ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

ಪಾಕಿಸ್ತಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಿಡುಗಡೆ‌: ಆಕ್ರೋಶ
Last Updated 17 ಫೆಬ್ರುವರಿ 2020, 6:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಾಕಿಸ್ತಾನದ ಪರ ಘೋಷಣೆ ಕೂಗಿದ ಇಲ್ಲಿನ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ಭಾನುವಾರ ಬಿಡುಗಡೆ ಮಾಡಿದ ಪೊಲೀಸರ ಕ್ರಮದ ವಿರುದ್ಧ ಬಜರಂಗ ದಳ, ವಿಶ್ವಹಿಂದೂ ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ಗೋಕುಲ ರಸ್ತೆಯ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ಹಾಗೂ ರಸ್ತೆತಡೆ ನಡೆಸಿದರು.

ಸಂಜೆ ಏಳು ಗಂಟೆಗೆ ಆರಂಭವಾದ ಪ್ರತಿಭಟನೆ ರಾತ್ರಿ 10ರ ವರೆಗೂ ನಡೆಯಿತು. ‘ದೇಶದ್ರೋಹಿಗಳನ್ನು ರಕ್ಷಿಸಲು ಪೊಲೀಸರು ಮುಂದಾಗಿದ್ದಾರೆ’ ಎಂದು ಘೋಷಣೆ ಕೂಗಿದರು. ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಪೊಲೀಸರ ವಶದಲ್ಲಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಯಾವ ಕಾರಣಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಪೊಲೀಸ್‌ ಕಮಿಷನರ್‌ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪೊಲೀಸರ ವಿರುದ್ಧ ಕಿಡಿ:

ಪ್ರತಿಭಟನೆಯ ಚಿತ್ರೀಕರಣ ಮಾಡುತ್ತಿದ್ದ ಪೊಲೀಸ್‌ ಸಿಬ್ಬಂದಿಯ ಮೇಲೆ ಹರಿಹಾಯ್ದ ಪ್ರತಿಭಟನಾಕಾರರು ಕ್ಯಾಮೆರಾ ಕಸಿಯಲು ಮುಂದಾದರು. ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಪೊಲೀಸ್‌ ಸಿಬ್ಬಂದಿಯ ಮೊಬೈಲ್‌ ಕಸಿದು ವಾಗ್ವಾದ ನಡೆಸಿದರು. ರಸ್ತೆಯಲ್ಲೇ ಕುಳಿತು ಭಜನೆ ಮಾಡಿ ಪೊಲೀಸರ ನಡೆಯನ್ನೂ ಖಂಡಿಸಿದರು. ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಗೋಕುಲ ಕಡೆಯಿಂದ ಬಂದಿದ್ದ ವಾಹನಗಳೆಲ್ಲ ನಿಂತಲ್ಲಿಯೇ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಮನವೊಲಿಕೆಗೆ ಯತ್ನ: ಪ್ರತಿಭಟನೆ ಆರಂಭವಾಗಿ ಎರಡೂವರೆ ಗಂಟೆ ಕಳೆದ ಬಳಿಕ ಸ್ಥಳಕ್ಕೆ ಬಂದ ಪೊಲೀಸ್‌ ಕಮಿಷನರ್‌ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು.

ಈ ವೇಳೆ ‘ತನಿಖೆ ಕುರಿತು ಮಾಹಿತಿ ನೀಡಬೇಕು. ವಿದ್ಯಾರ್ಥಿಗಳನ್ನು ಏಕೆ ಬಿಡುಗಡೆ ಮಾಡಲಾಗಿದೆ’ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಷ್ಟ ಉತ್ತರ ನೀಡದೆ ಕಮಿಷನರ್‌ ಪೊಲೀಸ್‌ ಠಾಣೆಯ ಒಳಗೆ ನಡೆದರು. ಇದರಿಂದ ಠಾಣೆಯ ಹೊರಗೆ ಮತ್ತೆ ಘೋಷಣೆ ಕೂಗುವುದು ಮುಂದುವರಿಯಿತು. ಮುಖಂಡರನ್ನು ಠಾಣೆಯ ಒಳಗೆ ಕರೆಯಿಸಿಕೊಂಡು ಅವರೊಂದಿಗೆ ಕಮಿಷನರ್ ಚರ್ಚಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಸೈನಿಕ ಮೋಹನ ಚಿತಳೆ, ‘ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಸಾಕ್ಷ್ಯಾಧಾರವಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿರುವುದು ಯಾಕೆ? ವಿದ್ಯಾರ್ಥಿಗಳನ್ನು ಬಂಧನ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದ ಪೊಲೀಸ್ ಕಮಿಷನರ್, ಈಗ ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದ್ದೇವೆ ಎನ್ನುತ್ತಿರುವುದು ಯಾಕೆ’ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರಾದ ಸಂತೋಷ ಚವ್ಹಾಣ, ವಿನಾಯಕ ತಲಗೇರಿ, ಜಯತೀರ್ಥ ಕಟ್ಟಿ, ಉಮೇಶ ದುಶಿ, ರಾಜು ಕಾಡಗೋಡೆ, ಶಿವಾನಂದ ಅತ್ತಿಗೇರಿ, ಗೋವರ್ದನರಾವ್, ಪ್ರದೀಪ ಶೆಟ್ಟಿ, ಆನಂದ ವಿಶ್ವನಾಥಮಠ, ಪ್ರಕಾಶ ಬಳ್ಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT