ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಕೆಲವೆಡೆ ಬಿರುಗಾಳಿ, ವರ್ಷಧಾರೆ

ಕೊಡಗಿನಲ್ಲಿ 12 ಸೆಂ. ಮೀ, ಕೊಣನೂರಿನಲ್ಲಿ ಧಾರಾಕಾರ ಮಳೆ
Published 23 ಮೇ 2024, 23:30 IST
Last Updated 23 ಮೇ 2024, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಮಡಿಕೇರಿ: ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ ಮತ್ತು ವಿಜಯಪುರ ಜಿಲ್ಲೆಯ ಹಲವಡೆ ಗುರುವಾರ ಧಾರಾಕಾರ ಮಳೆಯಾಯಿತು. ಬಹುತೇಕ ಕಡೆ ಮರಗಳು ಉರುಳಿಬಿದ್ದವು. ಇದರ ಪರಿಣಾಮ ಕೆಲ ಕಡೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾದರೆ, ಕೆಲ ಕಡೆ ವಿದ್ಯುತ್ ಪೂರೈಕೆ ಕಡಿತವಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಬಾಳೆಲೆ ಹೋಬಳಿ ವ್ಯಾಪ್ತಿಯಲ್ಲಿ 12 ಸೆಂ.ಮೀನಷ್ಟು ಮಳೆ ಸುರಿದಿದೆ. 

ಮಡಿಕೇರಿ ನಗರದಲ್ಲಿ ಬುಧವಾರ ರಾತ್ರಿ ಭಾರಿ ಶಬ್ದದ ಗುಡುಗು, ಸಿಡಿಲುಗಳು ಕೇಳಿ ಬಂದವು. ಮಳೆ ಸಾಧಾರಣವಾಗಿ ಸುರಿಯಿತು. ವಿರಾಜಪೇಟೆಯಿಂದ ಕಾಕೋಟುಪರಂಬುವರೆಗೆ ಹಾಗೂ ಮಡಿಕೇರಿ ತಾಲ್ಲೂಕಿನ ಕಾಟಕೇರಿ ಸೇರಿದಂತೆ ಅನೇಕ ಭಾಗಗಳಲ್ಲಿ ಗುರುವಾರ ಸಂಜೆ ಎದುರಿನಿಂದ ಬರುವ ವಾಹನಗಳು ಕಾಣಿಸದಷ್ಟು ದಟ್ಟವಾದ ಮಂಜು ಕವಿದಿತ್ತು. ಜಿಲ್ಲೆಯ ಎಲ್ಲೆಡೆ ದಿನವಿಡಿ ಮೋಡ ಕವಿದ ವಾತಾವರಣವಿತ್ತು.

ಧಾರವಾಡದ ನಗರ ಬಸ್‌ ನಿಲ್ದಾಣದ (ಸಿಬಿಟಿ) ಬಳಿ ಆಲದ ಮರ ದೊಡ್ಡ ಟೊಂಗೆ ಮುರಿದು ಬಿದ್ದು ಸರಕುಸಾಗಣೆ ವಾಹನ ಮತ್ತು ಎರಡು ದ್ವಿಚಕ್ರ ವಾಹನಗಳು ಜಖಂಗೊಂಡವು. ಹುಬ್ಬಳ್ಳಿ ನಗರದಲ್ಲಿ ಸಾಧಾರಣ ಮಳೆಯಾಯಿತು.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಮೂಡಲಗಿ, ಮುನವಳ್ಳಿಯಲ್ಲಿ ಜೋರಾಗಿ ಮಳೆ ಸುರಿಯಿತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಯಿತು.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಹಲವು ಮರಗಳು ಧರೆಗೆ ಉರುಳಿದವು. ಸಿಡಿಲು ಬಡಿದು ನಾಲ್ಕು ಜಾನುವಾರು ಮೃತಪಟ್ಟಿವೆ.

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ  ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ನೂರಾರು ಮರಗಳ ಕೊಂಬೆಗಳು ಧರೆಗುರುಳಿದರೆ, ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿನ ಬೃಹತ್‌ ಮರದ ಕೊಂಬೆ ಮುರಿದು ಬಿದ್ದು ಹಲವು ಬೈಕ್‌ಗಳು ಜಖಂಗೊಂಡವು.

ಚಾವಣಿ ಬಿದ್ದು ವ್ಯಕ್ತಿ ಸಾವು:

ಯಲಬುರ್ಗಾ ತಾಲ್ಲೂಕಿನ ಸಮೀಪದ ಕಾತ್ರಾಳ ಕ್ರಾಸ್‌ ಬಳಿ ಡಾಬಾದ ಚಾವಣಿ ಮುರಿದು ಬಿದ್ದ ಪರಿಣಾಮ ಕಾರಿನಲ್ಲಿ ಕೂತಿದ್ದ ವ್ಯಕ್ತಿ ಮೃತಪಟ್ಟು, ಹಲವರಿಗೆ ಗಾಯಗೊಂಡರು.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಪಟ್ಟಣ ಸೇರಿದಂತೆ ಸರಗೂರು, ಸಿದ್ಧಾಪುರ ಸುತ್ತಲಿನ ಕೆಲ ಗ್ರಾಮಗಳಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಸಂಜೆ 6 ಗಂಟೆಯ ನಂತರ 30 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ಹೊಲಗದ್ದೆಗಳು ಮತ್ತು ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. 

ಚಾಮರಾಜನಗರ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಗುಡುಗು ಮಿಂಚು ಸಹಿತ ಭರ್ಜರಿ ಮಳೆಯಾಗಿದೆ. 15 ದಿನಗಳಲ್ಲಿ ಸುರಿದ ಮಳೆಗೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಕಾಡಂಚಿನ ಬೇರಂಬಾಡಿ ಕೆಂಪು ಸಾಗರ ಕೆರೆ, ಹೊನ್ನೇಗೌಡನಹಳ್ಳಿ ವಡ್ಡರಗಟ್ಟೆ ಕೆರೆ ಹಾಗೂ ಹಾಲಹಳ್ಳಿ ಅಣೆಕಟ್ಟೆ ತುಂಬಿ ಕೋಡಿ ಬಿದ್ದಿವೆ.

ಚಿಕ್ಕಮಗಳೂರು ವರದಿ: ಜಿಲ್ಲೆಯಲ್ಲಿ ಒಂದು ದಿನ ಬಿಡುವು ನೀಡಿದ್ದ ಮುಂಗಾರು ಪೂರ್ವ ಮಳೆ, ಗುರುವಾರ ಅಲ್ಲಲ್ಲಿ ಸಾಧಾರಣವಾಗಿ ಮಳೆಯಾಗಿದೆ.

ಕಳಸ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ. ನರಸಿಂಹರಾಜಪುರ ತಾಲ್ಲೂಕಿನಲ್ಲಿ ಸಾಧಾರಣ ಮಳೆ ಸುರಿದಿದೆ. ತರೀಕೆರೆ ತಾಲೂಕಿನಲ್ಲೂ ಹಲವೆಡೆ ಸಂಜೆ ಬಳಿಕ ಉತ್ತಮ ಮಳೆಯಾಗಿದೆ.

ಗದಗ ಜಿಲ್ಲೆ ಗಜೇಂದ್ರಗಡದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿದ್ದ ಬೃಹತ್‌ ಮರದ ಕೊಂಬೆ ಗುರುವಾರ ಬೀಸಿದ ಬಿರುಗಾಳಿಗೆ ಬೈಕ್‌ಗಳ ಮೇಲೆ ಮುರಿದು ಬಿದ್ದಿರುವುದು
ಗದಗ ಜಿಲ್ಲೆ ಗಜೇಂದ್ರಗಡದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿದ್ದ ಬೃಹತ್‌ ಮರದ ಕೊಂಬೆ ಗುರುವಾರ ಬೀಸಿದ ಬಿರುಗಾಳಿಗೆ ಬೈಕ್‌ಗಳ ಮೇಲೆ ಮುರಿದು ಬಿದ್ದಿರುವುದು

ಮಹದೇಶ್ವರ ಬೆಟ್ಟದಲ್ಲಿ 9 ಸೆಂ.ಮೀ. ಮಳೆ

ಗುರುವಾರ ಬೆಳಿಗ್ಗೆ 8.30ಕ್ಕೆ ಅನ್ವಯಿಸಿದಂತೆ ಹಿಂದಿನ 24 ಗಂಟೆಗಳಲ್ಲಿ ಕರಾವಳಿಯ ಹಲವು ಕಡೆ, ದಕ್ಷಿಣ ಒಳನಾಡಿನ ಕೆಲವು ಕಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ 9 ಸೆಂ.ಮೀ., ಮೈಸೂರಿನ ಸರಗೂರಿನಲ್ಲಿ 7 ಸೆಂ.ಮೀ. ಮಳೆ ಸುರಿದಿದೆ.

ಚಾಮರಾಜನಗರದ ಬಂಡೀಪುರದಲ್ಲಿ 6 ಸೆಂ.ಮೀ., ಬೇಗೂರು, ಗುಂಡ್ಲುಪೇಟೆ, ಉಡುಪಿಯ ಸಿದ್ಧಾಪುರ, ಕೊಡಗಿನ ಮೂರ್ನಾಡು ಹಾಗೂ ಮೈಸೂರಿನ ಎಚ್‌ಡಿ ಕೋಟೆಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ. ಉಳಿದೆಡೆ ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ.

ಮಳೆ: ಮೀನುಗಾರರಿಗೆ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರವೂ ಮಳೆ ಮುಂದುವರಿಯಲಿದ್ದು, ಕರಾವಳಿಯಲ್ಲಿ ಮಳೆಯ ಜತೆಗೆ ಬಿರುಗಾಳಿಯು 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳ ಜತೆಗೆ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ 40 ಕಿ.ಮೀ.ನಿಂದ 50 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಸ್ಥಳಗಳಲ್ಲಿ ಗುಡುಗುಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಹಾಗೂ ಶಿವಮೊಗ್ಗದ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ 40 ಕಿ.ಮೀ.ನಿಂದ 50 ಕಿ.ಮೀ. ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಇದೇ 30ರವರೆಗೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT