ವಾಹನ ಸವಾರರಿಗೆ ದುಃಸ್ವಪ್ನವಾದ ರಸ್ತೆ ಗುಂಡಿ

7
ಮಳೆ ನಿಂತ ತಕ್ಷಣ ಆರಂಭವಾಗಲಿದೆ ₹ 3 ಕೋಟಿ ಮೊತ್ತದ ರಸ್ತೆ ದುರಸ್ತಿ ಕಾಮಗಾರಿ

ವಾಹನ ಸವಾರರಿಗೆ ದುಃಸ್ವಪ್ನವಾದ ರಸ್ತೆ ಗುಂಡಿ

Published:
Updated:
Deccan Herald

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ, ಬಿಆರ್‌ಟಿಎಸ್‌ ಯೋಜನೆ ಕುರಿತು ‘ಸುಂದರ’ ಕಲ್ಪನೆಗಳನ್ನಿಟ್ಟುಕೊಂಡು ನಗರಕ್ಕೆ ಬರುವವರಿಗೆ ಇಲ್ಲಿನ ಕಿತ್ತೂರು ಚನ್ನಮ್ಮ ವೃತ್ತ ಹಾಗೂ ಹಳೇ ಬಸ್‌ ನಿಲ್ದಾಣದ ಎದುರಿನ ಗುಂಡಿಮಯ ರಸ್ತೆಗಳು ಹುಬ್ಬಳ್ಳಿಯ ‘ದುರಂತ ಸ್ಥಿತಿ’ಯ ದರ್ಶನ ಮಾಡಿಸುತ್ತಿವೆ.

ಒಂದು ತಿಂಗಳಿಂದೀಚೆಗೆ ಈ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ಬಸ್‌, ಖಾಸಗಿ ವಾಹನ ಹಾಗೂ ಬೈಕ್‌ಗಳಲ್ಲಿ ಸಂಚರಿಸುವವರು ಜೀವ ಕೈಯಲ್ಲಿ ಹಿಡಿದುಕೊಂಡೇ ಪ್ರಯಾಣಿಸಬೇಕಿದೆ. ಬಿಆರ್‌ಟಿಎಸ್‌ ಕಾಮಗಾರಿ ನಡೆಯುತ್ತಿರುವುದರಿಂದ ಬಸವ ಬನದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲು ತೋಡಿದ ಗುಂಡಿಗಳನ್ನು ಮುಚ್ಚದ ಕಾರಣ ಇಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.

ಬಸವ ವನ ದಾಟಿದ ಕೂಡಲೇ ವಾಹನಗಳು ಗಡ ಗಡ ಎನ್ನಲು ಶುರು ಮಾಡುತ್ತವೆ. ಅಯೋಧ್ಯಾ ಹೋಟೆಲ್‌ ಎದುರಿನ ರಸ್ತೆಯಲ್ಲಿ ಆಳವಾದ ಗುಂಡಿಗಳಿರುವುದರಿಂದ ಆ ರಸ್ತೆಯಲ್ಲಿ ಸಾಗುವುದೇ ದುಸ್ತರ ಎನಿಸಿದೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದ ಮೂಲಕ ಬಸ್ ನಿಲ್ದಾಣದತ್ತ ಹೊರಡೋಣವೆಂದರೆ ಐದಾರು ಅಪಾಯಕಾರಿ ತಗ್ಗುಗಳು ಎದುರಾಗುತ್ತವೆ ಎನ್ನುತ್ತಾರೆ ಗೋಪನಕೊಪ್ಪದ ನಿವಾಸಿ ರಮೇಶ ನಾಯ್ಕರ್.

ಬಸ್‌ಗಳು ನಿಲ್ದಾಣದತ್ತ ಹೊರಡಲು ಸರ್ಕಸ್‌ ಮಾಡುತ್ತಿದ್ದರೆ, ಅವುಗಳ ಹಿಂದೆ, ಮುಂದೆ ಇರುವ ಆಟೊಗಳು, ಕಾರು, ಬೈಕುಗಳು ತಗ್ಗಿನಲ್ಲಿ ಇಳಿಯಲು ಮನಸ್ಸು ಮಾಡುವುದಿಲ್ಲ! ಆದರೆ, ತಗ್ಗು ಇಳಿಯದ ಹೊರತು ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ ಇದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಮಳೆ ಸುರಿಯುತ್ತಿರುವುದರಿಂದ ರಸ್ತೆ ದುರಸ್ತಿ ಕಾರ್ಯವನ್ನು ಮುಂದೂಡಲಾಗಿದೆ. ಮಳೆ ಕಡಿಮೆಯಾದ ಬಳಿಕ ಬಿಆರ್‌ಟಿಎಸ್‌ ಸಂಸ್ಥೆಯವರು ಪಕ್ಕಾ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಲಿದ್ದಾರೆ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಸುಧೀರ ಸರಾಫ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ಕೋಟಿ ವೆಚ್ಚದಲ್ಲಿ ದುರಸ್ತಿ: ಮೇಯರ್‌

ನಗರದ ಪ್ರಮುಖ ರಸ್ತೆಗಳ ದುರಸ್ತಿಗಾಗಿ ₹ 3 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಕರೆದು ಕಾರ್ಯಾದೇಶವನ್ನೂ ನೀಡಲಾಗಿದೆ. ಬಿಸಿಲು ಬಿದ್ದ ಬಳಿಕ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಮೇಯರ್‌ ಸುಧೀರ ಸರಾಫ ತಿಳಿಸಿದರು.

ನಗರದ ರಸ್ತೆಗಳ ದುಃಸ್ಥಿತಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಮಳೆ ನಿಂತ ತಕ್ಷಣವೇ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಜೊತೆಗೆ ನಮ್ಮದೇ ಅತ್ಯಾಧುನಿಕ ರಸ್ತೆ ದುರಸ್ತಿ ಯಂತ್ರವಿದೆ. ಅದನ್ನು ಬಳಸಿ ತುರ್ತು ಕೆಲಸಗಳನ್ನು ಮುಗಿಸಲಿದ್ದೇವೆ. ನೀಲಿಜಿನ್‌ ರಸ್ತೆ ಸಾಕಷ್ಟು ಕೆಟ್ಟು ಹೋಗಿದ್ದು ನಮ್ಮ ಗಮನದಲ್ಲಿದೆ. ಆದರೆ, ಅಲ್ಲಿ ಕೇಂದ್ರ ರಸ್ತೆ ನಿಧಿಯಡಿ ಸಿಮೆಂಟ್‌ ರಸ್ತೆ ನಿರ್ಮಾಣವಾಗಲಿದೆ. ಹೀಗಾಗಿ, ನಾವು ನಾಲ್ಕೈದು ಲಕ್ಷ ಖರ್ಚು ಮಾಡಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದರೂ, ಸಿಮೆಂಟ್‌ ರಸ್ತೆ ಹಾಕುವಾಗ ಅದನ್ನು ತೆರವುಗೊಳಿಸಬೇಕಾಗುತ್ತದೆ. ಆದ್ದರಿಂದ ಬೇರೆಡೆ ರಸ್ತೆ ದುರಸ್ತಿ ಮಾಡುತ್ತಿದ್ದೇವೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !