ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಗೋಷ್ಠಿ: ಪೂರ್ಣಕುಂಭ, ಇಂಗ್ಲಿಷ್ ಶಾಲೆಗಳಿಗೆ ಕಾವ್ಯದಲ್ಲಿಯೂ ವಿರೋಧ

Last Updated 6 ಜನವರಿ 2019, 8:55 IST
ಅಕ್ಷರ ಗಾತ್ರ

ಧಾರವಾಡ: ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ವೇದಿಕೆ 2ರಲ್ಲಿ ನಡೆದ 3ನೇ ಕವಿಗೋಷ್ಠಿಯಲ್ಲಿ ಒಟ್ಟು 46 ಕವಿಗಳು ಭಾಗವಹಿಸಿದ್ದರು. ಗೋಷ್ಠಿಯಲ್ಲಿ ಭಾಗವಹಿಸಿದ್ದ ಮೂವರು ಕವಿಯಗಳು ಪೂರ್ಣಕುಂಭ ಸ್ವಾಗತವನ್ನು ಆಕ್ಷೇಪಿಸಿದರು.

ಕವಿ ಡಾ.ಕೆ.ಪಿ.ನಟರಾಜ್ ಮಾತನಾಡಿ, ‘ಕನ್ನಡ ಶಾಲೆಗಳ ಕತ್ತು ಹಿಸುಕುತ್ತಿರುವ ಕುಮಾರಸ್ವಾಮಿ ಸರ್ಕಾರಕ್ಕೆ ನನ್ನ ವಿರೋಧವಿದೆ. ಪೂರ್ಣಕುಂಭ ಮೆರವಣಿಗೆ ನಡೆಸಿದ ಪರಿಷತ್ತಿನ ಜಡತ್ವ ವಿರೋಧಿಸುತ್ತೇನೆ’ ಎಂದರು.

ಕವಯತ್ರಿ ಅನುಪಮಾ ಪ್ರಸಾದ್ ಸಹ ಪೂರ್ಣಕುಂಭ ವಿರೋಧಿಸುತ್ತೇನೆ ಎಂದು ಘೋಷಿಸಿದ ನಂತರವೇ ಕವಿತೆ ಓದಿದರು. ದಾಕ್ಷಾಯಿಣಿ ಹುಡೇದ ಅವರು ಕವನದ ಮೂಲಕ ಪೂರ್ಣಕುಂಭ ವಿರೋಧಿಸಿದರು. ಗೌರವಧನವನ್ನು ಪರಿಷತ್ತಿಗೆ ಹಿಂದಿರುಗಿಸುವೆ ಎಂದರು.

ಕಾರಹಳ್ಳಿ ಶ್ರೀನಿವಾಸ್ ಅವರು ’ಕನ್ನಡಶಾಲೆ ನಮ್ಮೂರ ಶಾಲೆ’ ಕವಿತೆ ಓದಿದರು. ಕವನ ವಾಚನ ಮುಗಿದ ತಕ್ಷಣ ಪ್ರೇಕ್ಷಕರ ನಡುವೆಯಿದ್ದ ಮಹಿಳೆಯೊಬ್ಬರು ‘ಇಂಗ್ಲಿಷ್ ಶಾಲೆ ಬೆಳೆಸಿ ಕನ್ನಡಶಾಲೆ ಸಾಯಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಸಭಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಚುಟುಕು ಕವಿ ಡುಂಡಿರಾಜ್ ಆಶಯ ನುಡಿಗಳನ್ನು ನುಡಿದರು. ‘ಕಾವ್ಯ ಕೇವಲ ರಂಜಕ ಅಷ್ಟೇ ಅಲ್ಲ. ಅದು ವಿಚಾರ ಪ್ರಚೋದಕವೂ ಹೌದು. ಜ್ಞಾನದ ಮೇಲೆ ಅದು ಬೆಳಕು ಚೆಲ್ಲುತ್ತದೆ. ಸಿದ್ಧ ಮಾದರಿಯ ವ್ಯಾಖ್ಯಾನ ಮುರಿಯುವುದು ಒಳ್ಳೆಯ ಕಾವ್ಯದ ಲಕ್ಷಣ’ ಎಂದು ಅಭಿಪ್ರಾಯಪಟ್ಟರು.

ಜನಪ್ರಿಯ ಕಾವ್ಯ ಅಂದರೆ ಕೆಟ್ಟದು ಅಂತಲ್ಲ. ವಿಮರ್ಶಕರು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಬೇಂದ್ರೆ ಶ್ರೇಷ್ಠ ಕವಿ, ಅವರು ಜನಪ್ರಿಯರೂ ಹೌದು ಎನ್ನುವುದು ಇದಕ್ಕೆ ನಿದರ್ಶನ. ಈಗ ಕವಿ ಮುದ್ರಣ ಮಾಧ್ಯಮವನ್ನು ಅವಲಂಬಿಸಬೇಕಿಲ್ಲ. ವಾಟ್ಸ್ಯಾಪ್ ಫೇಸ್‌ಬುಕ್‌ನಲ್ಲಿಯೂ ಕಾವ್ಯಾಭಿವ್ಯಕ್ತಿ ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT