ಭಾನುವಾರ, ಫೆಬ್ರವರಿ 28, 2021
31 °C

‘ಸಾಮ್ರಾಟ್ ಅಶೋಕ’ ನಾಟಕ ಪ್ರದರ್ಶನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನೂಪುರ ನೃತ್ಯ ವಿಹಾರದ ಸಂಸ್ಥಾಪಕ ಅಧ್ಯಕ್ಷ ವಿದ್ವಾನ್ ಬಿ. ನಾಗರಾಜ ಅವರ ಪುಣ್ಯ ಸ್ಮರಣೆ ಅಂಗವಾಗಿ, ಧಾರವಾಡದ ರಂಗಾಯಣದ ಸಹಯೋಗದೊಂದಿಗೆ, ರೆಪರ್ಟಿ ಕಲಾವಿದರು ಅಭಿನಯಿಸಿರುವ ‘ಸಾಮ್ರಾಟ್ ಅಶೋಕ’ ನಾಟಕ ಪ್ರದರ್ಶನವು ಜ.‌ 26ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಸಂಜೆ 5.30ಕ್ಕೆ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರಲಿದೆ.

‘ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನಾಟಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಅತಿಥಿಗಳಾಗಿ ರಂಗಾಯಣ ಆಡಳಿತಾಧಿಕಾರಿ ಗೋಪಾಲಕೃಷ್ಣ ಬಿ., ಸಾಹಿತಿಗಳಾದ ಬಾಳಣ್ಣ ಶಿಗೇಹಳ್ಳಿ, ಸುಭಾಷ ನರೇಂದ್ರ, ಎ.ಎಲ್. ಹಿರೇಮಠ ಹಾಗೂ ಅಧ್ಯಕ್ಷತೆಯನ್ನು ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ವಹಿಸಲಿದ್ದಾರೆ’ ಎಂದು ವಿಹಾರದ ಅಧ್ಯಕ್ಷ ಎಸ್‌.ಎಸ್. ಕಿರಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು‌.

ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ‘ದಯಾಪ್ರಕಾಶ ಸಿನ್ಹಾ ಅವರು ಹಿಂದಿಯಲ್ಲಿ ಬರೆದಿರುವ ‘ಸಾಮ್ರಾಟ ಅಶೋಕ’ ನಾಟಕವನ್ನು ಧಾರವಾಡದ ಆಕಾಶವಾಣಿಯ ಉದ್ಘೋಷಕ ಶಶಿಧರ ನರೇಂದ್ರ ಕನ್ನಡಕ್ಕೆ ಅನುವಾದಿಸಿದ್ದಾರೆ. ದೆಹಲಿಯ ವೀಣಾ ಶರ್ಮಾ (ಭೂಸನೂರಮಠ) ನಿರ್ದೇಶನ ಮಾಡಿದ್ದಾರೆ. ಜನಪ್ರಿಯಗೊಳ್ಳುತ್ತಿರುವ ಈ ನಾಟಕದ ಪ್ರದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬೇಡಿಕೆ ಬಂದಿದೆ’ ಎಂದರು.

25 ಮಂದಿ ಸಮಿತಿ ರಚನೆ: ‘ಛತ್ರಪತಿ ಶಿವಾಜಿ ಅವರ ಜೀವನ ಆಧರಿತ ‘ಝಣತಾ ರಾಜಾ’ ನಾಟಕದ ಮಾದರಿಯಲ್ಲಿ, ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಕುರಿತು ನಾಟಕ ಸಿದ್ಧಪಡಿಸುವ ಯೋಜನೆಯನ್ನು ರಂಗಾಯಣ ಹೊಂದಿದೆ. ಅದಕ್ಕೆ ಪೂರಕವಾಗಿ ಐತಿಹಾಸಿಕ ದಾಖಲೆ ಸಂಗ್ರಹ ಹಾಗೂ ಪರಾಮರ್ಶೆಗಾಗಿ ತಲಾ ಐವರು ಸಾಹಿತಿಗಳು, ರಂಗಕರ್ಮಿಗಳು, ಇತಿಹಾಸಕಾರರು ಹಾಗೂ 10 ಮಠಾಧೀಶರನ್ನೊಳಗೊಂಡ ಸಮಿತಿ ರಚಿಸಲಾಗುವುದು’ ಎಂದು ಹೇಳಿದರು.

‘ವರದಿಗೆ ಅಂಜಿ ಯೋಜನೆ ಕೈಬಿಟ್ಟೆ’: ನನೆಗುದಿಗೆ ಬಿದ್ದ ಯೂ ಟ್ಯೂಬ್ ಚಾನೆಲ್ ಯೋಜನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರವಿನಾಯ್ಕರ, ‘ರಾಜ್ಯದ ಮೂರು ರಂಗಾಯಣಗಳಲ್ಲಿ ಇರುವಂತೆ ಧಾರವಾಡದಲ್ಲೂ ಸ್ಟುಡಿಯೋ ನಿರ್ಮಿಸಿ, ಯೂ ಟ್ಯೂಬ್ ಚಾನೆಲ್ ಆರಂಭಿಸುವ ₹16 ಲಕ್ಷದ ಯೋಜನೆ ತಯಾರಿಸಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗೆ ಅಂಜಿ ಯೋಜನೆಯನ್ನು ಕೈಬಿಟ್ಟಿದ್ದೆ. ಈಗ ಮತ್ತೆ ಚಾಲನೆ ನೀಡಲಾಗುವುದು’ ಎಂದರು.

‘ರಂಗಾಯಣವು ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ. ಇಲ್ಲಿರುವ 15 ಕಲಾವಿದರು ಅದಕ್ಕೆ ಬದ್ದರಾಗಿರಬೇಕು. ಈ ಕ್ಷೇತ್ರವೂ ರಾಜಕೀಯದಿಂದ ಹೊರತಾಗಿಲ್ಲ. ಹಿಂದಿನ  ಕಲಾವಿದರು ಹೊರಗಿನವರ ಕುಮ್ಮಕ್ಕಿನಿಂದ ರಾಜೀನಾಮೆ ಸಲ್ಲಿಸಿದ್ದರು. ಈ ರೀತಿ ರಾಜೀನಾಮೆ ಸಲ್ಲಿಸುವ ಕಲಾವಿದರು, ಬಳಿಕ ತಪ್ಪು ಮಾಡಿದೆವು ನಮ್ಮನ್ನು ರಂಗಾಯಣದಿಂದ ತೆಗೆಯಬೇಡಿ ಎಂದು ಬೇಡಿಕೊಳ್ಳುತ್ತಾರೆ’ ಎಂದು ಕಲಾವಿದರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದರು.

ಜಿ.ವಿ. ಹಿರೇಮಠ, ಅನಿಲ ಕವಿಶೆಟ್ಟಿ ಹಾಗೂ ಸದಾಶಿವ ಚೌಶೆಟ್ಟಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.