ಹುಬ್ಬಳ್ಳಿ: ‘ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ರಾಜು ಅನಂತಸಾ ನಾಯಕವಾಡಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನಲ್ಲಿದ್ದಾಗ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಹಲವು ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ‘ಬಿ’ ಫಾರಂ ನೀಡಲಿಲ್ಲ ಎಂದರು.
ಇದರಿಂದ ನನ್ನ ಬೆಂಬಲಿಗರು, ಮುಖಂಡರು ಬೇಸರಗೊಂಡಿದ್ದು, ಎಲ್ಲರ ಅಭಿಪ್ರಾಯ ಪಡೆದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. 2019ರ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, 4,426 ಮತಗಳನ್ನು ಪಡೆದಿದ್ದೆ ಎಂದು ತಿಳಿಸಿದರು.
ಈ ಬಾರಿ ಎನ್‌ಸಿಪಿ ಸೇರಿದಂತೆ ಹಲವು ಪಕ್ಷಗಳು ನನ್ನನ್ನು ಸಂಪರ್ಕಿಸಿದ್ದು, ಯಾವ ಪಕ್ಷಕ್ಕೂ ಸೇರುವುದಿಲ್ಲ. ಈಗಾಗಲೇ ಚುನಾವಣೆಗಾಗಿ ಸಿದ್ಧತೆ ಆರಂಭಿಸಿದ್ದೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.