ಸೋಮವಾರ, ಆಗಸ್ಟ್ 2, 2021
19 °C

ಕುಟುಂಬಸ್ಥರ ನೆರವಿಗೆ ಧಾವಿಸಿದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂಚೂರ (ಹಂಸಭಾವಿ): ಕುಂಚೂರ ಗ್ರಾಮದಲ್ಲಿ ಕೋವಿಡ್‌ನಿಂದ ಮೃತರಾದ ಶೋಭಾ ಇದರಮನಿ ಅವರ ಎರಡು ಬುದ್ಧಿಮಾಂದ್ಯ ಗಂಡು ಮಕ್ಕಳ ಆರೈಕೆ ಹಾಗೂ ಭವಿಷ್ಯದ ಬದುಕಿಗೆ ಸರ್ಕಾರದಿಂದ ನೆರವು ಒದಗಿಸಲಾಗುವುದು ಎಂದು ತಹಶೀಲ್ದಾರ್ ಅರುಣಕುಮಾರ ಕಾರಗಿ ತಿಳಿಸಿದರು.

'ತಾಯಿ ಕಳಕೊಂಡ ಬುದ್ಧಿಮಾಂದ್ಯ ಮಕ್ಕಳು' ಎಂಬ ಶೀರ್ಷಿಕೆಯಡಿ 'ಪ್ರಜಾವಾಣಿ'ಯಲ್ಲಿ ಮಂಗಳವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಶೋಭಾ ಅವರ ಮನೆಗೆ ಮಂಗಳವಾರ ಅಧಿಕಾರಿಗಳೊಂದಿಗೆ ಅವರು ಭೇಟಿ ನೀಡಿದರು.

ಶೋಭಾ ಅವರ ಪತಿ ಬಸವರಾಜ, ಅವರ ಸಹೋದರ ಹನುಮಂತಪ್ಪ ಅವರಿಗೆ ಸಾಂತ್ವನ ಹೇಳಿ ಕುಟುಂಬದ ಹಾಗೂ ಮಕ್ಕಳ ಸದ್ಯದ ಪರಿಸ್ಥಿತಿ ತಿಳಿದುಕೊಂಡರು.

ಶೋಭಾ ಅವರ ವೈದ್ಯಕೀಯ ವರದಿಗಳು ಅಪೂರ್ಣವಾಗಿ ಲಭ್ಯವಾಗಿವೆ. ಕುಟುಂಬದವರು ಎಲ್ಲಾ ದಾಖಲೆಗಳನ್ನು ಒದಗಿಸಿದರೆ ಸರ್ಕಾರದಿಂದ ಬರುವ ಪರಿಹಾರ ಹಾಗೂ ಮಕ್ಕಳ ಆರೈಕೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ.ಎಂ ಮಾತನಾಡಿ ‘ಈ ಮಕ್ಕಳಿಗೆ ದೃಷ್ಟಿದೋಷವಿದ್ದು, ಶಸ್ತ್ರಚಿಕಿತ್ಸೆಯಿಂದ ಕಣ್ಣಿನ ದೃಷ್ಟಿ ಬರುವುದಾದರೆ ನಮ್ಮ ಇಲಾಖೆಯಿಂದಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗುವುದು. ಕುಟುಂಬದವರಿಗೆ ಮಕ್ಕಳ ಆರೈಕೆ ಕಷ್ಟವಾದರೆ 'ಮಕ್ಕಳ ಪಾಲನಾಗೃಹ'ಕ್ಕೆ ಸೇರಿಸಲು ಕ್ರಮ ಕೈಗೊಳ್ಳುತ್ತೇನೆ‘ ಎಂದು ತಿಳಿಸಿದರು.

ಪಿಡಿಒ ಬಸವರಾಜ ಉಜ್ಜಮ್ಮನವರ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.