ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ |ಮಾದಕ ವಸ್ತುಗಳ ಬಳಕೆ; 251 ಮಂದಿ ವಶಕ್ಕೆ ಪಡೆದ ಪೊಲೀಸರು

ಮಾದಕ ವಸ್ತುಗಳ ಬಳಕೆದಾರರ ವಿರುದ್ಧ 44 ಪ್ರಕರಣ ದಾಖಲು; ಕಮಿಷನರ್‌ ಎಚ್ಚರಿಕೆ
Published 4 ಆಗಸ್ಟ್ 2024, 16:23 IST
Last Updated 4 ಆಗಸ್ಟ್ 2024, 16:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾರದ ಹಿಂದಷ್ಟೇ ಮಾದಕ ವಸ್ತುಗಳ ಬಳಕೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿ 255 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಹು–ಧಾ ಮಹಾನಗರ ಪೊಲೀಸರು, ಭಾನುವಾರ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ 251 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾದಕ ವಸ್ತು ಬಳಸುವ ಸಂಶಯಾಸ್ಪದ 467 ಮಂದಿಯನ್ನು ವಶಕ್ಕೆ ಪಡೆದು ಧಾರವಾಡ ಜಿಲ್ಲಾಸ್ಪತ್ರೆ, ಡಿಮಾನ್ಸ್‌ ಮತ್ತು ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದು, ಪರೀಕ್ಷೆ ಮಾಡಿಸಿದರು. 251 ಮಂದಿ ಮಾದಕ ವಸ್ತುಗಳನ್ನು ಬಳಸಿರುವುದು ವರದಿಯಾಗಿದ್ದು, ಅವರ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮಾದಕ ವಸ್ತು ಬಳಕೆ ನಿಷಿದ್ಧ ಕಾಯ್ದೆಯಡಿ 44 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಬಂಧಿತರಾದ ಮಾದಕ ವ್ಯಸನಿಗಳನ್ನೆಲ್ಲ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೇರಿಸಿ, ಪಾಲಕರ ಸಮ್ಮುಖದಲ್ಲಿ ವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಿ, ಅರಿವು ಮೂಡಿಸಲಾಯಿತು. ಬಹುತೇಕ ಪಾಲಕರಿಗೆ ತಮ್ಮ ಮಕ್ಕಳು ಮಾದಕ ವ್ಯಸನಿಗಳಾಗಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಅದನ್ನರಿತ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಪಾಲಕರ ಸಮ್ಮುಖದಲ್ಲಿಯೇ ಮಕ್ಕಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು. 

‘ಕಳೆದ ವಾರ ಮಾದಕ ವ್ಯಸನಿಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಕೆಲವು ಮಾಹಿತಿಗಳು ಲಭ್ಯವಾಗಿದ್ದವು. ಅವುಗಳನ್ನು ಆಧರಿಸಿ 467 ಸಂಶಯಾಸ್ಪದ ಮಂದಿಯನ್ನು ಗುರುತಿಸಿ ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಾಸಿಟಿವ್‌ ಬಂದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಇನ್ನೂ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ’ ಎಂದು ಕಮಿಷನರ್‌ ಶಶಿಕುಮಾರ್‌ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಕೆಲವು ಕಾಲೇಜು ಆವರಣದಲ್ಲೂ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿರುವ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ, ಇನ್ನೂ ಕಾರ್ಯಾಚರಣೆ ನಡೆಸಿಲ್ಲ. ಶಿಕ್ಷಣ ಸಂಸ್ಥೆಗಳ ಪ್ರತಿಷ್ಠೆ, ಗೌರವದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಗಳ, ವಿದ್ಯಾರ್ಥಿ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗಿದೆ. ಹೀಗಿದ್ದಾಗಲೂ ಅಲ್ಲಿ ಅಂತಹ ಚಟುವಟಿಕೆಗಳು ಕಂಡು ಬಂದರೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಶ್ಲಾಘನೆ: ‘ಅವಳಿನಗರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುತ್ತಿರುವ ಹು–ಧಾ ಮಹಾನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಕಾರ್ಯ ಶ್ಲಾಘನೀಯ‘ ಎಂದು ಶಾಸಕ ಪ್ರಸಾದ ಅಬ್ಬಯ್ಯ ಬಣ್ಣಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT