ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Last Updated 5 ಅಕ್ಟೋಬರ್ 2019, 10:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ರೈಲ್ವೆ ಖಾಸಗೀಕರಣ ನೀತಿ ವಿರೋಧಿಸಿ ಇಲ್ಲಿನ ಗದಗ ರಸ್ತೆಯ ಡೀಸೆಲ್‌ ಶೆಡ್‌ ಎದುರು ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಲಕ್ನೊ–ದೆಹಲಿ ಹಾಗೂ ಮುಂಬೈ–ಅಹ್ಮದಾಬಾದ್‌ ನಡುವೆ ’ತೇಜಸ್‌ ಎಕ್ಸ್‌ಪ್ರೆಸ್‌‘ ಹೆಸರಿನ ಎರಡು ಐಷರಾಮಿ ರೈಲುಗಳನ್ನು ಓಡಿಸಲು ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿಗೆ ಶುಕ್ರವಾರ ಹಸ್ತಾಂತರಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.

ದೇಶದ ವಿವಿಧ ಮಾರ್ಗಗಳಲ್ಲಿ ಇನ್ನೂ 150 ರೈಲುಗಳನ್ನು ಓಡಿಸಲು ಖಾಸಗಿಯವರಿಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ರೈಲ್ವೆ ಸಚಿವಾಲಯದ ಈ ನಡೆ ಕಾರ್ಮಿಕ ವಿರೋಧಿ ಮಾತ್ರವಲ್ಲ, ಪ್ರಯಾಣಿಕರ ವಿರೋಧಿಯೂ ಆಗಿದೆ. ಲೂಟಿಕೋರರಿಗೆ ಬೀಗದ ಕೀಲಿ ಕೊಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಖಾಸಗಿಯವರಿಗೆ ಒಮ್ಮೆ ರೈಲ್ವೆ ಸೇವೆ ಹಸ್ತಾಂತರವಾದರೆ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುಗಳು, ಅಂಗವಿಕಲರು, ಅನಾರೋಗ್ಯಪೀಡಿತರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ರಿಯಾಯಿತಿ ದರದಲ್ಲಿ ಪ್ರಯಾಣಿಸುತ್ತಿರುವವರಿಗೆ ರಿಯಾಯಿತಿ ಪ್ರಯಾಣ ಬಂದ್‌ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈಲ್ವೆ ಉದ್ಯೋಗಿಗಳು ಕೂಡ ಈ ಮುಂಚಿನಂತೆ ತಮ್ಮ ಪಾಸುಗಳಿಂದ ರೈಲಿನಲ್ಲಿ ಪ್ರಯಾಣಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. ರೈಲ್ವೆ ಪ್ರಯಾಣ ದರ ಕೂಡ ಖಾಸಗಿಯವರಿಂದಲೇ ನಿರ್ಧರಿಸಲ್ಪಡುತ್ತವೆ. ಆಯಾ ಹಬ್ಬ ಹರಿದಿನಗಳನ್ನು ಆಧರಿಸಿ ವಿಮಾನ, ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ದರ ಹೆಚ್ಚಿಸಿದಂತೆ ರೈಲ್ವೆಯಲ್ಲೂ ಪ್ರಯಾಣದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ದೂರಿದರು.

ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ ವಲಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್‌ ಎ.ಎಂ.ಡಿಕ್ರೂಸ್‌ ಮಾತನಾಡಿ, ರೈಲ್ವೆ ಕಾರ್ಮಿಕ ಸಂಘಟನೆಗಳ ವಿರೋಧದ ನಡುವೆಯೂ ಖಾಸಗಿಯವರಿಗೆ ರೈಲ್ವೆ ಹಸ್ತಾಂತರಿಸಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ ಎಂದರು.

ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ ವಲಯ ಅಧ್ಯಕ್ಷ ಕಾಮ್ರೆಡ್‌ ಆರ್‌.ಆರ್‌.ನಾಯಕ, ವಲಯ ಖಜಾಂಚಿ ಕಾಮ್ರೆಡ್‌ ವಿ.ಇ.ಚಾರಖಾನಿ, ಉಪ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟೇಶ್‌, ಎಸ್‌.ಎಫ್‌.ಮಲ್ಲಾಡ, ವಿಭಾಗೀಯ ಕಾರ್ಯದರ್ಶಿ ಅಲ್ವರ್ಟ್‌ ಡಿಕ್ರೂಸ್‌, ಪ್ರವೀಣ ಪಾಟೀಲ, ವಿಭಾಗೀಯ ಪದಾಧಿಕಾರಿಗಳಾದ ಜಾಕೀರ್‌ ಸನದಿ, ವೈ.ಜಾಕೋಬ್‌, ಮಲ್ಲಿಕಾರ್ಜುನ ಸಿಂದಗಿ, ಮುರುಗನ್‌ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT