ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವಂತ ಮಗು, ಮನೆತುಂಬ ನಗು

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 28 ಜನವರಿ 2020, 12:32 IST
ಅಕ್ಷರ ಗಾತ್ರ

ಮಗುವಿಗೆ ಯಾವ ವಯಸ್ಸಿನವರೆಗೆ ಎದೆ ಹಾಲುಣಿಸಬಹುದು, ಮಗು ಸರಿಯಾಗಿ ಊಟ ಮಾಡ್ತಿಲ್ಲ. ಮಕ್ಕಳಿಗೆ ಯಾವ ವಯಸ್ಸಿಗೆ ಲಸಿಕೆ ಕೊಡಿಸಬೇಕು, ಅವಧಿ ಮುನ್ನ ಜನಿಸಿದ ಮಗುವಿನ ಆರೈಕೆ ಹೇಗಿರಬೇಕು, ಆಟಿಸಂ ಸಮಸ್ಯೆ ಇದ್ದಾಗ ಏನು ಮಾಡಬೇಕು? ಹದಿಹರೆಯದವರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವೇನು?

ಹುಬ್ಬಳ್ಳಿ ಕಚೇರಿಯಲ್ಲಿ ಮಂಗಳವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಪಾಲಕರು ಕೇಳಿದ ಇಂಥ ಹಲವಾರು ಪ್ರಶ್ನೆಗಳಿಗೆ ಇಲ್ಲಿನ ಸುಚಿರಾಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿಯೊನೆಟಾಲಜಿ ತಜ್ಞ ಡಾ.ಸುಹೆಲ್‌ ಅಂಬಿ ಹಾಗೂ ಶಿಶುತಜ್ಞ ಡಾ.ಅಲೋಕ ಪಾಟೀಲ ಸಾವಧಾನವಾಗಿ, ವಿವರವಾಗಿ ಉತ್ತರಿಸಿದರು.

ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆಗಳನ್ನು ಹಾಕಿಸುವುದರಿಂದ ರೋಗದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ವೃದ್ಧಿಸಲಿದೆ. ಮಕ್ಕಳು ಎತ್ತರಕ್ಕೆ ಅನುಸಾರವಾಗಿ ತೂಕವಿರದಿದ್ದರೆ ಹಿಮೋಗ್ಲೋಬಿನ್‌ ಪರೀಕ್ಷೆ ಮಾಡಿಸಿ, ಪೌಷ್ಟಿಕಾಂಶವನ್ನು ಪೂರೈಸಲು, ಮನೆಯಲ್ಲಿಯೇ ತಯಾರಿಸುವ ಶೇಂಗಾ–ಬೆಲ್ಲದ ಉಂಡಿ ತಿನ್ನಿಸಿ ಎಂಬ ಸರಳ ಸಲಹೆಗಳನ್ನು ನೀಡಿದರು.

ನಮ್ಮ ಸಾಂಪ್ರದಾಯಿಕ ಆಹಾರದಲ್ಲಿ ಡಿಎಚ್‌ಎ ಪ್ರಮಾಣ ವಿಪುಲವಾಗಿದ್ದವು. ಆದರೆ ಇಂದು ನಮ್ಮ ಸಾಂಪ್ರದಾಯಿಕ ಆಹಾರದ ಜಾಗದಲ್ಲಿ ಫಾಸ್ಟ್‌ಫುಡ್‌ ಬಂದು ಮಕ್ಕಳಲ್ಲಿ ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಕೊರತೆ ಕಾಡುತ್ತಿದೆ. ಡಿಎಚ್‌ಎಯನ್ನು ಪ್ರತ್ಯೇಕವಾಗಿ ನೀಡುವುದಿಲ್ಲ. ಮೆದುಳಿನ ಶಕ್ತಿಯನ್ನು ವೃದ್ಧಿಸುವ ಯಾವ ಚಿಕಿತ್ಸೆಯೂ ಇಲ್ಲ. ಅದು ನಮ್ಮ ಸಾಂಪ್ರದಾಯಿಕ ಆಹಾರದಲ್ಲೇ ಇದೆ ಎಂಬ ಮಹತ್ವದ ಸಂಗತಿಯನ್ನು ಅವರು ಹೇಳಿದರು.

ಮಕ್ಕಳು 7–8ಗಂಟೆ ನಿದ್ದೆ ಕಡ್ಡಾಯ. ಸೂರ್ಯೋದಯದ ಸ್ವಲ್ಪ ಮುಂಚಿನ ಸಮಯ ಏಳುವುದು ಅಭ್ಯಾಸವಾದರೆ ಅವರ ಮೆದುಳಿನ ಬೆಳವಣಿಗೆ ಸಮರ್ಪಕವಾಗಿರುತ್ತದೆ. ಈ ಬೆಳಗಿನ ಸಮಯ ಅತ್ಯಂತ ಮಹತ್ವದ್ದು. ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದುದು. ಸೂರ್ಯೋದಯದ ನಂತರ ಇಳಿಬಿಸಿಲಿರುವ ಬೆಳಗಿನ ಏಳು, ಏಳೂವರೆಯವರೆಗೂ ಬಿಸಿಲಿಗೆ ಮಕ್ಕಳು ಮುಖಾಮುಖಿಯಾಗಬೇಕು. ವಿಟಾಮಿನ್‌ ಡಿ ದೇಹವನ್ನು ಹೀರಿಕೊಳ್ಳಲು ಇದು ಸಹಾಯಕವಾಗಿದೆ. ಒಮ್ಮೆ ಬೆಳಗ್ಗೆ ಏಳುವ ಅಭ್ಯಾಸವಾದರೆ ಮಲಗುವ ಅಭ್ಯಾಸವೂ ಆಗುತ್ತದೆ. ರಾತ್ರಿ ಟಿ.ವಿ ನೋಡುವುದು ಬೇಡ. ಮಲಗುವ ಮುನ್ನ ಮೊಬೈಲ್‌ ಪೋನ್‌ ಬಳಕೆ ಬೇಡ. ಪಾಲಕರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಖಂಡಿತ ಮಕ್ಕಳ ಮಲಗುವ ಅಭ್ಯಾಸವನ್ನು ಬದಲಿಸಬಹುದಾಗಿದೆ ಎಂದರು.

ಶಿಶುಮರಣ ಪ್ರಮಾಣ ಹೆಚ್ಚುವಲ್ಲಿ ಪ್ರಮುಖ ಐದು ಕಾರಣಗಳಲ್ಲಿ ಭೇದಿಯೂ ಒಂದು. ಸಾಮಾನ್ಯವಾಗಿ ಒಂದು ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಎದುರಾಗಿ ಮರಣ ಸಂಖ್ಯೆ ಹೆಚ್ಚಿರುತ್ತದೆ. ಆದ್ದರಿಂದ ಅದನ್ನು ತಡೆಯಲು ರೋಟಾ ವೈರಸ್‌ ನೀಡಲಾಗುತ್ತದೆ. ಹುಟ್ಟಿನಿಂದ ಆರು ತಿಂಗಳು ಮತ್ತು ಒಂದು ವರ್ಷದೊಳಗಿನ ಮಕ್ಕಳ ಮರಣ ಸಂಖ್ಯೆಯಲ್ಲಿ ಇಳಿಕೆ ಕಂಡು ಬರಲು ಈ ಲಸಿಕೆಯೂ ಕಾರಣವಾಗಿದೆ ಎಂದು ತಿಳಿಸಿದರು.

ಅಸ್ಪಷ್ಟ ಮಾತಿಗೆ ಸ್ಪೀಚ್‌ ಥೆರಪಿ- ಡಾ. ಸುಹೆಲ್‌ ಅಂಬಿ

ಪೋಷಕರ ಕನವರಿಕೆಯಲ್ಲಿ ಮಕ್ಕಳು ಅನೇಕ ಸಮಸ್ಯೆ ಎದುರಿಸುತ್ತಾರೆ. ಆದ್ದರಿಂದ ಮಕ್ಕಳಿಗೆ ಸಮಯ ನೀಡುವುದು ಅಗತ್ಯ.

ಹದಿಹರೆಯದ ಮಕ್ಕಳಲ್ಲಿ ಸೌಂದರ್ಯದ ಬಗ್ಗೆ ಅತಿಯಾದ ವ್ಯಾಮೋಹವಿರುತ್ತದೆ. ಕೆಲವರು ಇದರಿಂದ ಖಿನ್ನತೆಗೆ ಹೋಗುವವರೂ ಇರುತ್ತಾರೆ. ಈ ಬಗ್ಗೆ ಜ್ಞಾನ ನೀಡಬೇಕು.

ಮೆದುಳನ್ನು ಚುರುಕುಗೊಳಿಸಲು ನಿರ್ದಿಷ್ಟ ಆಹಾರ ಎಂಬುದಿಲ್ಲ. ಆರೋಗ್ಯದಾಯಕ ಆಹಾರ ಪದ್ಧತಿಯಿಂದ ಮಾತ್ರ ಬೌದ್ಧಿಕ ಶಕ್ತಿ ಹೆಚ್ಚುತ್ತದೆ.

ಭಾರತೀಯ ಆಹಾರ ಪದ್ಧತಿಯಿಂದ ವಿಮುಖರಾಗಿರುವುದು ಬೌದ್ಧಿಕ ಶಕ್ತಿಹೀನತೆಗೆ ಎಡೆಮಾಡಿದೆ.

ಮೇಘರಾಜ, ಬಳ್ಳಾರಿ: ನನ್ನ ಮಗನಿಗೆ ಈಗ 11 ವರ್ಷ. 10ನೇ ವರ್ಷಕ್ಕೆ ಟಿ.ಟಿ. ಚುಚ್ಚುಮದ್ದು ಕೊಡಿಸಿದ್ದೇವೆ. ಈಗ ಬೇರೆ ಯಾವುದಾದರೂ ಚುಚ್ಚುಮದ್ದು ಕೊಡಿಸಬೇಕಾ?

ಉತ್ತರ: 11ನೇ ವರ್ಷಕ್ಕೆ ಎಚ್‌ಪಿವಿ ಲಸಿಕೆ(ವ್ಯೂಮನ್‌ ಪ್ಯಾಪುಲೋಮ ವೈರಸ್‌) ಕೊಡಿಸಬೇಕು. ಇದು ಸರ್ವಿಕಲ್‌ ಕ್ಯಾನ್ಸರ್‌ ತಡೆಗೆ ಸಹಕಾರಿಯಾಗಲಿದೆ. ಆರು ತಿಂಗಳಿಂದ 1 ವರ್ಷದ ಅವಧಿಯಲ್ಲಿ 2 ಡೋಸ್‌ ಕೊಡಲಾಗುತ್ತದೆ. ಇದಕ್ಕೆ ₹3500 ಖರ್ಚಾಗಲಿದೆ.

ಬಸವರಾಜ ಬಿಳಿಮಗ್ಗದ, ಮುಂಡರಗಿ(ಗದಗ): ನನ್ನ ಮಗ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ತುಂಬಾ ಬುದ್ಧಿವಂತ. ಆದರೆ ನಾಚಿಕೆ ಸ್ವಭಾವ ಹೆಚ್ಚಿದೆ. ಸ್ನೇಹಿತರನ್ನು ಬಿಟ್ಟರೆ ಬೇರೆಯವರೊಂದಿಗೆ ಹೆಚ್ಚು ಮಾತನಾಡಲ್ಲ. ಹಿಂಜರಿಕೆ ಇರಬಹುದು ಅನ್ನಿಸುತ್ತಿದೆ.

ಉತ್ತರ: 18ನೇ ವಯಸ್ಸಿನಲ್ಲಿ ಈ ರೀತಿಯ ಸ್ವಭಾವ ಸಾಮಾನ್ಯ. ಓದಿನಲ್ಲಿ ಮುಂದಿರುವುದರಿಂದ ಅವರ ಆಲೋಚನಾ ಮಟ್ಟವೂ ಹೆಚ್ಚಿರುತ್ತದೆ. ಹಾಗಾಗಿ ಬೇರೆಯವರೊಂದಿಗೆ ಹೆಚ್ಚು ಬೆರೆಯಲು ಇಷ್ಟಪಡಲ್ಲ. ಯಾವುದಾದರೂ ಕ್ರೀಡಾ ತರಬೇತಿ ಕೊಡಿಸಿ. ನೀವೂ ಅವರೊಂದಿಗೆ ಕುಳಿತು ಸ್ನೇಹಿತರಂತೆ ಮಾತನಾಡಿ, ಅವರ ಭಾವನೆಗಳನ್ನು ಹಂಚಿಕೊಳ್ಳಿ. 22–23ನೇ ವಯಸ್ಸಿಗೆ ಅವರ ಆಲೋಚನೆ ಇನ್ನಷ್ಟ ಪ್ರಬುದ್ಧವಾಗುತ್ತದೆ. ಆಗ ಎಲ್ಲರ ಜತೆ ಬೆರೆಯುತ್ತಾರೆ.

ಎಂ.ಡಿ.ಅಕ್ಬರ್‌, ಚಿತ್ತಾಪುರ(ಯಾದಗಿರಿ): ನನ್ನ ಮಗಳಿಗೆ 7 ವರ್ಷ. ಸರಿಯಾಗಿ ಮಾತನಾಡಲ್ಲ. ಏನಾದರೂ ಬೇಕಾದರೆ ಸನ್ನೆ ಮೂಲಕ ಕೇಳುತ್ತಾಳೆ. ಆಕೆಗೆ ಮಾತು ಬರುತ್ತಾ.

ಉತ್ತರ: ಇದಕ್ಕೆ ಸ್ಪೀಚ್‌ ಥೆರಪಿ ಅಗತ್ಯವಿದೆ. ಮಗುವಿನೊಂದಿಗೆ ಪೋಷಕರು ಹೇಗೆ ಮಾತನಾಡಬೇಕು ಎಂಬುದನ್ನು ಹೇಳಿಕೊಡಲಾಗುತ್ತದೆ. ಒಮ್ಮೆ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡಿ.

ಮಂಜುನಾಥ ನಾಡಿಗೇರ ಹಳೇಹುಬ್ಬಳ್ಳಿ: ಜಂತು ಔಷಧಿಯನ್ನು ಪ್ರತಿ ತಿಂಗಳು ನೀಡಬೇಕೆ ಅಥವಾ ಆರು ತಿಂಗಳಿಗೆ ನೀಡಬೇಕೆ? ಹದಿಹರಯದವರ ಸಮಸ್ಯೆ ತಗ್ಗಿಸಲು ಏನು ಮಾಡಬೇಕು?

ಉತ್ತರ:
ಜಂತು ಔಷಧಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ನೀಡಬೇಕು. ಹಾಗೊಂದು ವೇಳೆ ಮಲದಲ್ಲಿ ಜಂತು ಹೋಗುತ್ತಲೇ ಇದೆ ಎಂದಾದಲ್ಲಿ ಪರೀಕ್ಷಿಸಿ ಔಷಧಿ ನೀಡಲಾಗುವುದು. ಇನ್ನು ಹದಿಹರಯದವರ ಸಮಸ್ಯೆ ಕುರಿತು ಹೇಳಬೇಕೆಂದರೆ ಅದು ವಯಸ್ಸಿಗೆ ತಕ್ಕಂತೆ ಬೇರೆ ಬೇರೆ ತೆರನಾಗಿರಲಿದೆ. 10–19 ವರ್ಷದ ಅವಧಿಯಲ್ಲಿ ಹೆಚ್ಚು ಚಟುವಟಿಕೆಯಲ್ಲಿ ಇರುವುದರಿಂದ ಸಂದು ನೋವಿನಂಥ ಸಮಸ್ಯೆಗಳು ಜಾಸ್ತಿ. ಆದರೆ ಇದಕ್ಕೆಲ್ಲ ಚಿಕಿತ್ಸೆ ಬೇಕಿಲ್ಲ. ದಿನಚರಿಗೆ ಸಮಸ್ಯೆ ಆಗೋದಾದಲ್ಲಿ ಮಾತ್ರ ಅಗತ್ಯ ಚಿಕಿತ್ಸೆ ನೀಡಲಾಗುವುದು. ದೈಹಿಕ ಮತ್ತು ಮಾನಸಿಕವಾಗಿ ಬದಲಾವಣೆ, ಭಾವಾತ್ಮಕವಾಗಿ ಬದಲಾವಣೆ ಆಗಲಿದೆ. ಈ ವಯಸ್ಸಿನಲ್ಲಿ ಒತ್ತಡ ಸಹಜ. ಅಂಥ ಸಂದರ್ಭದಲ್ಲಿ ಮಕ್ಕಳೊಂದಿಗೆ ಮಾತನಾಡಿ ಸೂಕ್ತ ಚಿಕಿತ್ಸಾಕ್ರಮ ಅನುಸರಿಸಬಹುದು.

ವನಿತಾ, ಚಿತ್ರದುರ್ಗ : ನನ್ನ ಮಗಳಿಗೆ 1 ವರ್ಷ 2 ತಿಂಗಳು. 15 ದಿನಗಳಿಂದ ಊಟ ಕಡಿಮೆ ಮಾಡುತ್ತಿದ್ದಾಳೆ. ಏಕೆ ಹೀಗೆ?

ಉತ್ತರ: ಸಾಮಾನ್ಯವಾಗಿ ಮಕ್ಕಳಿಗೆ ನೆಗಡಿಯಾದಾಗ, ವೈರಲ್‌ ಇನ್ಫೆಕ್ಷನ್‌ ಆದಾಗ ಈ ವರ್ತನೆ ಸಹಜ. ಅಂಥ ಸಮಯದಲ್ಲಿ ಮಸಾಲೆಯುಕ್ತ ಆಹಾರ ನೀಡಬೇಕು. ಒಂದು ವೇಳೆ ಗಂಟಲಲ್ಲಿ ಗುಳ್ಳೆಗಳಾದಾಗಲೂ ಮಕ್ಕಳು ಆಹಾರ ತಿನ್ನುವುದನ್ನು ಕಡಿಮೆ ಮಾಡುತ್ತವೆ.

ಐಶ್ವರ್ಯ, ವಿದ್ಯಾನಗರ ಹುಬ್ಬಳ್ಳಿ: ಮಗಳಿಗೆ 1ವರ್ಷ 2 ತಿಂಗಳು. ಎದೆ ಹಾಲು ಬಿಡಿಸಲು ಸರಿಯಾದ ಸಮಯ ಯಾವುದು?

ಉತ್ತರ: ಮಗುವಿಗೆ ಒಂದೂವರೆ ವರ್ಷದವರೆಗೂ ಆಹಾರದ ಜೊತೆಗೆ ಎದೆ ಹಾಲು ಮುಂದುವರಿಸಬೇಕು. ಗಟ್ಟಿ ಆಹಾರ ತಿನ್ನಲು ಆರಂಭಿಸಿದ ಮೇಲೂ ಎದೆ ಹಾಲನ್ನು ಬೇಡುತ್ತಿದ್ದರೆ, ಅಂಥ ಸಮಯದಲ್ಲಿ ಒಂದೇ ಬಾರಿಗೆ ಎದೆ ಹಾಲನ್ನು ನಿಲ್ಲಿಸದೆ, ನಿಧಾನವಾಗಿ ಮಗುವಿನ ಮನಸ್ಸನ್ನು ಬೇರೆಡೆಗೆ ತಿರುಗಿಸಬೇಕು. ಹಂತಹಂತವಾಗಿ ಎದೆ ಹಾಲನ್ನು ಕಡಿಮೆಗೊಳಿಸಿ ಕೊನೆಗೊಮ್ಮೆ ಪೂರ್ತಿಯಾಗಿ ನಿಲ್ಲಿಸಬೇಕು.

ರಾಮಾಂಜನೇಯ, ಹೊಸಪೇಟೆ: ಮಗಳಿಗೆ ಈಗ 23 ವರ್ಷ. ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾಳೆ, ಆದರೆ ಪ್ರಮಾಣ ಕಡಿಮೆ. ತುಂಬ ತೆಳ್ಳಗಿದ್ದಾಳೆ. ತೂಕ ಕಡಿಮೆ ಇದ್ದಾಳೆ. ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆನೋವಿನ ತೊಂದರೆ ಅನುಭವಿಸುತ್ತಾಳೆ.

ಉತ್ತರ: ಮುಟ್ಟಿಗೆ 2–3 ದಿನಗಳ ಮೊದಲು ಕೆಲವರಿಗೆ ಈ ರೀತಿ ಹೊಟ್ಟೆ ನೋವು ಉಂಟಾಗುವುದು ಸಹಜ. ಚೆನ್ನಾಗಿ ನೀರು ಕುಡಿಯುವಂತೆ ಹೇಳಿ. ಫೈಬರ್ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸುವಂತೆ ತಿಳಿಸಿ. ಆದರೂ ನಿತ್ಯದ ದಿನಚರಿಗೆ ಏನಾದರೂ ತೊಂದರೆ ಆಗುವಂತಿದ್ದರೆ ಪರೀಕ್ಷೆ ನಡೆಸಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಬಹುದು.

ದಯಾನಂದ, ಹಿರೇಕೆರೂರು: ನನಗೆ 10 ಮತ್ತು 5 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ದೊಡ್ಡವಳಿಗೆ ಯಾವಾಗಲೂ ನೆಗಡಿ ಇರುತ್ತದೆ. ಚಿಕ್ಕವಳಿಗೆ ಆಗಾಗ ಶೀತ ಕಾಣಿಸಿಕೊಳ್ಳುತ್ತದೆ.

ಉತ್ತರ: ಮಕ್ಕಳು ಟಿ.ವಿ., ಮೊಬೈಲ್ ಹೆಚ್ಚಾಗಿ ಬಳಸುತ್ತ ಮನೆಯಿಂದ ಹೊರಗೆ ಆಟವಾಡಲು ಹೋಗುವುದೇ ಕಡಿಮೆ ಆಗುತ್ತಿದೆ. ಅದರಿಂದ ‘ವಿಟಮಿನ್ ಡಿ’ ಕೊರತೆ ಉಂಟಾಗುತ್ತದೆ. ಅದಕ್ಕೆ ಅವರು ಸೂರ್ಯನ ಶಾಖಕ್ಕೆ ಮೈ ಒಡ್ಡುವುದು ಅಗತ್ಯ. ಅದು ಒಂದು ಮಟ್ಟಿಗೆ ಸಹಕಾರಿಯಾಗುತ್ತದೆ. ಕೆಲವೊಮ್ಮೆ ಅಲರ್ಜಿ ಸಮಸ್ಯೆಯೂ ಆಗುತ್ತದೆ. ಅದಕ್ಕೆ ಪರೀಕ್ಷೆ ಮಾಡಿ ಚಿಕಿತ್ಸೆ ಕೊಡಬೇಕಾಗುತ್ತದೆ.

ಸುನೀಲ್ ಕಬ್ಬೂರು, ಹಾರೂಗೇರಿ: ಒಂದೂವರೆ ವರ್ಷದ ಮಗಳಿದ್ದಾಳೆ. ಅವಳಿಗೆ ಯಾವ ರೀತಿ ಆಹಾರ ಕೊಡಬೇಕು? ಮತ್ತೆ ಅವಳಿಗೆ ತಲೆ ಯಾವಾಗಲೂ ಬಿಸಿ ಆಗಿರುತ್ತದೆ.

ಉತ್ತರ: ಈ ವಯಸ್ಸಿನ ಮಕ್ಕಳಲ್ಲಿ ಚಟುವಟಿಕೆ ಬಹಳ ಇರುತ್ತದೆ. ನಡೆಯುವುದು, ಓಡುವುದು ಹೆಚ್ಚಾಗುತ್ತದೆ. ಅದಕ್ಕಾಗಿ ಅವರಿಗೆ ಹೆಚ್ಚು ಶಕ್ತಿ ಅಗತ್ಯ. ಆದರೆ ಅವರ ಹೊಟ್ಟೆ ಚಿಕ್ಕದಾಗಿರುತ್ತದೆ. ಹೀಗಾಗಿ ಕಡಿಮೆ ಪ್ರಮಾಣದ ಆಹಾರ ಸೇವಿಸುತ್ತಾರೆ. ನಾವು ಇಂಥ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚು ಶಕ್ತಿ ತುಂಬುವ ಆಹಾರವನ್ನೇ ಅವರಿಗೆ ಕೊಡಬೇಕಾಗುತ್ತದೆ. ಸಾಧ್ಯವಾದಷ್ಟು ಗಟ್ಟಿ ಆಹಾರವನ್ನು ರೂಢಿಸಬೇಕು. ಒಂದೂವರೆ ವರ್ಷವಾಗುತ್ತಿದ್ದಂತೆ ತಾಯಿ ಎದೆ ಹಾಲನ್ನು ಕಡಿಮೆ ಮಾಡುತ್ತ ಬರಬೇಕು. ರಾತ್ರಿಯಲ್ಲಿ ಮಾತ್ರ ಕೊಡುವ ಅಭ್ಯಾಸ ಮಾಡಿಸಬೇಕು.ಕ್ಯಾಲ್ಸಿಯಂ ಕಡಿಮೆ ಆದರೆ ಮಕ್ಕಳಲ್ಲಿ ತಲೆ ಬಿಸಿಯಾಗಿರುವುದು ಕಾಣಿಸುತ್ತದೆ. ಅದಕ್ಕೆ ಕ್ಯಾಲ್ಸಿಯಂ ಸಿರಪ್ ಕೊಡಬಹುದು.

ಮನೆಯಲ್ಲೇ ಚಿಕಿತ್ಸೆ ಬೇಡ
ಮಗು ನಾಣ್ಯ, ಸೆಲ್‌, ಗೋಲಿ, ಸೆಫ್ಟಿ ಪಿನ್‌ನಂತ ವಸ್ತುಗಳನ್ನು ನುಂಗಿದಾಗ ಅದನ್ನು ಮನೆಯಲ್ಲೇ ಹೊರತೆಗೆಯುವ ದುಸ್ಸಾಹಸ ಬೇಡ. ಅಂಥ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಪಡೆಯಬೇಕು. ಮಗು ನುಂಗಿದ ವಸ್ತು ಹೊಟ್ಟೆಗೆ ಸೇರಿದರೆ ಅಷ್ಟು ಸಮಸ್ಯೆಯೆನಿಸದು. ಆದರೆ ಗಂಟಲಲ್ಲಿ ಸಿಕ್ಕಿಕೊಂಡರೆ ಉಸಿರಾಟಕ್ಕೆ ಸಮಸ್ಯೆಯುಂಟಾಗಲಿದೆ. ಸೆಲ್‌ ನುಂಗಿದಲ್ಲಿ ಅದರಿಂದ ಅಪಾಯ ಇನ್ನು ಹೆಚ್ಚು ಎಂದು ಡಾ.ಸುಹೆಲ್‌ ಅಂಬಿ ಹೇಳಿದರು. ಹೆಚ

ಚನ್ನಪ್ಪ ಕಲಕಟ್ಟಿ, ಕಲಘಟಗಿ: ಆರು ತಿಂಗಳ ಮಗುವಿನ ಫೋಷಣೆ ಬಗ್ಗೆ ತಿಳಿಸಿ.
ಉತ್ತರ
: ಮಗುವಿನಗೆ ಆರು ತಿಂಗಳು ಆಗುವವರೆಗೂ ಕೇವಲ ತಾಯಿ ಹಾಲನ್ನು ಮಾತ್ರ ನೀಡಬೇಕು. ಆರು ತಿಂಗಳು ಕಳೆಯುತ್ತಲೇ ಒಂದು ವಾರದವರೆಗೆ ತೆಳುವಾದ ರಾಗಿ ಗಂಜಿ ನೀಡಬೇಕು. ನಂತರದ ವಾರದಲ್ಲಿ ತೆಳುವಾಗಿ ರವಾ ಗಂಜಿ ನೀಡಬಹುದು. ನಂತರ ಅವುಗಳ ಜೊತೆ ಹಣ್ಣುಗಳನ್ನು ಸೇರಿಸಿ ಕೊಡಬಹುದು.

ಇಯರ್‌ಬಡ್‌ ಬಳಸಬೇಡಿ
ಮಕ್ಕಳ ಕಿವಿಯಲ್ಲಿ ಗುಗ್ಗೆ ತೆಗೆಯಲು ಇಯರ್‌ಬಡ್‌, ಚಿಮಟ ಬಳಸಬೇಡಿ. ಒಂದು ವೇಳೆ ತಮಟೆಗೆ ಚುಚ್ಚಿದರೆ ಅದು ಸೋಂಕಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ. ಹಾಗಾಗಿ ಇಎನ್‌ಟಿ ವೈದ್ಯರಿಗೆ ತೋರಿಸಿ. ಅವರು ನೀಡುವ ಡ್ರಾಪ್‌ ಬಳಸಿ.

ಕೊರೊನೊ ವೈರಸ್‌ ತಪಾಸಣೆ ಸಿದ್ಧತೆ
ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಹೊಸ ಬಗೆಯ ಕೊರೊನೊ ವೈರಸ್‌ ಸದ್ದು ಮಾಡುತ್ತಿದೆ. ಹೈದರಾಬಾದ್‌ನಲ್ಲಿ ಈಗಾಗಲೇ 3 ಪ್ರಕರಣಗಳು ಪತ್ತೆಯಾಗಿವೆ.

ಮುಂಜಾಗ್ರತಾ ಕ್ರಮವಾಗಿ ಕೊರೊನೊ ವೈರಸ್‌ ಪತ್ತೆಗೆ ಸುಚಿರಾಯು ಆಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ದೇಹದಲ್ಲಿನ ನಿರೋಧಕ ಶಕ್ತಿಗೆ ಈ ಹೊಸ ಬಗೆಯ ವೈರಸ್‌ ಅನ್ನು ತಡೆಯುವ ಶಕ್ತಿ ಇರುವುದಿಲ್ಲ. ಉಸಿರಾಟದ ಸಮಸ್ಯೆಗಳು ಕಂಡು ಬಂದರೆ, ಉಸಿರಾಡುವಲ್ಲಿ ತೊಂದರೆಯಾದರೆ ಪರೀಕ್ಷೆಗೆ ಒಳಪಡುವುದು ಒಳಿತು. ಉಗುಳಿನ ಮಾದರಿಯನ್ನು ಸಂಗ್ರಹಿಸಿ, ಪುಣೆಯ ವೈರಾಲಾಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಡಾ. ಅಲೋಕ್‌ ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT