ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘20 ವರ್ಷದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯ ಫಲ’

ಭಗಿನಿ ನಿವೇದಿತಾ ವಿದ್ಯಾಲಯದ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
Last Updated 7 ಫೆಬ್ರುವರಿ 2023, 13:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದರೆ, ಅದರ ಫಲ ಇಂದು ನೋಡಬಹುದಿತ್ತು. ಇದೀಗ ಆ ನೀತಿ ಜಾರಿಯಾಗಿದ್ದು, ಮುಂದಿನ ಇಪ್ಪತ್ತು ವರ್ಷಗಳ ನಂತರ ಫಲ ದೊರೆಯಲಿದೆ’ ಎಂದು ಆರ್‌ಎಸ್‌ಎಸ್‌ ಅಖಿಲ‌ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಇಲ್ಲಿನ ನವನಗರದ ಭಗಿನಿ ನಿವೇದಿತಾ ವಿದ್ಯಾಲಯದ ಆವರಣದಲ್ಲಿ ಮಂಗಳವಾರ ನೂತನ ಶಾಲಾ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ದೇಶದ ಮಣ್ಣಿಗೆ ಅನುಗುಣವಾದ ಶಿಕ್ಷಣ ಮಕ್ಕಳಿಗೆ ದೊರೆಯುವಂತಾಗಬೇಕು. ಸಂಸ್ಕೃತಿ, ಸಂಸ್ಕಾರದ ಸೊಗಡು ಅದರಲ್ಲಿದ್ದು, ಮಾನವೀಯತೆ, ಮನುಷ್ಯತ್ವ ಬಡಿದೆಬ್ಬಿಸುವಂತಿರಬೇಕು. ಅದು ಜೀವನದ ಶಿಕ್ಷಣವಾಗಿರಬೇಕು. ಆದರೆ, ಸಾಕ್ಷರತೆ ಹೆಸರಲ್ಲಿ ರಾಕ್ಷಸರನ್ನು ತಯಾರು ಮಾಡಲಾಗಿದೆ. ಅವರಿಗೆ ಅಕ್ಷರ ಜ್ಞಾನ ಸಿಕ್ಕಿದೆಯೇ ಹೊರತು ಬದುಕಿನ ವಿದ್ಯೆ ದೊರಕಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದವರೆಲ್ಲ ಶಿಕ್ಷಣ ಪಡೆದವರೇ ಆಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ನವನಗರ ಹೊಸದಾಗಿ ವಿಕಾಸವಾದ ಆರಂಭದಲ್ಲಿ, ಮನೆಯ ಕೋಣೆಯೊಂದು ಬಾಡಿಗೆ ಪಡೆದು ಶಿಕ್ಷಣ ನೀಡಲಾಗುತ್ತಿತ್ತು. ಆರಂಭದಲ್ಲಿ ಆರು ವಿದ್ಯಾರ್ಥಿಗಳಿದ್ದು, ಅವರಿಂದ ತಲಾ ಮೂರು ರೂಪಾಯಿ ಪಡೆದು ಶಾಲೆ ನಡೆಸುತ್ತಿದ್ದರು. ನಿರ್ವಹಣೆ ಅಸಾಧ್ಯವಾದಾಗ ಮನೆಮನೆಗೆ ಹೋಗಿ ಭಿಕ್ಷೆ ಎತ್ತಿ, ಖರ್ಚುವೆಚ್ಚ ಹೊಂದಿಸುತ್ತಿದ್ದರು. ಈ ಭಗಿನಿ ನಿವೇದಿತಾ ವಿದ್ಯಾಲಯಕ್ಕೆ ದೊಡ್ಡ ಚರಿತ್ರೆಯಿದ್ದು, 500ಕ್ಕೂ ಹೆಚ್ಚು ಮಕ್ಕಳು ಈಗ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೂತನ ಶಾಲಾ ಕಟ್ಟಡದ ಕಾಮಗಾರಿಗೆ ಅನೇಕರು ಸಹಾಯ ಮಾಡಲು ಮುಂದೆ ಬಂದಿದ್ದು, ಒಂದು ವರ್ಷದ ಅವಧಿಯಲ್ಲಿ ಕಟ್ಟಡ ಉದ್ಘಾಟನೆಯಾಗಲಿ’ ಎಂದು ಆಶಿಸಿದರು.

ಶಾಸಕ ಜಗದೀಶ ಶೆಟ್ಟರ್, ‘ಸಮಾಜ ಪರಿವರ್ತನೆಯಾಗಲು ಸಂಸ್ಕಾರಯುತ ಶಿಕ್ಷಣ ಅಗತ್ಯ. ರಾಷ್ಟ್ರೀಯತೆ ಕಲ್ಪನೆಯಲ್ಲಿ ನೆಲದ ಮಣ್ಣಿನ ಸಂಸ್ಕೃತಿಯಡಿ ಮಕ್ಕಳಿಗೆ ಶಿಕ್ಷಣ ನೀಡುವವಲ್ಲಿ ಶ್ರಮಿಸಬೇಕು. ಮೆಕಾಲೆ ಶಿಕ್ಷಣ ಪದ್ಧತಿ ಬದಲಾವಣೆಯಾಗಬೇಕು ಎನ್ನುವ ಕೂಗು ಅನೇಕ ವರ್ಷಗಳಿಂದ ಇತ್ತು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಅದು ಈಡೇರಿದೆ’ ಎಂದರು.

ಸಚಿವ ಹಾಲಪ್ಪ ಆಚಾರ, ಶಾಸಕ ಅರವಿಂದ ಬೆಲ್ಲದ, ಉದ್ಯಮಿಗಳಾದ ಮಹಾದೇವ ಕರಮರಿ, ವಿ.ಎಸ್.ವಿ. ಪ್ರಸಾದ್ ಮಾತನಾಡಿದರು. ಮೇಯರ್ ಈರೇಶ ಅಂಚಟಗೇರಿ, ಗುರುಪಾದಪ್ಪ ಢಗೆ, ವಿಜಯಾನಂದ ಶೆಟ್ಟಿ, ಗೋವರ್ಧನ ರಾವ್, ಜಿ.ಎಲ್. ರಾಜವಂಶಿ ಇದ್ದರು.

‘ಕಾಮಗಾರಿ ಗುತ್ತಿಗೆ ನೀಡಿಲ್ಲ’

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಶಾಲಾ ಕಟ್ಟಡ ಇದು. ಕಾಮಗಾರಿಯನ್ನು ಯಾರಿಗೂ ಗುತ್ತಿಗೆ ನೀಡಿಲ್ಲ. ಯೋಜನಾಬದ್ಧವಾಗಿ ಕಾಮಗಾರಿ ನಡೆಸಲು ಎಂಜಿನಿಯರ್ ಅವರ ಸಹಾಯ ಪಡೆಯುತ್ತಿದ್ದೇವೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಭಗಿನಿ ನಿವೇದಿತಾ ಶಾಲೆಯ ಪ್ರಮುಖ ನರೇಂದ್ರ ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT