ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಿ ನಿರಾಕರಣೆ, ನಿರ್ಲಕ್ಷ್ಯ; ನೇಹಾ ಕೊಲೆ: ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ

Published 10 ಜುಲೈ 2024, 22:30 IST
Last Updated 10 ಜುಲೈ 2024, 22:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಎರಡು ವರ್ಷದಿಂದ ಪ್ರೀತಿಸುತ್ತಿದ್ದ ನೇಹಾ ಹಿರೇಮಠ, ಮನಸ್ತಾಪದಿಂದ ದೂರವಾಗಿ, ನಿರ್ಲಕ್ಷಿಸಿದ್ದಕ್ಕೆ ಬೆಳಗಾವಿಯ ಸವದತ್ತಿಯ ಫಯಾಜ್‌ ಖೊಂದುನಾಯ್ಕ ಹತಾಶನಾಗಿ ಚಾಕು ಇರಿದು ಕೊಲೆ ಮಾಡಿದ್ದಾನೆ’ ಎಂದು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಸಿಐಡಿ ಡಿವೈಎಸ್‌ಪಿ ಮನೋಹರ ಎಚ್. ಪೈಕ್ ಅವರು ಇಲ್ಲಿನ ಒಂದನೇ ಹೆಚ್ಚುವರಿ ಸೆಷನ್ಸ್‌ ಮತ್ತು 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ 483 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಕೊಲೆಗೆ ಕಾರಣ ವಿವರಿಸಲಾಗಿದೆ. ತನಿಖೆ ನಡೆಸಿದ ಅಧಿಕಾರಿಗಳು ಫಯಾಜ್‌ ಒಬ್ಬನನ್ನೇ ಆರೋಪಿಯನ್ನಾಗಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿ, ಸಿಸಿಟಿವಿ ಕ್ಯಾಮೆರಾ ದೃಶ್ಯ, ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರ, ತಜ್ಞರ ಅಭಿಪ್ರಾಯ, ಸಾಕ್ಷ್ಯಾಧಾರ ಸಹಿತ ವರದಿ ಸಲ್ಲಿಸಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ಏನಿದೆ?: 2020/21ರಲ್ಲಿ ನೇಹಾ ಪಿಸಿ ಜಾಬಿನ್‌ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದಾಗ, ಫಯಾಜ್‌ ಸಹಪಾಠಿಯಾಗಿದ್ದ. ಸ್ನೇಹಿತರಾಗಿದ್ದ ಇವರು 2022 ರಲ್ಲಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು.  2024ರ ಮಾರ್ಚ್‌ನಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿತ್ತು. ನೇಹಾ ನಿರ್ಲಕ್ಷ್ಯ ತೋರುತ್ತಿರುವುದರಿಂದ ಹತಾಶಗೊಂಡ ಆತ, ಕೊಲೆ ಮಾಡಲು ನಿರ್ಧರಿದ. ಎಪ್ರಿಲ್‌ 15ರಂದು ಧಾರವಾಡದಲ್ಲಿ ಟೊಪ್ಪಿ, ಮಾಸ್ಕ್‌ ಮತ್ತು ಚಾಕು ಖರೀದಿಸಿದ. ಎಪ್ರಿಲ್‌ 18ರಂದು ಸಂಜೆ 4.40ಕ್ಕೆ ನೇಹಾ ಬಿವಿಬಿ ಕಾಲೇಜಿನಿಂದ ಹೊರಬರುವ ವೇಳೆ ಅಡ್ಡಗಟ್ಟಿದ. ‘ಇಷ್ಟು ದಿನ ಪ್ರೀತಿಸಿ, ಈಗ ಮೋಸ ಮಾಡುತ್ತೀಯಾ’ ಎಂದು ಮನಸ್ಸೋ ಇಚ್ಛೆ ಚಾಕು ಇರಿದಿದ್ದಾನೆ. ನಂತರ ಅಲ್ಲಿಯೇ ಚಾಕು ಬಿಟ್ಟು ಪರಾರಿಯಾಗಿದ್ದು ತನಿಖೆಯಿಂದ ದೃಢಪಟ್ಟಿದೆ. ಕಲಂ 302, 341 ಮತ್ತು 506 ಅಡಿ  ಆರೋಪಿ ಶಿಕ್ಷಾರ್ಹ ಅಪರಾಧ ಎಸಗಿದ್ದಾನೆ’ ಎಂದು ಉಲ್ಲೇಖಿಸಲಾಗಿದೆ.

ದೋಷಾರೋಪ ಪಟ್ಟಿ ಸಿಕ್ಕಿಲ್ಲ: ‘ದೋಷಾರೋಪ ಪಟ್ಟಿ ಇನ್ನೂ ನನಗೆ ಸಿಕ್ಕಿಲ್ಲ. ಆದರೆ, ನ್ಯಾಯಾಲಯಕ್ಕೆ ಪಟ್ಟಿ ಸಲ್ಲಿಕೆಯಾದ ನಂತರದ ಬೆಳವಣಿಗೆ ಗಮನಿಸಿದರೆ ಕೆಲ ಅನುಮಾನಗಳು ಕಾಡುತ್ತಿವೆ. ಒಬ್ಬನನ್ನೇ ಆರೋಪಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಪಟ್ಟಿಯಲ್ಲಿ ಯಾವ ಅಂಶಗಳನ್ನು ಸೇರಿಸಲಾಗಿದೆ? ಯಾವುದನ್ನು ಕೈ ಬಿಟ್ಟಿದ್ದಾರೆ ಎಂಬುದು ಗೊತ್ತಾಗಿಲ್ಲ’ ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ಆರೋಪಿಗಳನ್ನು ಕೈಬಿಟ್ಟು ಕಾಣದ ಕೈಗಳು ಕೆಲಸ ಮಾಡಿದ್ದರೆ, ಮಗಳ ಸಾವಿಗೆ ನ್ಯಾಯ ಸಿಗುವುದಿಲ್ಲ. ನನ್ನ ಬಳಿ ಇರುವ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿ, ನ್ಯಾಯ ಕೇಳುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT