ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಜನರಲ್ಲಿ ಪ್ರಭಾವ ಬೀರಿದೆ: ಗೋವಿಂದ

ರಕ್ಷಾ ಬಂಧನ ಉತ್ಸವದಲ್ಲಿ ಕ್ಷೇತ್ರ ಬೌದ್ಧಿಕ ಪ್ರಮುಖ ಗೋವಿಂದ ಅಭಿಮತ
Last Updated 12 ಆಗಸ್ಟ್ 2022, 14:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮಾಡಿದಷ್ಟು ಅಪಪ್ರಚಾರ ಜಗತ್ತಿನ ಇನ್ಯಾವ ಸಂಘಕ್ಕೂ ಮಾಡಿಲ್ಲ. ಆದರೂ ಸಂಘದ ತತ್ವ, ಸಿದ್ಧಾಂತಗಳು ಸಂಘವನ್ನು ಮತ್ತಷ್ಟು ಬೆಳೆಯುವಂತೆ ಮತ್ತು ಜನರಲ್ಲಿ ಪ್ರಭಾವ ಬೀರುವಂತೆ ಮಾಡಿದೆ’ ಎಂದು ಆರ್‌.ಎಸ್‌.ಎಸ್‌. ಕ್ಷೇತ್ರ ಬೌದ್ಧಿಕ ಪ್ರಮುಖ ಗೋವಿಂದ ಹೇಳಿದರು.

ನಗರದ ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸ್ವಯಂ ಸೇವಕ ಸಂಘ ಎಂದರೇನು ಎನ್ನುವುದು ಸಂಘದ ಸ್ವಯಂ ಸೇವಕರಿಗಿಂತ ಪ್ರಪಂಚಕ್ಕೆ ಹೆಚ್ಚು ತಿಳಿದಿದೆ. ಸಂಘಕ್ಕೆ ಬರುವವರ ಹೃದಯದಲ್ಲಿ ದೇಶ ನನ್ನದು, ಇಲ್ಲಿರುವವರೆಲ್ಲರೂ ನನ್ನವರು ಎನ್ನುವ ಅತೀತ ಭಾವ ಹುಟ್ಟಿಕೊಳ್ಳುತ್ತದೆ. ಸಂಘವನ್ನೇ ನಿರ್ನಾಮ ಮಾಡುತ್ತೇನೆ ಎಂದವರು, ಕೊನೆಗೆ ಸಂಘವನ್ನು ಗೌರವಿಸಿ, ಸೋಲೊಪ್ಪಿಕೊಂಡಿದ್ದಾರೆ. ಇದು ಸಂಘದ ತಾಕತ್ತು’ ಎಂದರು.

‘ಸಹ ಬಹುತ್ವ ರಕ್ಷಾ ಬಂಧನದ ಸಂದೇಶ. ಸಹೋದರ, ಸಹೋದರಿಯರಿಗೆ ರಕ್ಷೆ ಕಟ್ಟಿ, ಪ್ರೀತಿಯಿಂದ ಮಾತನಾಡಿ, ಆತ್ಮೀಯತೆ ಬೆಳೆಸಿಕೊಳ್ಳಬೇಕು. ಅದು ಸಮಾಜದಲ್ಲಿ ಭಾವನಾತ್ಮಕತೆ ಬೆಳೆಸುತ್ತದೆ. ಒಡಹುಟ್ಟಿದವರಿಗಷ್ಟೇ ರಕ್ಷೆ ಕಟ್ಟಬೇಕು ಎಂದೇನಿಲ್ಲ, ಸ್ತ್ರೀ ಯಾರಿಗೆ ಬೇಕಾದರೂ ಕಟ್ಟಬಹುದು. ಮಾತೃತ್ವದ ಸ್ವಭಾವ ಸ್ತ್ರೀಯರಿಗೆ ಇರುವ ವಿಶೇಷ ಗುಣ. ಮಕ್ಕಳಿಗೆ ಯಾವ ಸಮಯದಲ್ಲಿ ಏನು ಅಗತ್ಯವಿದೆ, ಅದನ್ನು ಹೇಗೆ ಪೂರೈಸಬೇಕು ಎನ್ನುವುದು ಅವಳಿಗೆ ಮಾತ್ರ ಗೊತ್ತು. ಅವಳ ರಕ್ಷಣೆಯಲ್ಲಿ ಸಮಾಜ ನಿರತವಾಗಿದೆ ಎನ್ನುವುದೇ ರಕ್ಷಾ ಬಂಧನದ ಸಾರ’ ಎಂದರು.

ಜೇಷ್ಠ ಪ್ರಚಾರಕ ಸು. ರಾಮಣ್ಣ, ಸಂಘ ಚಾಲಕ ಶಿವಾನಂದ ಆವಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿತೇಂದ್ರ ನಾಯಕ, ಸುಧಾಕರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT