ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿಕೋನ ಬದಲಾದರಷ್ಟೇ ಪ್ರಗತಿ ಸಾಧ್ಯ

ಶ್ರೀಮಾತಾ ಆಶ್ರಮದಲ್ಲಿ ಶಿಕ್ಷಕರ ಸಮಾವೇಶ: ವಿಜಯಾನಂದ ಸ್ವಾಮೀಜಿ ಹೇಳಿಕೆ
Last Updated 29 ಜೂನ್ 2018, 13:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಈಗಿನ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕಾದ ಅಗತ್ಯವಿದೆ. ಆದ್ದರಿಂದ, ಶಿಕ್ಷಕರು ಕೂಡ ತಮ್ಮ ವೃತ್ತಿಯ ಬಗ್ಗೆ ದೃಷ್ಟಿಕೋನ ಬದಲಿಸಿಕೊಳ್ಳಬೇಕು. ಆಗ ಮಾತ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯ’ ಎಂದು ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಡಾಲರ್ಸ್‌ ಕಾಲೊನಿಯಲ್ಲಿರುವ ಶ್ರೀಮಾತಾ ಆಶ್ರಮದಲ್ಲಿ ಶುಕ್ರವಾರ ನಡೆದ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿದ ಅವರು ‘ಶಿಕ್ಷಣ ಇಲಾಖೆ ಸಂಘಟಿಸುವ ಶಿಕ್ಷಕರ ಸಮಾವೇಶಗಳು ರಾಜಕೀಯ ನಾಯಕರ ಹೊಗಳಿಕೆಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ, ಇಂಥ ಅರ್ಥಪೂರ್ಣ ಸಮಾವೇಶಗಳು ಮುಕ್ತ ಚರ್ಚೆಗೆ ವೇದಿಕೆಯಾಗಬೇಕು’ ಎಂದರು.

‘ಸರ್ಕಾರದ ನಿಯಮಗಳಿಂದ ವಿದ್ಯಾರ್ಥಿಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಶಿಕ್ಷಕರು ವೃತ್ತಿಬದ್ಧತೆ ಬೆಳೆಸಿಕೊಂಡು ಸಮಾಜದಿಂದ ಏನನ್ನೂ ನಿರೀಕ್ಷಿಸದೇ, ತಮ್ಮನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ಕೆಲಸ ಮಾಡಬೇಕು. ದೊಡ್ಡ ಹುದ್ದೆಗೇರಿದ ಸಾಧಕರ ಯಶಸ್ಸಿಗೆ ಶಾಲಾ ಹಂತದಲ್ಲಿ ಶಿಕ್ಷಕರು ಹಾಕಿಕೊಟ್ಟ ಗಟ್ಟಿ ಬುನಾದಿ ಕಾರಣವಾಗಿರುತ್ತದೆ. ಆದ್ದರಿಂದ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿ ಸದೃಢ ಸಮಾಜ ನಿರ್ಮಿಸುವ ವಿದ್ಯಾರ್ಥಿಗಳನ್ನು ರೂಪಿಸಬೇಕು’ ಎಂದು ಹೇಳಿದರು.

‘ಇತಿಹಾಸದಲ್ಲಿ ನಡೆದು ಹೋದ ಘಟನೆಗಳನ್ನು ಈಗಲೂ ಪಠ್ಯದಲ್ಲಿರಿಸುವ ಬದಲು ಈಗಿನ ಘಟನೆಗಳು, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಅಂಶಗಳು ಪಠ್ಯದಲ್ಲಿರಬೇಕು. ಈಗ ಮಕ್ಕಳು ಸಾಕಷ್ಟು ಮುಂದುವರೆದಿದ್ದಾರೆ. ಅದಕ್ಕೆ ತಕ್ಕಂತೆ ಶಿಕ್ಷಕರು ಕೂಡ ಬದಲಾಗಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ಶ್ರೀಮಾತಾ ಆಶ್ರಮದ ಅಧ್ಯಕ್ಷೆ ಮಾತಾ ತೇಜೋಮಯಿ ‘ಸಾಕಷ್ಟು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳೇ ಇರುವುದಿಲ್ಲ. ಸಂಸ್ಕೃತಿ, ನೈತಿಕ ಮೌಲ್ಯಗಳ ಅರಿವು ಇಲ್ಲದವರು ಎಷ್ಟು ಅಂಕ ಪಡೆದರೂ ಪ್ರಯೋಜನವಿಲ್ಲ’ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲಿಂಗರಾಜ ರಾಮಾಪುರ ‘ಶಿಕ್ಷಕರಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಚಿಂತನೆಗೆ ಹಚ್ಚಿಸುವಂತಿರಬೇಕು. ಭವಿಷ್ಯದ ಪ್ರಜೆಗಳನ್ನು ರೂಪಿಸಲು ಶಿಕ್ಷಕರು ಶ್ರಮಪಡಬೇಕು’ ಎಂದರು. ಹಿರಿಯ ಸಂಪನ್ಮೂಲ ವ್ಯಕ್ತಿ ಸುರೇಶ ಕುಲಕರ್ಣಿ, ಉದ್ಯಮಿ ಎಂ.ವಿ. ಕರಮುರಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT