ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಆನ್‌ಲೈನ್‌ನಲ್ಲಿ ತರಬೇತಿ

ಬೋಧನಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮ
Last Updated 3 ಜೂನ್ 2020, 15:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಾಥಮಿಕ ಶಾಲಾ ‌ಶಿಕ್ಷಕರ ಬೋಧನಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರಿಗಾಗಿ ಆನ್‌ಲೈನ್‌ ತರಬೇತಿ ಆರಂಭಿಸಿದೆ. ಜಿಲ್ಲೆಯ ಐದು ಕಡೆ ಶಿಕ್ಷಕರಿಗೆ ಈ ತರಬೇತಿ ಆರಂಭವಾಗಿದೆ.

ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ತಾಲ್ಲೂಕುಗಳು ಮತ್ತು ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಗೂಗಲ್‌ ಮೀಟ್‌ ಆ್ಯಪ್‌ ಮೂಲಕ ತರಬೇತಿ ನಡೆಯತ್ತಿದೆ. 45 ನಿಮಿಷದಿಂದ ಒಂದು ತಾಸು ನಡೆಯುವ ತರಗತಿಯಲ್ಲಿ ಶಿಕ್ಷಕರಿಗೆ ಆಯಾ ತಾಲ್ಲೂಕುಗಳ ಸಂಪನ್ಮೂಲ ಶಿಕ್ಷಕರು ಕಡಿಮೆ ಅವಧಿಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ.

ಪ್ರತಿ ತರಗತಿಗೆ 80ರಿಂದ ಗರಿಷ್ಠ 100 ಜನ ಶಿಕ್ಷಕರು ಆನ್‌ಲೈನ್‌ ಮೂಲಕ ತರಗತಿಗಳಲ್ಲಿ ಪಾಲ್ಗೊಳ್ಳಬಹುದು. ಕಲಘಟಗಿ ಮತ್ತು ಕುಂದಗೋಳ ತಾಲ್ಲೂಕಿನಲ್ಲಿ ಶಿಕ್ಷಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಶಿಕ್ಷಕರು ಶಾಲೆಯಲ್ಲಿ ಯೂ ಟ್ಯೂಬ್‌, ಸ್ಮಾರ್ಟ್ ಕ್ಲಾಸ್‌ ಮತ್ತು ಲ್ಯಾಪ್‌ ಟಾಪ್‌ಗಳನ್ನು ಬಳಸಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚು ಭಾಗಿಯಾಗುವಂತೆ ನೋಡಿಕೊಳ್ಳಲು ಪೂರಕವಾಗುವಂತೆ ತರಬೇತಿ ಕೊಡಲಾಗುತ್ತಿದೆ.

ಕಲಘಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ 11 ಕ್ಲಸ್ಟರ್‌ಗಳಿದ್ದು, ಮೊದಲ ಹಂತದಲ್ಲಿ 1ರಿಂದ 3ನೇ ತರಗತಿಗಳ ಮಕ್ಕಳಿಗೆ ಪಾಠ ಮಾಡುವ ‘ನಲಿ–ಕಲಿ’ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ನಾಲ್ಕು ಹಾಗೂ ಐದನೇ ತರಗತಿಗೆ ಬೋಧನೆ ಮಾಡುವ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಲಾಗುತ್ತಿದೆ. ಜೂನ್‌ 8ರಿಂದ 20ರ ವರೆಗೆ 6ರಿಂದ 8ನೇ ತರಗತಿಗಳಿಗೆ ಬೋಧಿಸುವ ಶಿಕ್ಷಕರಿಗೆ ವಿಷಯವಾರು ಸಂಪನ್ಮೂಲ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಕಲಘಟಗಿ ತಾಲ್ಲೂಕಿನಲ್ಲಿ ಶಿಕ್ಷಕರು ಹೆಚ್ಚು ಆಸಕ್ತಿ ತೋರಿಸಿದ್ದರಿಂದ ಪ್ರತಿ ತರಗತಿಗೆ ತಲಾ 80 ಜನ ಶಿಕ್ಷಕರಂತೆ ಮೂರು ಬಾರಿ ತರಬೇತಿ ನೀಡಲಾಗಿದೆ.

‘ಶಿಕ್ಷಕರ ಕಲಿಕಾ ಖಜಾನೆ ಹೆಚ್ಚಿಸಬೇಕು. ಸ್ಪರ್ಧಾತ್ಮಕತೆಗೆ ತಕ್ಕಂತೆ ಶಿಕ್ಷಕರು ಕೂಡ ಸ್ಮಾರ್ಟ್‌ ಆಗಬೇಕು, ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕು ಎನ್ನುವ ಉದ್ದೇಶದಿಂದ ಆನ್‌ಲೈನ್ ತರಬೇತಿ ನಡೆಸಲಾಗುತ್ತಿದೆ. ಮೇ 20ರಂದು ದೈಹಿಕ ಶಿಕ್ಷಣ ಶಿಕ್ಷಕರಿಗೂ ಒಂದು ಅಥವಾ ಎರಡು ತರಗತಿಗಳ ತರಬೇತಿ ನೀಡಲಾಗುವುದು’ ಎಂದು ಕಲಘಟಗಿ ಬಿಇಒ ಉಮಾದೇವಿ ಬಸಾಪುರ ತಿಳಿಸಿದರು.

ಶಿಕ್ಷಕರಿಗಾಗಿ ಪ್ರತಿವರ್ಷವೂ ತರಬೇತಿ ನೀಡಲಾಗುತ್ತಿತ್ತು. ಈ ಬಾರಿ ಕೋವಿಡ್‌ 19, ಲಾಕ್‌ಡೌನ್‌ ಮತ್ತು ಶಾಲೆಗಳು ಆರಂಭವಾಗದ ಕಾರಣ ಆನ್‌ಲೈನ್‌ ಮೂಲಕ ತರಬೇತಿ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಬಹಳಷ್ಟು ಶಿಕ್ಷಕರು ಆಸಕ್ತಿ ತೋರಿಸುತ್ತಿದ್ದಾರೆ. ಶಾಲೆಗಳು ಆರಂಭವಾದ ಬಳಿಕವೂ ಆನ್‌ಲೈನ್‌ ಮೂಲಕವೇ ತರಗತಿಗಳು ಮುಂದುವರಿಯುತ್ತವೆ ಎಂದು ಆನ್‌ಲೈನ್‌ ತರಗತಿಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಹೇಳಿದರು.

1ರಿಂದ 8ನೇ ತರಗತಿಗಳ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡಲಾಗುತ್ತಿದೆ. ಇದರಿಂದ ಶಿಕ್ಷಕದ ಬೋಧನಾ ಗುಣಮಟ್ಟ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಡಿಸಿಪಿಐ ಮೋಹನ ಕುಮಾರ ಹಂಚಾಟೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT