸದಸ್ಯರು, ಬಳಿಕ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯ ನಿರ್ಧಾರ ಸರಿಯಲ್ಲ. ಕೋವಿಡ್‌–19ನಿಂದಾಗಿ ಕಳೆದ ವರ್ಷ ಡಿಪ್ಲೊಮಾ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ನಡೆಸದೆ ಮುಂದಿನ ಸೆಮಿಸ್ಟರ್ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಈ ಸಲವೂ ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳು ಸಮರ್ಪಕವಾಗಿ ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಯುಜಿಸಿ ಮಾರ್ಗಸೂಚಿಯಂತೆ ಈ ವರ್ಷವೂ 1, 3, 5, 7ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತಿಲ್ಲ. ಆದರೆ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮಾತ್ರ ಎಲ್ಲಾ ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಪರೀಕ್ಷೆಯನ್ನು ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ, ಸೆಪ್ಟೆಂಬರ್‌ ಒಳಗೆ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸುವ ನಿರ್ಧಾರವು ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಉಂಟುಮಾಡುತ್ತದೆ ಎಂದರು.

ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು ಆಗ ಎರಡು ಸೆಮಿಸ್ಟರ್ ಪರೀಕ್ಷೆಗಳು ಮತ್ತು ಸಿಇಟಿ ಸೇರಿ ಮೂರು ಪರೀಕ್ಷೆಯನ್ನೂ ಬರೆಯಬೇಕಾಗುತ್ತದೆ. ಈ ಕುರಿತು ಎನ್ಎಸ್‌ಯುಐ ರಾಜ್ಯ ಸಮಿತಿ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 46 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಶೇ 90ರಷ್ಟು ವಿದ್ಯಾರ್ಥಿಗಳು ಸೆಮಿಸ್ಟರ್‌ ಪರೀಕ್ಷೆಗಳನ್ನು ಕೈಬಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಅನೇಕರಿಗೆ 18 ವರ್ಷ ತುಂಬಿಲ್ಲದಿರುವುದರಿಂದ, ಕೋವಿಡ್ ಲಸಿಕೆಯನ್ನೂ ಪಡೆಯುವಂತಿಲ್ಲ. ಲಸಿಕೆ ಇಲ್ಲದೆ ವಿದ್ಯಾರ್ಥಿಗಳು ಆಫ್‌ಲೈನ್ ತರಗತಿಗಳು ಮತ್ತು ಪರೀಕ್ಷೆಗೆ ಹಾಜರಾಗುವುದು ಅಪಾಯಕಾರಿ. ಹಾಗಾಗಿ, ಪಿಯುಸಿ ಪರೀಕ್ಷೆ ರದ್ದುಪಡಿಸಿದಂತೆ ಡಿಪ್ಲೋಮಾ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರಜ್ವಲ್ ಗೌಡರ, ಕಾರ್ಯದರ್ಶಿಗಳಾದ ಮಹೇಶ ಕುಂಬಾರ, ಫಿರೋಜ್ ಪಠಾಣ್, ಜಿಲ್ಲಾ ಅಧ್ಯಕ್ಷ ರೋಹನ ಹಿಪ್ಪರಗಿ, ಕಾರ್ಯದರ್ಶಿ ರೋಹಿತ ಘೋಡಕೆ, ಸುನೀಲ್ ಮರಾಠೆ, ವಿನಯ ಪಟ್ಟಣಶೆಟ್ಟಿ, ಶಿವಾ ಬೆಂಡಿಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT