ಊರ ಹಂದಿಗಳ ಕಾಟ; ರೈತರ ಗೋಳಾಟ

7

ಊರ ಹಂದಿಗಳ ಕಾಟ; ರೈತರ ಗೋಳಾಟ

Published:
Updated:
Deccan Herald

ಧಾರವಾಡ: ನಗರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮನಸೂರು ಹಾಗೂ ಸಣ್ಣ ಸೋಮಾಪುರ ಗ್ರಾಮಗಳ ಹೊಲಗಳಿಗೆ ಊರ ಹಂದಿಗಳು ದಾಳಿ ಇಟ್ಟು, ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ ಎಂದು ಆರೋಪಿಸಿದ ಗ್ರಾಮಸ್ಥರು ಜೋಳದ ದಂಟು ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ನಗರದ ಹೊಯ್ಸಳ ನಗರ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಅತ್ತಿಕೊಳ್ಳಕ್ಕೆ ಸಮೀಪದಲ್ಲಿರುವ ಈ ಎರಡು ಗ್ರಾಮಗಳಿಗೆ ನಗರ ಪ್ರದೇಶದಿಂದ ಹಂದಿಗಳನ್ನು ತಂದು ಬಿಡಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿರುವ ಈ ಹಂದಿಗಳು ಈ ಭಾಗದ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆದುನಿಂತಿದ್ದ ಜೋಳ ಹಾಗೂ ಕಬ್ಬನ್ನು ನಾಶ ಮಾಡಿವೆ ಎಂದು ಆರೋಪಿಸಿ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಮಲ್ಲನಗೌಡ ಗೌಡ್ರ, ‘ಕಳೆದ ಮೂರು ವರ್ಷಗಳಿಂದ ಈ ಗ್ರಾಮಗಳಿಗೆ ಹಂದಿಗಳ ಉಪಟಳ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿರುವ ಹಂದಿ ಸಾಕಣೆದಾರರು, ಲಾರಿಗಳಲ್ಲಿ ತುಂಬಿಕೊಂಡು ಬಂದು ಈ ಭಾಗದಲ್ಲಿ ಹಂದಿಗಳನ್ನು ಬಿಡುತ್ತಿದ್ದಾರೆ. ಈ ಕುರಿತು ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

‘ಹಗಲಿನಲ್ಲಿ ಹೊಲದ ಕೆಲಸ ಮಾಡುವ ರೈತರಿಗೆ, ರಾತ್ರಿ ವೇಳೆ ಊರಹಂದಿಗಳನ್ನು ಕಾಯುವುದೇ ದೊಡ್ಡ ಕೆಲಸವಾಗಿದೆ. ಕಳೆದ ಮೂರು ವರ್ಷಗಳಿಂದ ಮಳೆ ಇಲ್ಲದೆ ಇಳುವರಿ ಕುಂಠಿತವಾಗಿತ್ತು. ಆದರೆ ಈ ಬಾರಿ ಮಳೆ ಉತ್ತಮವಾಗಿದೆ. ಒಳ್ಳೆಯ ಬೆಳೆ ನಿರೀಕ್ಷೆಯಲ್ಲಿದ್ದೇವೆ. ಇಂಥ ಸಂದರ್ಭದಲ್ಲಿ ಊರ ಹಂದಿಗಳನ್ನು ಬಿಟ್ಟು ಹೊಲ ಹಾಳು ಮಾಡಲಾಗುತ್ತಿದೆ. ಹಂದಿಗಳನ್ನು ಹೊಡೆದರೆ, ಗ್ರಾಮೀಣ ವಿಭಾಗದ ಪೊಲೀಸರು ರೈತರನ್ನೇ ಬೆದರಿಸಿ ದಂಡ ಕಟ್ಟಿಸಿಕೊಂಡಿದ್ದಾರೆ’ ಎಂದು ನೇರ ಆರೋಪ ಮಾಡಿದರು.

‘ಇವೆಲ್ಲದರಿಂದ ಈ ಭಾಗದ ರೈತರು ತೀರಾ ಸಂಕಷ್ಟದಲ್ಲಿದ್ದು, ಹಂದಿಗಳನ್ನು ಸ್ಥಳಾಂತರಿಸುವಂತೆ ಇವುಗಳ ಸಾಕಣೆದಾರರಿಗೆ ಸೂಚನೆ ನೀಡಬೇಕು. ಇಲ್ಲವೇ ಇವುಗಳನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು. ಜತೆಗೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಈ ಸಮಸ್ಯೆಯನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

‘ಗ್ರಾಮ ಪಂಚಾಯ್ತಿ ವತಿಯಿಂದ ಪೊಲೀಸರಿಗೆ ದೂರು ನೀಡಿ, ಹಂದಿ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯ ಅವಕಾಶಗಳೂ ಇವೆ. ಇದನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಿಕೊಳ್ಳಿ’ ಎಂದರು.

ಮೈಗೂರ ಸಲಹೆಯನ್ನು ಒಪ್ಪದ ರೈತರು, ಈಗಾಗಲೇ ಹಲವು ಬಾರಿ ಮನವಿ ನೀಡಿದರೂ ಯಾರೊಬ್ಬರೂ ಇದಕ್ಕೆ ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯ್ತಿಯನ್ನು ಕೇಳಿದರೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಹೇಳುತ್ತಾರೆ. ಒಟ್ಟಿನಲ್ಲಿ ನಷ್ಟ ಅನುಭವಿಸುವವರು ರೈತರೇ ಆಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೇಕಪ್ಪ ಮುಮ್ಮಿಗಟ್ಟಿ, ಠಾ.ಸಾ.ಹಿರೇಮಠ, ಚಂದ್ರಪ್ಪ ಸಕ್ರಣ್ಣವರ, ಉಳಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !