ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ರಜೆ ದಿನ ಕಾರ್ಯ, ದುಪ್ಪಟ್ಟು ಸಂಬಳ: ವೆಂಕಟೇಶನ್ ಸೂಚನೆ

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಸೂಚನೆ
Published 13 ಜೂನ್ 2024, 23:58 IST
Last Updated 13 ಜೂನ್ 2024, 23:58 IST
ಅಕ್ಷರ ಗಾತ್ರ

ಧಾರವಾಡ: ‘ರಾಷ್ಟ್ರೀಯ ರಜೆ (ಗಣರಾಜ್ಯೋತ್ಸವ, ಕಾರ್ಮಿಕರ ದಿನ, ಸ್ವಾತಂತ್ರ್ಯೋತ್ಸವ, ಗಾಂಧೀಜಿ ಜಯಂತಿ...) ದಿನ ಕಾರ್ಯನಿರ್ವಹಿಸಿದ ಪೌರಕಾರ್ಮಿಕರಿಗೆ, ಆ ದಿನಕ್ಕೆ ದುಪ್ಪಟ್ಟು ವೇತನ ನೀಡುವುದು ಕಡ್ಡಾಯ. ನೇರ ಪಾವತಿ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರಿಗೂ ಇದು ಅನ್ವಯಿಸುತ್ತದೆ. ಪಾವತಿಸದಿದ್ದರೆ ಕಾರ್ಮಿಕ ಅಧಿಕಾರಿಗಳು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಜುಲೈನಿಂದಲೇ ಇದನ್ನು ಪಾಲಿಸಬೇಕು. ರಾಷ್ಟ್ರೀಯ ರಜೆ ದಿನ ಕಾರ್ಯನಿರ್ವಹಿಸಿದ ಪೌರಕಾರ್ಮಿಕರಿಗೆ ಆ ದಿನಕ್ಕೆ ದುಪ್ಪಟ್ಟು ಸಂಬಳ ಪಾವತಿಸಲಾಗಿದೆಯೋ? ಇಲ್ಲವೋ? ಎಂದು ಕಾರ್ಮಿಕ ಅಧಿಕಾರಿಗಳು ಪರಿಶೀಲಿಸಬೇಕು. ಪಾವತಿಸದವರಿಗೆ ನೋಟಿಸ್‌ ನೀಡಬೇಕು’ ಎಂದು ನಿರ್ದೇಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ‘ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಅನುಷ್ಠಾನಗೊಳಿಸಲಾಗುವುದು’ ಎಂದರು.

‘ಒಂದು ತಿಂಗಳಿನಿಂದ ತಮಗೆ ವೇತನ ಪಾವತಿಸಿಲ್ಲ. ಕಳೆದ ವರ್ಷ ಮಾಸಿಕ 9,500 ವೇತನ ನೀಡಿದ್ದಾರೆ’ ಎಂದು ಕಲಘಟಗಿ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ಪೌರ ಕಾರ್ಮಿಕರು ಸಭೆಯಲ್ಲಿ ಸಂಕಷ್ಟ ತೋಡಿಕೊಂಡರು.

‘ಇನ್ನು ಎರಡು ದಿನಗಳೊಳಗೆ ಬಾಕಿ ವೇತನ ನೀಡಲಾಗವುದು. ಪೌರಕಾರ್ಮಿಕರಿಗೆ ಬಟ್ಟೆ, ಬೂಟು, ಕೈಗವುಸು ವಿತರಿಸಲಾಗವುದು’ ಎಂದು ಪಟ್ಟಣ ಪಂಚಾಯಿತಿ ಮಖ್ಯಾಧಿಕಾರಿ ಸಭೆಗೆ ತಿಳಿಸಿದರು.

ಕಾರ್ಯನಿರ್ವಹಣೆ ಸ್ಥಳದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಯಾರಾದರೂ ಕಿರುಕುಳ, ದೌರ್ಜನ್ಯ ನೀಡಿದರೆ ಅವರು ಯಾರಿಗೆ ತಿಳಿಸಬೇಕು? ಅದಕ್ಕೆ ಏನಾದರೂ ಪರಿಹಾರ ಇದೆಯೇ’ ಎಂದು ಎಂ. ವೆಂಕಟೇಶನ್ ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಈಶ್ವರ ಉಳ್ಳಾಗಡ್ಡಿ, ‘ಲೈಂಗಿಕ ದೌರ್ಜನ್ಯ ನಿಗ್ರಹ ಸಮಿತಿ ರಚಿಸಲಾಗಿದೆ. ಕಾರ್ಯನಿರ್ವಹಣೆ ಸ್ಥಳದಲ್ಲಿ ಯಾರಾದರೂ ಕಿರುಕುಳ ನೀಡಿದರೆ ಸಮಿತಿಗೆ ತಿಳಿಸಬಹುದು’ ಎಂದು ತಿಳಿಸಿದರು.

‘ಸಮಿತಿಯ ಕಾರ್ಯಗಳು, ಸಮಿತಿಯವರ ದೂರವಾಣಿ ಸಂಖ್ಯೆಗಳ ಫಲಕಗಳನ್ನು ಸ್ಥಳೀಯ ಸಂಸ್ಥೆಗಳ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ತಿಂಗಳಿಗೊಮ್ಮೆ ಸಭೆ ನಡೆಸಬೇಕು’ ಎಂದು ಎಂ. ವೆಂಕಟೇಶನ್‌ ಸೂಚನೆ ನೀಡಿದರು.

ಕರ್ನಾಟಕ ವೈದ್ಯಕೀ‌ಯವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ಪೌರಕಾರ್ಮಿಕರಿಗೆ ಉಪಹಾರ ನೀಡುತ್ತಿಲ್ಲ ಎಂದು ಹನುಮಂತಪ್ಪ ಸಭೆಗೆ ತಿಳಿಸಿದರು. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಕಡ್ಡಾಯವಾಗಿ ನೀಡಬೇಕು. ಇಂಥ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ವೆಂಕಟೇಶನ್‌ ತಿಳಿಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳಿಗೆ 25 ಕಡೆ ಮಾತ್ರ ವಿಶ್ರಾಂತಿ ಕೊಠ‌ಡಿ ನಿರ್ಮಿಸಲಾಗಿದೆ. ಅವಗಳನ್ನು ಪೌರಕಾರ್ಮಿಕರಿಗೆ ಬಳಕೆಗೆ ನೀಡಿಲ್ಲ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರಕಾರ್ಮಿಕ‌ರು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯ್‌ ಗುಂಟ್ರಾಳ ಸಭೆಗೆ ತಿಳಿಸಿದರು.

‘17 ಕಡೆ ವಿಶ್ರಾಂತಿ ಕೊಠಡಿ ಚಾಲ್ತಿಯಲ್ಲಿವೆ. ಇನ್ನು ಎಂಟು ಕಡೆ ನೀರಿನ ಸಮಸ್ಯೆ ಇದೆ. 15 ದಿನಗಳಲ್ಲಿ ಆ ಎಂಟು ಕೊಠಡಿಗಳಲ್ಲೂ ನೀರಿನ ಸೌಕರ್ಯ ಕಲ್ಪಿಸಿ ಬಳಕೆಗೆ ನೀಡಲಾಗುವುದು’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಪಾಲ್ಗೊಂಡಿದ್ದರು.

ಧಾರವಾಡದಲ್ಲಿ ಗುರುವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಪೌರಕಾರ್ಮಿಕರು ಅಧಿಕಾರಿಗಳು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ಗುರುವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಪೌರಕಾರ್ಮಿಕರು ಅಧಿಕಾರಿಗಳು ಪ್ರಜಾವಾಣಿ ಚಿತ್ರ

ಸಭೆಯಲ್ಲಿ ಚರ್ಚಿಸಿದ ವಿಷಯಗಳು

* ಪೌರಕಾರ್ಮಿಕರಿಗೆ ಬಟ್ಟೆ, ಬೂಟು, ಕೈಗವುಸು ವಿತರಿಸಬೇಕು

* ಕನಿಷ್ಠ ವೇತನ ನೀಡುವುದು ಕಡ್ಡಾಯ

* ಗೃಹಭಾಗ್ಯ ಯೋಜನೆಯಡಿ ಹೊರಗುತ್ತಿಗೆ ಪೌರಕಾರ್ಮಿಕರಿಗೂ ವಸತಿ ಕಲ್ಪಿಸಬೇಕು

* ಗುಣಮಟ್ಟದ ಪೌಷ್ಟಿಕ ಉಪಹಾರ ವಿತರಿಸಬೇಕು

* ಪೌರಕಾರ್ಮಿಕರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು

* ಹೊರಗುತ್ತಿಗೆ, ನೇರ ಪಾವತಿ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು

* ಸಂಕಷ್ಟ ಭತ್ಯೆಯನ್ನು ಪಾವತಿಸಬೇಕು

* ಕನಿಷ್ಠ ವೇತನ ಪಾವತಿಸಬೇಕು

* ಪೌರಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು

* ಪೌ‌ರಕಾರ್ಮಿಕರಿಗೆ ಎರಡು ಸ್ಟೀಲ್‌ ಬಾಕ್ಸ್, ನೀರಿನ ಬಾಟಲಿ ವಿತರಿಸಬೇಕು

ಪೌರಕಾರ್ಮಿಕರು ಸಮಸ್ಯೆಗಳಿದ್ದರೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಕಚೇರಿ ದೂ: 011 24648924 ಅಥವಾ ncsk.nic.in ವೆಬ್‌ಸೈಟ್‌ ಸಂಪರ್ಕಿಸಬಹದು ಎಂ. ವೆಂಕಟೇಶನ್‌ ಅಧ್ಯಕ್ಷ ಸಫಾಯಿ ಕರ್ಮಚಾರಿಗಳ ಆಯೋಗ

ಮಾತೃತ್ವ ಮೆಡಿಕಲ್‌ ಬೋನಸ್‌ ಪಾವತಿಗೆ ಸೂಚನೆ

ಮಹಿಳಾ ಪೌರಕಾರ್ಮಿಕರಿಗೆ ಮಾತೃತ್ವ ಮೆಡಿಕಲ್‌ ಬೋನಸ್‌ ಪಾವತಿಸಿಲ್ಲ. ಮೆಡಿಕ2018ರಿಂದ ಈವರೆಗೆ 868 ಮಹಿಳೆಯರಿಗೆ (ತಲಾ ₹ 2500) ಒಟ್ಟು ₹ 21.70 ಲಕ್ಷ ಪಾವತಿ ಬಾಕಿ ಇದೆ ಎಂದು ಮಹಿಳೆಯೊಬ್ಬರು ಸಭೆಗೆ ತಿಳಿಸಿದರು. ಮಾತೃತ್ವ ಮೆಡಿಕಲ್‌ ಬೋನಸ್‌ ಅನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚನೆ ನೀಡಿದರು. ವಾರದೊಳಗೆ ಬಿಡುಗಡೆ ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಅಧಿಕಾರಿಗೆ ಅವರು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT